ಗ್ಯಾರಂಟಿ ಯೋಜನೆಗಳ ಲಾಭ ಜಿಲ್ಲೆಯ ಫಲಾನುಭವಿಗಳಿಗೆ ದೊರಕಿಸಿ : ಜಿ.ಪಂ.ಸಿಇಓ ರಿಷಿ ಆನಂದ

Oct 7, 2024 - 03:35
 0
ಗ್ಯಾರಂಟಿ ಯೋಜನೆಗಳ ಲಾಭ ಜಿಲ್ಲೆಯ ಫಲಾನುಭವಿಗಳಿಗೆ ದೊರಕಿಸಿ : ಜಿ.ಪಂ.ಸಿಇಓ ರಿಷಿ ಆನಂದ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ  

ವಿಜಯಪುರ :  ಸರ್ಕಾರ ಜಾರಿಗೊಳಿಸಿರುವ ಮಹತ್ವಾಕಾಂಕ್ಷೆಯ ೫ ಗ್ಯಾರಂಟಿ ಯೋಜನೆಗಳ ಲಾಭ ಜಿಲ್ಲೆಯ ಅರ್ಹ ಎಲ್ಲ ಫಲಾನುಭವಿಗಳಿಗೆ ದೊರಕಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. 


ಶುಕ್ರವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಜಿಲ್ಲೆಯ ಗೃಹ ಲಕ್ಷ್ಮೀ ಯೋಜನೆಯು ಶೇ.೯೬ರಷ್ಟು ಪ್ರಗತಿ ಸಾಧಿಸಿದೆ. ಅನ್ನಭಾಗ್ಯ ಯೋಜನೆಯಡಿ ನಿಗದಿತ ಪ್ರಮಾಣದಲ್ಲಿ ಹಾಗೂ ಸಮಯಕ್ಕೆ ಸರಿಯಾಗಿ ಅಕ್ಕಿ ವಿತರಣೆ ಮಾಡಬೇಕು. ವಿತರಣೆಯಲ್ಲಿ ಲೋಪವೆಸಗುವ ಗ್ರಾಹಕರ ನ್ಯಾಯ ಬೆಲೆ ಅಂಗಡಿಗಳನ್ನು ಗುರುತಿಸಿ ಕಟ್ಟುನಿಟ್ಟಿನ ಸೂಚನ ನೀಡಿ, ಯಾವುದೇ ವ್ಯತ್ಯಯವಾಗದಂತೆ ಸಮರ್ಪಕವಾಗಿ ವಿತರಣೆ ಮಾಡಬೇಕು. ತಾಲೂಕಾ ಮಟ್ಟದಲ್ಲಿ ನಿಯಮಿತವಾಗಿ ಸಭೆಗಳನ್ನು ಮಾಡಿ ವ್ಯವಸ್ಥಿತವಾಗಿ ಯೋಜನೆ ಜಾರಿಗೊಳಿಸಲು ಕ್ರಮ ವಹಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ ಅವರು, ಯಾವುದೇ ಸಮಸ್ಯೆಗಳಿದ್ದಲ್ಲಿ ತುರ್ತಾಗಿ  ಗಮನಕ್ಕೆ ತರುವಂತೆ ಅವರು ಹೇಳಿದರು. 


ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಇಲಿಯಾಸ್ ಅಹ್ಮದ ಬೋರಾಮಣಿ ಬಿನ್ ಮಹಿಬೂಬಸಾಬ ಬೋರಾಮಣಿ ಅವರು ಮಾತನಾಡಿ,  ಸರ್ಕಾರದ ಮಹಾತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನ ಮಾಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ವ್ಯಾಪಕವಾಗಿ ತಿಳುವಳಿಕೆ ಮೂಡಿಸುವ ಮೂಲಕ ಯೋಜನೆಗಳ ಯಶಸ್ವಿಗೆ ಪ್ರಯತ್ನಿಸಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿಸುವಂತೆ ಅವರು ಕರೆ ನೀಡಿದರು. 


ಜಿಲ್ಲೆಯಲ್ಲಿ ೫ ಗ್ಯಾರಂಟಿ ಯೋಜನೆಗಳು ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಆದ ಪ್ರಗತಿಯನ್ನು ಅಧಿಕಾರಿಗಳು ವಿವರಿಸಿ, ಶಕ್ತಿ ಯೋಜನೆಯಡಿ ೮.೫೮ ಕೋಟಿ ಮಹಿಳೆಯರು ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸಿರುವುದಕ್ಕೆ ರೂ. ೨೬೪.೩೫ ಕೋಟಿ ಸರ್ಕಾರ ಅನುದಾನ ಒದಗಿಸಿದೆ. ಗೃಹಜ್ಯೋತಿ ಯೋಜನೆಯಡಿ ೪.೩೬ ಲಕ್ಷ ಕುಟುಂಬಗಳು ೨೦೦ ಯುನಿಟ್ಗಳವರೆಗೆ ಉಚಿತ ವಿದ್ಯುತ್ ಸೌಲಭ್ಯಕ್ಕಾಗಿ ರೂ. ೨೩೩.೬೧ ಕೋಟಿ ಅನ್ನಭಾಗ್ಯ ಯೋಜನೆಯಡಿ ರೂ. ೧೫.೮೪ ಲಕ್ಷ ಕುಟುಂಬಗಳಿಗೆ  ಉಚಿತವಾಗಿ ೫ ಕೆ.ಜಿ. ಅಕ್ಕಿ ಹಾಗೂ ೫ ಕೆ.ಜಿ. ಅಕ್ಕಿಯ ಮೊತ್ತವನ್ನು ಪಡೆದಿರುವುದಕ್ಕೆ ರೂ. ೩೨೨.೬೦ ಕೋಟಿ ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ಕುಟುಂಬದ ಯಜಮಾನಿಗೆ ರೂ. ೨೦೦೦/- ಗಳಂತೆ ೪.೮೨ ಲಕ್ಷ ಫಲಾನುಭವಿಗಳು ರೂ. ೧೦೦೧.೮೧ ಕೋಟಿ, ನಿರುದ್ಯೋಗಿ ಪದವಿ ಯುವಕರಿಗೆ ಪ್ರತಿ ತಿಂಗಳು ರೂ. ೩೦೦೦/- ಗಳಂತೆ, ಒಟ್ಟು ೧೭,೪೯೯ ಫಲಾನುಭವಿಗಳಿಗೆ ಹಾಗೂ ಡಿಪ್ಲೋಮಾ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು ರೂ. ೧೫೦೦/- ಗಳಂತೆ ೧೭೬ ಫಲಾನುಭವಿಗಳಿಗೆ ರೂ. ೫.೨೮ ಕೋಟಿ ಸರ್ಕಾರ ಅನುದಾನ ಒದಗಿಸಿದೆ ಎಂದು ಮಾಹಿತಿ ನೀಡಿದರು. 
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಎನ್.ಕೆ.ಗೋಠೆ ಗ್ಯಾರಂಟಿ ಯೋಜನೆಗಳ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳನ್ನು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಸಭೆಗೆ ಸ್ವಾಗತಿಸಿದರು. 


ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾದ ಸದ್ದಾಂ ಕುಂಟೋಜಿ, ಹೊನ್ನಮಲ್ಲ ಈ ಸಾರವಾಡ ಹಾಗೂ ಸದಸ್ಯರುಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.