ಮಹಾತ್ಮ ಗಾಂಧೀಜಿ ಇಡೀ ವಿಶ್ವದ ನಾಯಕ : ಡಿಸಿ ಟಿ.ಭೂಬಾಲನ್

Jan 30, 2025 - 22:41
Jan 31, 2025 - 00:21
 0
ಮಹಾತ್ಮ ಗಾಂಧೀಜಿ ಇಡೀ ವಿಶ್ವದ ನಾಯಕ : ಡಿಸಿ ಟಿ.ಭೂಬಾಲನ್
ವಿಜಯಪುರ : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಭಾರತದ ಮಣ್ಣಿನಲ್ಲಿ ಜನಿಸಿದ್ದರೂ ಸಹಿತ ಅವರ ತತ್ವ - ಸಿದ್ಧಾಂತಗಳಿAದ ಪ್ರತಿಪಾದಿಸಿದ ಮೌಲ್ಯಗಳಿಂದ ಅವರು ಇಡೀ ವಿಶ್ವದ ನಾಯಕರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್  ಹೇಳಿದರು.
ನಗರದ ಮಹಾತ್ಮ ಗಾಂಧಿ ಭವನದಲ್ಲಿ (ಹುತಾತ್ಮರ ದಿನಾಚರಣೆ) ‘ಸರ್ವೋದಯ ದಿನ’ ದ ನಿಮಿತ್ಯ ಗುರುವಾರ ಜರುಗಿದ ಕಾರ್ಯಕ್ರಮದಲ್ಲಿ  ಮಹಾತ್ಮ ಗಾಂಧಿ ಬಾಪೂಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಅಮೆರಿಕೆಯ ಡಾಕ್ಟರ್ ಮಾರ್ಟಿನ್ ಲೂಥರ್ ಕಿಂಗ್ ಜ್ಯುನಿಯರ್, ಸೌತ್ ಆಫ್ರಿಕೆಯ ನೆಲ್ಸನ್ ಮಂಡೇಲಾ, ಬರ್ಮಾ ದೇಶದ ಆಂಗ್ ಸಾನ್ ಸೂಕಿ ಹೀಗೆ ಜಗತ್ತಿನ ನೂರಾರು ನಾಯಕರಿಗೆ ಸ್ಪೂರ್ತಿಯಾಗಿದ್ದಾರೆ  ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ  ಮಾತನಾಡಿ, ಮಹಾತ್ಮ ಗಾಂಧೀಜಿಯವರು ಪ್ರತಿಪಾದಿಸಿದ ಮಾನವೀಯ ಮೌಲ್ಯಗಳನ್ನು  ಜೀವನದಲ್ಲಿ  ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಮಹಾತ್ಮ ಗಾಂಧೀಜಿಯವರನ್ನು  ವರ್ಷದಲ್ಲಿ ಎರಡು ದಿನ ನೆನೆಯುವುದಷ್ಟೇ ಅಲ್ಲದೆ ವರ್ಷದ ಪ್ರತಿದಿನವೂ ನೆನೆಯಬೇಕು, ದೇಶಕ್ಕಾಗಿ ಅವರು ಮಾಡಿದ ತ್ಯಾಗ ಬಲಿದಾನವನ್ನು ಸ್ಮರಿಸಬೇಕು.  ಗಾಂಧೀಜಿಯವರ ಸ್ಮರಣೆಗೆ ಆದಿ ಮತ್ತು ಅಂತ್ಯವಿಲ್ಲ ಅದು ಅನಂತ ಎಂದರು.
ಸೈನಿಕ ಶಾಲೆಯ ಪ್ರಾಂಶುಪಾಲರಾದ  (ಗ್ರೂಪ್ ಕ್ಯಾಪ್ಟನ್) ಪ್ರತಿಭಾ ಬಿಸ್ಟ್ ಅವರು ಮಾತನಾಡಿ, ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ಮಾತಾಡಬೇಡ ಎನ್ನುವ ತತ್ವದ ಮಹಾತ್ಮ ಗಾಂಧೀಜಿಯವರ ಮೂರು ಮಂಗಗಳ ಕಥೆಗಳನ್ನು ಮಕ್ಕಳಿಗೆ ಹೇಳಿದರು.
ಚರ್ಚಿಲ್, ಮೌಂಟ್ ಬ್ಯಾಟನ್, ವಿಲ್ಲಿಂಗ್ ಡನ್, ಸ್ಮಟ್ಸ್ ಹೀಗೆ ರಾಜಕೀಯ ಶತ್ರುಗಳು ಎದೆಯಲ್ಲೂ ಸ್ನೇಹದ ಸಿಂಚನವನ್ನು ಸ್ಫುರಿಸಿದ ಮಹಾ ನಾಯಕ ಮಹಾತ್ಮ ಗಾಂಧೀಜಿ ಎಂದು ನಗರದ ಸರ್ಕಾರಿ ಮಹಿಳಾ ಪಿ.ಯು.ಕಾಲೇಜಿನ ಉಪನ್ಯಾಸಕ ರುದ್ರಯ್ಯ ಉಪನ್ಯಾಸದಲ್ಲಿ ಹೇಳಿದರು.  ಖಾದಿ ಗ್ರಾಮೋದ್ಯೋಗ ಸಂಘದ ಅಧ್ಯಕ್ಷ ಬಾಪೂಗೌಡ ಪಾಟೀಲ್ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಖಾದಿ ಮಂಡಳಿಯ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಎನ್. ಡಿ.ಕಾಂಬಳೆ, ಪ್ರಶಾಂತ ಚನಗೊಂಡ, ಯಲ್ಲಪ್ಪ, ಬಾಳೂ ಜೇವೂರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಗಾಂಧಿ ಭವನದ ನಿರ್ವಹಣಾ ಸಮಿತಿಯ ಸದಸ್ಯ ನೇತಾಜಿಗಾಂಧಿ ಕಾರ್ಯಕ್ರಮ ಸ್ವಾಗತಿಸಿ, ನಿರೂಪಿಸಿದರು, ಪೀಟರ್ ಅಲೆಕ್ಸಾಂಡರ್ ವಂದಿಸಿದರು.
Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.