ವಿದ್ಯಾರ್ಥಿಗಳು ಡಾ.ಅಂಬೇಡ್ಕರರ ಆದರ್ಶ ಇಟ್ಟುಕೊಳ್ಳಿ : ಪ್ರಗತಿಪರ ಚಿಂತಕ, ಲೇಖಕ ರಂಜಾನ್ ದರ್ಗಾ

ವಿಜಯಪುರ : ಭಾರತದ ಬಹುಸಂಖ್ಯಾತ ದಲಿತರು, ಶೋಷಿತರು, ವಿಶೇಷವಾಗಿ ಮಹಿಳೆಯರು ಇವತ್ತು ಗೌರವಯುತವಾಗಿ ಬದುಕುತ್ತಿದ್ದಾರೆಂದರೆ ಅದಕ್ಕೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಮತ್ತು ಸಂವಿಧಾನ ಕಾರಣ ಎಂಬುದನ್ನು ಯಾರೂ ಮರೆಮಾಚಲಾಗದು ಎಂದು ಪ್ರಗತಿಪರ ಚಿಂತಕ, ಲೇಖಕ ರಂಜಾನ್ ದರ್ಗಾ ಹೇಳಿದರು.
ನಗರದ ತೊರವಿ ರಸ್ತೆಯ ಡಾ. ಅಂಬೇಡ್ಕರ್ ಎಜ್ಯುಕೇಶನಲ್ ಅಸೋಸಿಯೇಶನ್‌ನ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಸಚಿವ, ಕ್ರಾಂತಿಕಾರಿ ದಲಿತ ನಾಯಕ ಬಿ. ಬಸವಲಿಂಗಪ್ಪ ಅವರ ೧೦೧ನೆಯ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಅಂಬೇಡ್ಕರ್ ಅವರ ಬಾಲ್ಯ ಮತ್ತು ವಿದ್ಯಾರ್ಥಿಜೀವನ ಸುಖಮಯವಾಗಿರಲಿಲ್ಲ. ಕಠಿಣ ಪರಿಶ್ರಮದಿಂದ ಜಗತ್ತಿನ ಅತ್ಯಂತ ವಿದ್ಯಾವಂತರಲ್ಲಿ ಒಬ್ಬರಾದರು. ಅವರ ಜನ್ಮದಿನವನ್ನು ವಿಶ್ವ ಜ್ಞಾನದಿನವನ್ನಾಗಿ ಘೋಷಿಸಲಾಗಿದೆ. ಭಾರತದ ಸಂವಿಧಾನ ಬರೆಯುವ ಜವಾಬ್ದಾರಿ ಅವರ ಹೆಗಲಿಗೆ ಬಂತು. ಇಡೀ ಸಂವಿಧಾನಸಭೆಯಲ್ಲಿ ಅವರಷ್ಟು ಪದವಿಗಳು ಯಾರ ಬಳಿಯೂ ಇರಲಿಲ್ಲ. ವಿದ್ಯಾರ್ಥಿಗಳು ಡಾ. ಅಂಬೇಡ್ಕರ್ ಅವರನ್ನು ಆದರ್ಶವನ್ನಾಗಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.
ಅಲ್-ಅಮೀನ ಮೆಡಿಕಲ್ ಕಾಲೇಜು ಟ್ರಸ್ಟಿ ಡಾ. ರಿಯಾಜ ಫಾರೂಖಿ, ಡಿ. ದೇವರಾಜ ಅರಸು ವಿಚಾರಜಾಗೃತಿ ಸಂಘದ ಅಧ್ಯಕ್ಷ ಅರವಿಂದ ಹಿರೊಳ್ಳಿ ವಕೀಲರು, ಸಮಾಜವಾದಿ ನಾಯಕ ಅಪ್ಪಾಸಾಹೇಬ ಯರನಾಳ, ಅಂಬೇಡ್ಕರವಾದಿ ಲೇಖಕ ಅನಿಲ ಹೊಸಮನಿ ಮಾತನಾಡಿ, ದಲಿತರ ಅಭ್ಯುದಯಕ್ಕೆ ಬಿ.ಬಸವಲಿಂಗಪ್ಪ ಅವರ ಕೊಡುಗೆಯನ್ನು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ತುಕಾರಾಮ ಚಂಚಲಕರ ಅವರು ಮಾತನಾಡಿದರು.
ಪ್ರೌಢಶಾಲೆಯ ಮುಖ್ಯ ಗುರುಗಳಾದ ಸಿದ್ದಪ್ಪ ಗುದಗೆನ್ನವರ ವಂದಿಸಿದರು. ಸಂಸ್ಥೆಯ ಅಧ್ಯಕ್ಷ ನಟರಾಜ ಚಂಚಲಕರ, ಉಪಾಧ್ಯಕ್ಷರಾದ ಶ್ರೀಮತಿ ಸಿಂಧೂ ಚಂಚಲಕರ, ನಿವೃತ್ತ ಪ್ರಾಧ್ಯಾಪಕರಾದ ಎಸ್.ಆರ್. ಕಟ್ಟಿ, ಸಿದ್ಧಾರ್ಥ ಹಾಸ್ಟೇಲ್, ಸಂಸ್ಥೆಯ ಪಿಯು ಮತ್ತು ಪದವಿ ವಿಭಾಗದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮತ್ತು ಸಿಬ್ಬಂದಿವರ್ಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪಿಯು ಕಾಲೇಜಿನ ಪ್ರಿನ್ಸಿಪಾಲರಾದ ಶ್ರೀಮತಿ ಅಶ್ವಿನಿ ನಾಯಕ ಅವರ ಸ್ವಾಗತಿಸಿ ನಿರೂಪಿಸಿದರು.