ಮೀಸಲಾತಿ ನಾವು ಕೇಳಿ ತಗೆದುಕೊಂಡರೆ ಅದು ಭಿಕ್ಷೆ

Feb 27, 2025 - 22:26
 0
ಮೀಸಲಾತಿ ನಾವು ಕೇಳಿ ತಗೆದುಕೊಂಡರೆ ಅದು ಭಿಕ್ಷೆ

ಮುದ್ದೇಬಿಹಾಳ : ೭೫ ವರ್ಷಗಳಿಂದ ಮೀಸಲಾತಿ ಕೊಡಿ ಎಂದು ನಾವು ಬಂದಿರುವ ಸರ್ಕಾರಗಳನ್ನು ಕೇಳುತ್ತಲೇ ಇದ್ದೇವೆ. ಮೀಸಲಾತಿ ನಾವು ಕೇಳಿ ಪಡೆದರೆ ಅದು ಭಿಕ್ಷೆ. ನ್ಯಾಯಯುತವಾಗಿ ಅದು ಹೋರಾಟದಿಂದ ಬಂದಾಗ ಹಕ್ಕು. ನಿಮ್ಮಲ್ಲಿ ಮತದಾನದ ಶಕ್ತಿ ಇದೆ.ಅದನ್ನು ಬಳಸಿಕೊಂಡು ಸರಕಾರಗಳಿಗೆ ಪಾಠ ಕಲಿಸಬೇಕು ಎಂದು ಮಾಜಿ ಸಚಿವ ಆಲ್ಕೋಡ ಹಣಮಂತಪ್ಪ ಹೇಳಿದರು.            

ಪಟ್ಟಣದ ಏಪಿಎಂಸಿಯ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕರ್ನಾಟಕ ಮಾದಿಗ ಜನಸಂಘ ಹೋರಾಟ ಸಮಿತಿ ಪದಾಧಿಕಾರಿಗಳ ಪದಗ್ರಹಣ,ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.                

ಶೋಷಿತ ಸಮಾಜದವರು ಮತವನ್ನು ಮಾರಾಟ ಮಾಡಿಕೊಳ್ಳಬೇಡಿ.ನಿಮ್ಮನ್ನೇ ನೀವು ಶೋಷಣೆ ಮಾಡಿಕೊಳ್ಳುತ್ತಿರುವಾಗ ನ್ಯಾಯ ಹೇಗೆ ಸಿಗಲು ಸಾಧ್ಯವಿದೆ.ನಿಮ್ಮ ದಡ್ಡತನ, ಮೂರ್ಖತನ, ಅವಿವೇಕತನದಿಂದ ಇವೆಲ್ಲ ಆಗುತ್ತಿವೆ.ಗ್ರಾಮೀಣ ಮಟ್ಟದಲ್ಲಿ ಹೋಗಿ ಜಾಗೃತಿ ಮೂಡಿಸಬೇಕು.ಶೋಷಿತ ಸಮಾಜದವರು ಕುಡಿತವನ್ನು ಬಿಡಬೇಕು.ಕುಡಿದು ಓಟು ಮಾರಾಟ ಮಾಡಿಕೊಂಡರೆ ಅದು ಬಸವಣ್ಣ, ಬುದ್ದ,ಅಂಬೇಡ್ಕರ್‌ಗೆ ಮಾಡುವ ಅಪಮಾನವಾಗಿದೆ ಎಂದು ಹೇಳಿದರು.                

ಸಂಘ ಕಟ್ಟಿರುವುದರ ಉದ್ದೇಶ ಸಮಾಜವನ್ನು ಸರಿದಾರಿಗೆ ಕೊಂಡೊಯ್ಯುವುದಾಗಿದೆ.ಸರಕಾರ ಹೆದರುವುದು ನಿಮ್ಮ ಮತದಾನದ ಶಕ್ತಿಯಿಂದ.ಅದರ ಶಕ್ತಿಯೇ ನಿಮಗೆ ಗೊತ್ತಿಲ್ಲ.ನಮ್ಮವರ ವಿರುದ್ಧ ನಮ್ಮವರನ್ನೇ ಎತ್ತಿ ಕಟ್ಟುತ್ತಾರೆ. ಕುಡಿದು, ತಿನ್ನಿಸಿ ನಿಮ್ಮ ಮತಗಳನ್ನು ಕೊಂಡುಕೊಳ್ಳುತ್ತಾರೆ.ಅದಕ್ಕೆ ಆಸ್ಪದ ನೀಡದೇ ಜಾಗೃತಿಗೊಳ್ಳಬೇಕಿದೆ ಎಂದು ಹೇಳಿದರು.          

 ಮಾಜಿ ಶಾಸಕ ಹಾಲರವಿ ವೀರಭದ್ರಪ್ಪ ಮಾತನಾಡಿ, ಸಮಾಜದಲ್ಲಿ ಶಿಸ್ತು, ಸಂಘಟನೆ ಅಗತ್ಯವಾಗಿದೆ. ಸಮಾಜದ ಬಾಂಧವರು ಮಕ್ಕಳಿಗೆ ಶೈಕ್ಷಣಿಕವಾಗಿ ಜಾಗೃತಿ ಮೂಡಿಸಿದಾಗ ಮಾತ್ರ ನಮ್ಮ ಹಕ್ಕು ಪಡೆದುಕೊಳ್ಳಲು ಸಾಧ್ಯವಿದೆ ಎಂದರು.                  

 ಕರ್ನಾಟಕ ಮಾದಿಗ ಜನಸಂಘದ ರಾಜ್ಯಾಧ್ಯಕ್ಷ ಪರಶುರಾಮ ರೋಣಿಹಾಳ, ಮುಖಂಡರಾದ ಹರೀಶ ನಾಟೀಕಾರ, ಡಿ.ಬಿ.ಮುದೂರ, ಹಣಮಂತ ಬಿರಾದಾರ ಮೊದಲಾದವರು ಮಾತನಾಡಿದರು.            ಮುಖಂಡರಾದ ಸೋಮನಗೌಡ ಪಾಟೀಲ ನಡಹಳ್ಳಿ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಸೋಮನಗೌಡ ಬಿರಾದಾರ, ಹಣಮಂತ ನಾಯ್ಕಮಕ್ಕಳ, ರವಿ ನಾಯಕ, ಶಂಕರಗೌಡ ಶಿವಣಗಿ,ಬಸವರಾಜ ಪೂಜಾರಿ, ಸಿ.ಜಿ.ವಿಜಯಕರ್, ಮುತ್ತಪ್ಪ ಮಾದರ, ಸುಭಾಷ ಕಟ್ಟಿಮನಿ, ಭೀಮನಗೌಡ ಬಿರಾದಾರ, ಅಶೋಕ ಇಲಕಲ್, ಪರಶುರಾಮ ನಾಲತವಾಡ, ಭಗವಂತ ಕಬಾಡೆ ಇದ್ದರು.                     ತಾಲ್ಲೂಕಿನ ಸಮಾಜದ ಹಿರಿಯರಿಗೆ ಗೌರವ ಸನ್ಮಾನ ಮಾಡಲಾಯಿತು. 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.