ವೃಕ್ಷಥಾನ್ ಹೆರಿಟೇಜ್ ರನ್ ಯಶಸ್ಸಿಗೆ ಕಾರಣರಾದವರಿಗೆ ಸಚಿವ ಎಂ ಬಿ ಪಾಟೀಲ ಅಭಿನಂದನೆ

ವಿಜಯಪುರ: ವೃಕ್ಷ ಅಭಿಯಾನ ಮನೆಮನಗಳನ್ನು ತಲುಪಿದ್ದು, ಸಾರ್ವಜನಿಕರ ಸಹಭಾಗಿತ್ವದಿಂದಾಗಿ ಯಶಸ್ವಿಯಾಗಿ ಸಾಗುತ್ತಿರುವುದು ಹೆಮ್ಮೆಯ ವಿಷಯ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ರವಿವಾರ ನಗರದಲ್ಲಿ ನಡೆದ ವೃಕ್ಷಥಾನ್ ಹೆರಿಟೇಜ್ ರನ್ ಯಶಸ್ಸಿಗೆ ಕಾರಣರಾದವರಿಗೆ ಅಭಿನಂದನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಆಕಸ್ಮಿಕವಾಗಿ ಮತ್ತು ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾದ ವೃಕ್ಷ ಅಭಿಯಾನಕ್ಕೆ ನಂತರ ನಾನಾ ರೂಪುರೇಷೆ ನೀಡಿ ಜಿಲ್ಲಾದ್ಯಂತ ವಿಸ್ತರಿಸಲಾಯಿತು. ಪ್ರಾರಂಭದಲ್ಲಿ ನೀರಿನ ಸಮಸ್ಯೆ ಎದುರಾಗಿದ್ದ ಈ ಅಭಿಯಾನಕ್ಕೆ ನಂತರ ಕೈಗೊಂಡ ನೀರಾವರಿ ಯೋಜನೆಗಳಿಂದಾಗಿ ಇಡೀ ಬಸವನಾಡಿನಲ್ಲಿ ಹೆಚ್ಚಿನ ವೇಗ ಸಿಕ್ಕಿತು. ಜನರು ಜಾಗೃತರಾಗಿ ಸ್ವಯಂಪ್ರೇರಿತರಾಗಿ ತಮ್ಮ ಮನೆ, ಹೊಲಗಳು, ಶಾಲೆಗಳ ಆವರಣಗಳು, ಸ್ಮಶಾನ ಸೇರಿದಂತೆ ಖಾಲಿ ಜಾಗದಲ್ಲಿ ಸಸಿ ನೆಟ್ಟರು. ಅಧಿಕಾರಿಗಳೂ ಇದಕ್ಕೆ ಸಂಪೂರ್ಣ ಸಹಕಾರ ನೀಡಿದರು. ಈಗ ಬಸವನಾಡಿನ ಪ್ರತಿಯೊಂದು ಮನೆ, ಪ್ರತಿಯೊಬ್ಬರ ಮನದಲ್ಲಿ ಮತ್ತು ಪಕ್ಷಾತೀತವಾಗಿ ಪರಿಸರ ಹಾಗೂ ಪ್ರಾಚೀನ ಸ್ಮಾರಕಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಉಂಟಾಗಿದ್ದು, ಸ್ವಯಂ ಪ್ರೇರಿತರಾಗಿ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಈ ಮುಂಚೆ ಜಿಲ್ಲೆಯಲ್ಲಿ ಕೇವಲ ಶೇ. ೦.೧೭ರಷ್ಟಿದ್ದ ಅರಣ್ಯ ಪ್ರದೇಶ ಸರ್ವ ಜನರ ಸಹಭಾಗಿತ್ವದಿಂದಾಗಿ ಇಂದ ಸುಮಾರು ಶೇ. ೨ ರಿಂದ ಶೇ. ೨.೫೦ ವರೆಗೆ ತಲುಪಿದೆ. ಇದು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸರಾಸರಿ ತಲುಪಲು ಇನ್ನೂ ಹಲವಾರು ವರ್ಷಗಳೇ ಬೇಕಾಗಲಿವೆ. ಹೀಗಾಗಿ ಈಗ ಬಾಕಿ ಉಳಿದಿರುವ ಖಾಲಿ ಸ್ಥಳಗಳನ್ನು ಗುರುತಿಸಿ ಸಸಿಗಳನ್ನು ನೆಡುವ ಅಗತ್ಯವಿದೆ. ಈ ಕಾರ್ಯ ನಿರಂತರವಾಗಿರಬೇಕು. ಮುಂದಿನ ೧೫ ದಿನಗಳಲ್ಲಿ ಹೊರ್ತಿ ಭಾಗದ ೧೬ ಕೆರೆಗಳನ್ನು ಭರ್ತಿ ಮಾಡುವ ಕಾರ್ಯ ಪ್ರಾರಂಭವಾಗಲಿದ್ದು, ಇದರಿಂದ ಆ ಭಾಗದಲ್ಲಿಯೂ ಅರಣ್ಯ ಬೆಳೆಸಲು ಅನುಕೂಲವಾಗಲಿದೆ ಎಂದು ಸಚಿವರು ಹೇಳಿದರು.
ಈ ಬಾರಿಯ ಹೆರಿಟೇಜ್ ರನ್ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲ ಅಧಿಕಾರಿಗಳು ಮತ್ತು ವೃಕ್ಷಥಾನ ಹೆರಿಟೆಜ್ ರನ್ ಸಮಿತಿ ಸತತ ಸಭೆಗಳು ಮತ್ತು ಶಿಸ್ತುಬದ್ಧ ಯೋಜನೆ, ಮಾಧ್ಯಮಗಳ ಪ್ರಚಾರ, ಪ್ರಾಯೋಜಕರು ಹಾಗೂ ಸಾರ್ವಜನಿಕರ ಸಹಕಾರದಿಂದಾಗಿ ಯಶಸ್ವಿಯಾಗಿದೆ. ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಸಚಿವರು ತಿಳಿಸಿದರು.
ಇದೇ ವೇಳೆ ವೃಕ್ಷಥಾನ್ ಹೆರಿಟೇಜ್ ರನ್- ೨೦೨೪ ಯಶಸ್ಸಿಗಿ ಕಾರಣರಾದ ಮುಖ್ಯ ಪ್ರಾಯೋಜಕರು, ಪ್ರಾಯೋಜಕರು, ಹೈಡ್ರೇಷನ್ ಪಾಯಿಂಟ್ಸ್ ಪ್ರಾಯೋಜಕರು, ನಾನಾ ಇಲಾಖೆಗಳ ಅಧಿಕಾರಿಗಳು, ಹೆರಿಟೇಜ್ ರನ್ ಸಮಿತಿಯ ಪದಾಧಿಕಾರಿಗಳನ್ನು ಸಚಿವರು ನೆನಪಿನ ಕಾಣಿಕೆ ಮತ್ತು ಸಸಿ ನೀಡುವ ಮೂಲಕ ಅಭಿನಂದಿಸಿದರು. ಇದೇ ವೇಳೆ ಸಚಿವ ಎಂ. ಬಿ. ಪಾಟೀಲ ಅವರಿಗೆ ಬೆಂಗಳೂರು ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿ ಲಭಿಸಿದ ವೃಕ್ಷಥಾನ್ ಸಮಿತಿ ಪದಾಧಿಕಾರಿಗಳು ಸಚಿವರನ್ನು ಅಭಿನಂದಿಸಿದರು. ವೃಕ್ಷಥಾನ ಹೆರಿಟೇಜ್ ರನ್ ಸಮಿತಿ ಸಂಚಾಲಕ ಮುರುಗೇಶ ಪಟ್ಟಣಶೆಟ್ಟಿ ನಿರೂಪಿಸಿದರು.
ಸಾರ್ವಜನಿಕರಿಂದ ಸಂಪೂರ್ಣ ಸಹಕಾರ : ಡಾ.ಮಹಾಂತೇಶ
ಒಂದು ಸಮಯದಲ್ಲಿ ಸಸಿಗಳ ಮಾರಾಟಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಗಳಲ್ಲಿ ಡಂಗುರ ಹೊಡೆಸುತ್ತಿದ್ದರು. ಆದರೆ, ಈಗ ಜನರಲ್ಲಿ ಜಾಗೃತಿ ಉಂಟಾಗಿರುವುದರಿAದ ಸಸಿ ಖರೀದಿಗೆ ನರ್ಸರಿಳಿಗೆ ಆಗಮಿಸುವ ಜನರನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಹರಸಾಹಸ ಪಡುವಂತಾಗಿದೆ. ಈ ಬಾರಿಯೂ ಹೆರಿಟೇಜ್ ರನ್ ಗೆ ಪ್ರಾಯೋಜಕರು, ಸಾರ್ವಜನಿಕರಿಂದ ಸಂಪೂರ್ಣ ಸಹಕಾರ ಸಿಕ್ಜಿದೆ. ಇಲ್ಲಿವ ಓಟಗಾರರು ಮುಂಬರುವ ದಿನಗಳಲ್ಲಿ ಅಂತಾರಾಷ್ಟ್ರೀಯ ಮ್ಯಾರಾಥಾನ್ ಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಡಾ. ಮಹಾಂತೇಶ ಬಿರಾದಾರ ಮಾತನಾಡಿ, ವಿಶ್ವಾಸ ವ್ಯಕ್ತಪಡಿಸಿದರು.
ವಿಜಯಪುರ ಪಾರಂಪರಿಕ ಜಿಲ್ಲೆ : ಡಿಸಿ :
ವಿಜಯಪುರ ಪಾರಂಪರಿಕ ಜಿಲ್ಲೆ. ಹಸಿರಿನ ವಿಸ್ತೀರ್ಣ ಹೆಚ್ಚಿಸಲು ಸಚಿವ ಎಂ. ಬಿ. ಪಾಟೀಲ ನೀರಾವರಿ ಯೋಜನೆ, ಕೋಟಿ ವೃಕ್ಷ ಅಭಿಯಾನದ ಮೂಲಕ ಪ್ರಾರಂಭಿಸಿದ ಪಾರಂಪರಿಕ ಓಟದ ಈಗ ಜನರಲ್ಲಿ ಬಹಳ ಜಾಗೃತಿ ಮೂಡಿಸಿದೆ. ಈ ಬಾರಿ ವೃಕ್ಷಥಾನ್ ಹೆರಿಟೇಜ್ ರನ್ ಅತ್ಯಂತ ಶಿಸ್ತುಬದ್ಧವಾಗಿ ನಡೆದಿದೆ. ಬೇರೆ ಹೆಸರಾಂತ ಮ್ಯಾರಾಥಾನ್ ಗಳಿಗೆ ಹೋಲಿಸಿದರೆ ವೃಕ್ಷಥಾನ್ ನಲ್ಲಿ ಒಂದೂ ಸಣ್ಣ ಸಮಸ್ಯೆ ಎದುರಾಗಿಲ್ಲ. ಈಗ ಜಿಲ್ಲೆಯಲ್ಲಿ ಹಸಿರು ಪ್ರದೇಶ ವಿಸ್ತರಿಸುತ್ತಿದೆ. ಜೀವವೈವಿದ್ಯತೆಗೆ ಪ್ರೋತ್ಸಾಹ ಸಿಗುತ್ತಿದೆ. ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಹೆಸರಿನಲ್ಲಿರುವ ಮಮದಾಪುರ ಅರಣ್ಯ ಪ್ರದೇಶ ಇತರರಿಗೆ ಮಾದರಿಯಾಗಿದೆ. ಅಧಿಕಾರಿಗಳು ಇನ್ನು ಮುಂದೆಯೂ ಕೂಡ ಈ ನಿಟ್ಟಿನಲ್ಲಿ ಕೈ ಜೋಡಿಸಬೇಕು. ವೃಕ್ಷಥಾನ್ ಸಮಿತಿಯವರು ಹಗಲಿರುಳು ಕೆಲಸ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ ಹೇಳಿದರು.
ಅರಣ್ಯೀಕರಣಕ್ಕೆ ಕೈ ಜೋಡಿಸೋಣ : ಸಿಇಓ :
ವೃಕ್ಷಥಾನ್ ಕೇವಲ ಓಟ ಮಾತ್ರವಲ್ಲ. ಇದು ಪರಿಸರ, ಪ್ರಾಚೀನ ಸ್ಮಾರಕ ಸಂರಕ್ಷಣೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿರುವ ಕಾರ್ಯವಾಗಿದೆ. ಈ ಬಾರಿ ೧೦ ಸಾವಿರ ಓಟಗಾರರು ಭಾಗವಹಿಸಿದ್ದು ಸಾಮಾನ್ಯ ಸಂಗತಿಯಲ್ಲ. ಅಧಿಕಾರಿಗಳು ಕೂಡ ಕಚೇರಿಗಳ ಖಾಲಿ ಜಾಗದಲ್ಲಿ ಸಸಿ ನೆಟ್ಟು ಅರಣ್ಯೀಕರಣಕ್ಕೆ ಕೈ ಜೋಡಿಸೋಣ. ವಿಜಯಪುರವನ್ನು ಹಸಿರು ನಗರವನ್ನಾಗಿ ಮಾಡಲು ಪಣ ತೊಡೋಣ ಎಂದು ಜಿ. ಪಂ. ಸಿಇಓ ರಿಷಿ ಆನಂದ ಹೇಳಿದರು.