ಗೃಹಲಕ್ಷ್ಮಿ ಯೋಜನೆ ಮಹಿಳೆಯರ ಬದುಕಿನಲ್ಲಿ ಹೊಸತನ ತಂದಿದೆ : ಶ್ರೀಶೈಲ ಕೌಲಗಿ

ಸಿಂದಗಿ: ಗೃಹಲಕ್ಷ್ಮಿ ಹಣದಿಂದ ಬದುಕು ಕಟ್ಟಿಕೊಂಡವರ ಯಶೋಗಾಥೆ ಜನರಿಗೆ ತಿಳಿಯುವಂತಾಗಬೇಕು. ಇದರಿಂದಾಗಿ ಸರಕಾರದ ಗೃಹಲಕ್ಷ್ಮಿ ಯೋಜನೆ ಮಹಿಳೆಯರ ಬದುಕಿನಲ್ಲಿ ಹೊಸತನ ತಂದಿದೆ ಎಂಬುದನ್ನು ಜನರಿಗೆ ತಿಳಿಸುವಂತಾಗಬೇಕು ಎಂದು ಸಿಂದಗಿ ತಾಲೂಕ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶ್ರೀಶೈಲ್ ಕೌಲಗಿ ಅಭಿಪ್ರಾಯಪಟ್ಟರು.
ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಗಣಕಯಂತ್ರ ಚಾಲಿತ ತೂಕದ ಯಂತ್ರಗಳನ್ನು ಬಳಸಬೇಕೆಂಬ ಕಡ್ಡಾಯ ನಿಯಮವಿದ್ದರೂ ತಾಲೂಕಿನಾದ್ಯಂತ ಹಲವಾರು ಪಡಿತರ ನ್ಯಾಯ ಬೆಲೆ ಅಂಗಡಿಕಾರರು ಅದನ್ನು ಪಾಲಿಸುತ್ತಿಲ್ಲ ಅಂತಹ ಅಂಗಡಿಕಾರರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ತಾಪಂ ಇಒ ರಾಮು ಅಗ್ನಿ ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಗ್ಯಾರಂಟಿ ಯೋಜನೆಯ ಸದಸ್ಯ ಸಾಹೇಬಪಟೇಲ್ ಅವಟಿ ಮಾತನಾಡಿ, ಪಡಿತರ ಧಾನ್ಯದ ತೂಕದಲ್ಲಿ ಮೋಸವಾಗುತ್ತಿದೆ. ಹಾಗೆಯೇ ಸರ್ಕಾರದಿಂದ ಪಡಿತರಂಗಡಿದಾರರಿಗೆ ಪಡಿತರ ಹಂಚಿಕೆಯಾದ ದಿನದಿಂದ ೨೦ದಿನಗಳವರೆಗೆ ದಿನಸಿ ಹಂಚಬೇಕೆನ್ನುವ ನಿಯಮವಿದ್ದರೂ ಒಂದೆರಡು ದಿವಸ ದವಸವನ್ನು ಹಂಚುತ್ತಾರೆ. ಬಳಿಕ ಬಂದ ಪಡಿತರ ಗ್ರಾಹಕರಿಗೆ ಪಡಿತರ ಮುಗಿದು ಹೋಗಿದೆ ಎನ್ನುವ ಸಿದ್ಧ ಉತ್ತರ ಅಂಗಡಿಕಾರರಿಂದ ಕೇಳಿ ಬರುತ್ತದೆ. ಇಂತಹ ಪಡಿತರ ಅಂಗಡಿಗಳ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ನಾಗರಿಕ ಆಹಾರ ಸರಬರಾಜು ಇಲಾಖೆಯ ಅಧಿಕಾರಿ ವಿದ್ಯಾ ಹಿಪ್ಪರಗಿ, ಪಡಿತರ ಅಂಗಡಿದಾರರಿಗೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಲಾಗಿದೆ. ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರ, ತಾಲೂಕ ಪಂಚಾಯತ್ ಇಒ ಅವರ ನೇತೃತ್ವದಲ್ಲಿ ತಾಲೂಕಿನಲ್ಲಿರುವ ೭೪ ಪಡಿತರ ಹಂಚಿಕೆದಾರರ ಸಭೆ ಕರೆದು ಕಟ್ಟುನಿಟ್ಟಿನ ಆದೇಶ ಮಾಡಲಾಗುವುದು ಎಂದು ಉತ್ತರಿಸಿದರು.
ತಾಲೂಕಿನಲ್ಲಿ ಒಟ್ಟು ೩೭೧೬೬ ಪಡಿತರ ಚೀಟಿಗಳಿದ್ದು, ಅವುಗಳಲ್ಲಿ ೩೭೦೮೨ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದು, ೮೪ ಕಾರ್ಡ್ದಾರರು ವಿವಿಧ ಕಾರಣಗಳಿಂದ ಗೃಹಲಕ್ಷ್ಮಿ ಯೋಜನೆಯಿಂದ ವಂಚಿತರಾಗಿದ್ದು ಇದುವರೆಗೆ ಶೇ.೯೯ರಷ್ಟು ಗುರಿ ತಲುಪಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಂಭುಲಿಂಗ ಹಿರೇಮಠ ಮಾಹಿತಿ ನೀಡಿದರು.
ಹೆಸ್ಕಾಂ ಎಇಇ ಚಂದ್ರಕಾಂತ ನಾಯಕ್ ಮಾತನಾಡಿ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಹೊಸ ಮೀಟರಗಳನ್ನು ಅಳವಡಿಸಲಾಗಿದೆ. ಗ್ರಾಹಕರ ವಾರ್ಷಿಕ ಸರಾಸರಿ ವಿದ್ಯುತ್ ಬಳಕೆಯ ಆಧಾರದ ಮೇಲೆ ಕರೆಂಟ್ ಬಿಲ್ ನಿರ್ಧರಿಸಲಾಗುತ್ತದೆ. ಅದಕ್ಕಿಂತಲೂ ಹೆಚ್ಚಿಗೆ ವಿದ್ಯುತ್ ಬಳಸಿದರೆ ಹೆಚ್ಚಿನ ಬಿಲ್ ಕಟ್ಟಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.
ಗ್ಯಾರಂಟಿ ಯೋಜನೆ ಬಂದ ನಂತರ ಸಾರಿಗೆ ಇಲಾಖೆಗೆ ಶೇ.೨೦-೩೦ರಷ್ಟು ಆದಾಯ ಹೆಚ್ಚಾಗಿದೆ. ಸಿಂದಗಿ ಡಿಪೋಗೆ ಏಳು ಬಸ್ಸುಗಳನ್ನು ಹೆಚ್ಚುರಿಯಾಗಿ ತರಿಸ್ಕೊಳ್ಳಲಾಗಿದ್ದು, ಆದ್ಯತೆ ಮೇರೆಗೆ ಹೆಚ್ಚಿನ ಬಸ್ಸುಗಳಿಗೆ ಬೇಡಿಕೆ ಸಲ್ಲಿಸಲಾಗುವುದು ಎಂದರು.
ಯುವನಿಧಿ ಯೋಜನೆಯಡಿ ಫಲಾನುಭವಿಗಳ ನೋಂದಣಿಗಾಗಿ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು ಪೂರ್ಣ ಗುರಿ ತಲುಪಲು ಪ್ರಯತ್ನಿಸಲಾಗುವುದೆಂದರು.
ಈ ವೇಳೆ ಯುವನಿಧಿ ಬಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಇದೇ ಸಂದರ್ಭದಲ್ಲಿ ತಾಪಂ ಇಒ ರಾಮು ಅಗ್ನಿ, ಗ್ಯಾರಂಟಿ ಸಮಿತಿಯ ಸದಸ್ಯರಾದ ಎಮ್.ಎ.ಬೀಳಗಿ, ಸುನಂದಾ ಯಂಪೂರೆ, ಆರ್.ಎ.ಪಾಟೀಲ, ಸಾಹೇಬಪಟೇಲ್ ಅವಟಿ, ಪರಶುರಾಮ ಗೌಂಡಿ, ಸಿದ್ದಲಿಂಗಪ್ಪ ಗುಂಡಾಪೂರ, ಸಿದ್ರಾಮಪ್ಪ ಕಲ್ಲೂರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು