ಮೈಕ್ರೋ ಫೈನಾನ್ಸ್ ಬ್ಯಾಂಕುಗಳ ಮೇಲೆ ಕ್ರಮಕ್ಕೆ ಆಗ್ರಹಿಸಿ ಮನವಿ

ವಿಜಯಪುರ : ಮೈಕ್ರೋ ಫೈನಾನ್ಸ್ ಬ್ಯಾಂಕುಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ಮನವಿ ಸಲ್ಲಿಸಿದರು.
ವಿಜಯಪುರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಕ್ರೋಫೈನಾನ್ಸ್ ಬ್ಯಾಂಕುಗಳು ತೀವ್ರತರದಲ್ಲಿ ಬಡ್ಡಿ ಚಕ್ರ ಬಡ್ಡಿಯನ್ನು ವಿಧಿಸುವುದರ ಮೂಲಕ ಸಾಲ ಪಡೆದಿರುವ ಬಡ ಕೂಲಿ ಕಾರ್ಮಿಕರಿಗೆ ವ್ಯಾಪಾರಸ್ಥರಿಗೆ ಗ್ರಾಮೀಣ ಭಾಗದ ಜನತೆಗೆ ಆರ್‌ಬಿಐನ ನಿಯಮಾವಳಿಗಳನ್ನು ಮೀರಿ ಕಿರುಕುಳ ನೀಡುವುದರ ಮೂಲಕ ಜಿಲ್ಲೆಯ ಜನತೆ ಗೂಳೆ ಹೋಗುವಂತೆ ಮಾಡುತ್ತಿದೆ. ಅದು ಅಲ್ಲದೆ ಮೈಕ್ರೋ ಫೈನಾನ್ಸ್ ವಸೂಲಿಗಾರರ ಕಿರುಕುಳದಿಂದಾಗಿ ಬಹುತೇಕ ಬಡ ಹೆಣ್ಣು ಮಕ್ಕಳು, ರೈತಾಪಿ ವರ್ಗ, ಕಾರ್ಮಿಕರು ಆತ್ಮಹತ್ಯೆಗೆ ಮುಂದಾಗುತ್ತಿರುವುದು ತೀವ್ರ ರೀತಿಯ ಕಳವಳಕಾರಿಯಾದ ವಿಷಯವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಈಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ, ವಿಕ್ರಮ ವಾಘಮೋರೆ ಸೀನು ಹಿಪ್ಪರಗಿ, ರಾಕೇಶ ಇಂಗಳಗಿ, ತಿಪ್ಪಣ್ಣ ಹೆಬ್ಬಾಳ, ಹಮಿದ ಇನಾಮದಾರ ಇತರರು ಇದ್ದರು.