ವುಮೆನ್ ಮೀಡಿಯಾ ಕ್ಲಬ್ ಸಮಾಜಕ್ಕೆ ಕೊಡುಗೆ ನೀಡುವಂತಾಗಲಿ : ಗೀತಾ ನಾಗರಾಜು

Jan 21, 2025 - 22:48
 0
ವುಮೆನ್ ಮೀಡಿಯಾ ಕ್ಲಬ್ ಸಮಾಜಕ್ಕೆ ಕೊಡುಗೆ ನೀಡುವಂತಾಗಲಿ :  ಗೀತಾ ನಾಗರಾಜು
ವಿಜಯಪುರ: ವುಮನ್ ಮೀಡಿಯಾ ಕ್ಲಬ್ ಕೇವಲ ವಿಭಾಗ ಮತ್ತು ವಿಶ್ವವಿದ್ಯಾನಿಲಯಕ್ಕೆ ಸೀಮಿತವಾಗಿರದೇ ಇದು ಸಮಾಜಕ್ಕೆ ಕೊಡುಗೆ ನೀಡುವಂತಾಗಬೇಕು  ಎಂದು ಕೆನಡಾದ ಟೊರೊಂಟೊನ ಸಂವಹನ ತಜ್ಞೆ ಗೀತಾ ನಾಗರಾಜು ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಮಂಗಳವಾರ ಆಯೋಜಿಸಿದ್ದ "ವುಮೆನ್ ಮೀಡಿಯಾ ಕ್ಲಬ್" ಉದ್ಘಾಟಿಸಿ ಅವರು ಮಾತನಾಡಿದರು.
ವುಮನ್ ಮೀಡಿಯಾ ಕ್ಲಬ್ ಮಹಿಳೆಯರಿಗೆ ತಮ್ಮ ಸಾಮರ್ಥ್ಯವನ್ನು ಅರಿತು, ಸಮಾಜದಲ್ಲಿ ಸ್ವತಂತ್ರವಾಗಿ ಮತ್ತು ಯಶಸ್ವಿಯಾಗಿ ಬದುಕಲು ಸಹಾಯ ಮಾಡಬೇಕು. ತರಬೇತಿಗಳು, ಕಾರ್ಯಾಗಾರಗಳು ಮತ್ತು ಜಾಗೃತಿ ಕಾರ್ಯಕ್ರಮಗಳ ಮೂಲಕ ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಬೆಳೆಸಬೇಕು. ಅವರು ಸ್ವಚ್ಛತೆ, ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ತಮ್ಮ ಕುಟುಂಬ ಹಾಗೂ ಸಮುದಾಯದಲ್ಲಿ ದಾರಿದೀಪವಾಗಿ ಕೆಲಸ ಮಾಡಲು ಪ್ರೇರಣೆ ನೀಡಬೇಕು ಎಂದರು.
ಇದೇ ಸಂದರ್ಭದಲ್ಲಿ ಕೆನಡಾದ ಟೊರೊಂಟೊನ ಬಿ.ವಿ ನಾಗ್ ಕಮ್ಯುನಿಕೇಶನ್ಸ್ನ ಅಧ್ಯಕ್ಷ ಹಾಗೂ ಇಂಡಿಯಾ ಅಬ್ಸರ್ವರ್ ಪತ್ರಿಕೆಯ ಸಂಪಾದಕ ಬಿ.ವಿ ನಾಗರಾಜು ಮಾತನಾಡಿ, ವುಮನ್ ಮೀಡಿಯಾ ಕ್ಲಬ್ ಮಹಿಳೆಯರಿಗೆ ಮಾತ್ರವಲ್ಲ, ಮಕ್ಕಳಿಗೂ ಶಿಸ್ತಿನ ಹಾದಿಯಲ್ಲಿ ಪ್ರೇರಣೆ ನೀಡಲು ಕಾರ್ಯನಿರ್ವಹಿಸಬೇಕು. ದೌರ್ಜನ್ಯದ ಬಗ್ಗೆ ಅರಿವು ಮೂಡಿಸಲು, ಸ್ವಚ್ಛತಾ ಅಭಿಯಾನ, ಪರಿಸರ ಸಂರಕ್ಷಣೆಯ ಕಾರ್ಯಗಳು, ಹಾಗೂ ಶಿಷ್ಟಾಚಾರದ ಕುರಿತಾದ ಕಾರ್ಯಾಗಾರಗಳನ್ನು ಆಯೋಜಿಸಬೇಕು. ಇದರಿಂದ ಸಮಾಜದಲ್ಲಿ ಮಾನವೀಯತೆ ಮತ್ತು ಸಮಾನತೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಈ ಕಾರ್ಯಕ್ರಮಗಳು ಹೆಣ್ಣುಮಕ್ಕಳಿಗೆ ದಾರಿ ದೀಪವಾಗಿ, ತಮ್ಮ ಜೀವನವನ್ನು ಸದೃಢವಾಗಿ ರೂಪಿಸಲು ಸಹಾಯವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ತಹಮೀನಾ ಕೋಲಾರ ಮತ್ತು ಸಂದೀಪ ನಾಯಕ,  ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿಭಾಗದ ವಿದ್ಯಾರ್ಥಿನಿಯರಾದ ವಿದ್ಯಾ ಮೇಗಾಡಿ ಪ್ರಾರ್ಥನಾ ಗೀತೆ ಹಾಡಿದರು. ಸುನಂದಾ ಪಟ್ಟಣಶೆಟ್ಟಿ ಸ್ವಾಗತಿಸಿದರು. ಜ್ಯೋತಿ ಎಸ್ ಅತಿಥಿಗಳನ್ನು ಪರಿಚಯಿಸಿದರು. ಶಿಲ್ಪಾ ಪವಾರ ನಿರೂಪಿಸಿದರು ಹಾಗೂ ರಾಜೇಶ್ವರಿ ಮಲಕ್ಕೂಡ ವಂದಿಸಿದರು. 
ವಿದ್ಯಾರ್ಥಿನಿಯರು ತಮ್ಮ ಜೀವನದಲ್ಲಿ ಆದರ್ಶ ವ್ಯಕ್ತಿಗಳ ಆದರ್ಶಗಳನ್ನು ಅನುಸರಿಸಿ, ಆಧುನಿಕ ವಿಚಾರಧಾರೆಗಳನ್ನು ಅಳವಡಿಸಿಕೊಂಡು, ಅವರು ಮಾಡಿದ ಸಾಧನೆಯನ್ನು ಮೀರಿಸುವ ಪ್ರಯತ್ನ ಮಾಡಬೇಕು. ಪ್ರತಿಯೊಬ್ಬ ವಿದ್ಯಾರ್ಥಿನಿಯು ತನ್ನ ಸುತ್ತಲಿನ ಪ್ರಪಂಚವನ್ನು ವಿಸ್ತೃತವಾಗಿ ಅರಿಯಲು ಯತ್ನಿಸಬೇಕು. ಕೇವಲ ಒಂದೇ ವಿಷಯಕ್ಕೆ ಸೀಮಿತವಾಗದೇ, ಬೇರೆ ಬೇರೆ ವಿಷಯಗಳಲ್ಲಿ ಜ್ಞಾನವನ್ನು ಸಂಪಾದಿಸುವುದು ಅತ್ಯಗತ್ಯವಾಗಿದೆ.
-ಪ್ರೊ.ಓಂಕಾರ ಕಾಕಡೆ ಮುಖ್ಯಸ್ಥ, 
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.