ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ: ಸರಳ, ಮೃದು ಸ್ವಭಾವದ ಸಾತ್ವಿಕ ಜೀವನವೇ ಶ್ರೀಗಳ ಆದರ್ಶ. ಅವರ ಜ್ಞಾನಭರಿತ ಪ್ರವಚನಗಳು ಮನದ ಅಂಧಕಾರವನ್ನು ನಿವಾರಿಸಿ ವಿಶ್ವಪ್ರೇಮತ್ವ, ನಿಸರ್ಗದ ಪ್ರೀತಿಯೊಂದಿಗೆ ಮಾನವನಾಗಲು ಸಹಕಾರಿಯಾಗಿವೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ಸೋಮವಾರ ಸಂಜೆ ನಗರದ ಶಿವಬಸವ ಯೋಗಾಶ್ರಮದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಯುವ ವೇದಿಕೆ ಹಾಗೂ ಯೋಗಾಶ್ರಮದ ಸಂಯುಕ್ತ ಆಶ್ರಯದಲ್ಲಿ ದತ್ತಿ ಉಪನ್ಯಾಸ ಹಾಗೂ 240 ನೇ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ 'ಸಿದ್ದೇಶ್ವರ ಶ್ರೀಗಳ ಬದುಕು-ಬರಹ' ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿದರು.
ಪ್ರವಚನದ ಮೂಲಕ ವಿಶ್ವದ ವಿವಿಧ ದಾರ್ಶನಿಕರ, ಚಿಂತಕರ ಉದಾತ್ತ ಚಿಂತನೆಗಳನ್ನು ಸುಲಲಿತವಾಗಿ ಜನಮಾನಸದಲ್ಲಿ ಉಳಿಸಿದ ಶ್ರೀಗಳ ಹಿತವಚನ ನೇರವಾಗಿ ಹೃದಯಕ್ಕೆ ಸ್ಪಂದಿಸುತ್ತದೆ. ಅವರ ತ್ಯಾಗಮಯ ಜೀವನ, ಸದಾಚಿಂತನೆಯ ಮನೋಭಾವ ಎಲ್ಲರಿಗೂ ಸ್ಪೂರ್ತಿಯಾಗಿದೆ ಎಂದು ಹೇಳಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದಲ್ಲಿನ ಅಂಕುಡೊಂಕನ್ನು ಮೃದು ಮಾತಿನಿಂದಲೇ ತಿಳಿಸುವ ಶ್ರೀಗಳ ಶೈಲಿ ಎಲ್ಲರ ಮನಸ್ಸನ್ನು ಜಾಗೃತಗೊಳಿಸುತ್ತಿತ್ತು. ಜ್ಞಾನ ದಾಸೋಹದ ಮೂಲಕ ಸರ್ವರಿಗೂ ಸನ್ಮಾರ್ಗದ ದಾರಿ ತೋರಿಸಿದ ಶ್ರೀಗಳು ನಡೆದಾಡುವ ದೇವರಾಗಿದ್ದರು ಎಂದು ಹೇಳಿದರು.
ಮಾತೋಶ್ರೀ ದಾನಮ್ಮ ತಾಯಿ ಮಠ ಸಾನಿಧ್ಯ ವಹಿಸಿ ಮಾತನಾಡಿ, ಶ್ರೀಗಳ ಪ್ರವಚನಕ್ಕೆ ಘನತೆ ಇದೆ. ಮನುಕುಲದ ಉದ್ಧಾರಕ್ಕೆ ಜಾತಿ, ಮತ, ಪಂಥಗಳನ್ನು ಮೀರಿ ಅಧ್ಯಾತ್ಮ ಜೀವಿಯಾಗಿ ಬಾಳಲು ತಿಳಿಸುವ ಅವರ ಶೈಲಿಗೆ ಅವರೇ ಸಾಟಿ ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿ ಈರಣ್ಣ ತೊಂಡಿಕಟ್ಟಿ ಆಶಯ ನುಡಿಗಳನ್ನಾಡಿದರು. ಕುಮಾರಿ ಅನುರಾಧ ಪ್ರಾರ್ಥಿಸಿದರು. ಎಂ ಬಿ ಗುಮ್ಮಡಿ ಸ್ವಾಗತಿಸಿದರು. ಎಸ್ ಡಿ ಕೃಷ್ಣಮೂರ್ತಿ ವಚನ ಹೇಳಿದರು.ಅಮರೇಶ ಸಾಲಕ್ಕಿ ನಿರೂಪಿಸಿದರು. ಸಂಚಾಲಕ ಬಿ ಎಸ್ ಗೋಟ್ಯಾಳ, ವಿ ಎಸ್ ನಾಡಗೌಡ,ಕೆ ಎಂ ಅವಟಿ,ಪಂಡಿತರಾವ ಪಾಟೀಲ, ಸೂರ್ಯಕಾಂತ ಗಡಗಿ, ಚಂದ್ರಶೇಖರ ಪಾಟೀಲ, ಬಿ ಎಚ್ ಕಟ್ಟಿಮನಿ, ಮಹಾದೇವಿ ತೆಲಗಿ, ಈರಮ್ಮ, ಕಮಲಾ ಗೆಜ್ಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.