ಪ್ರಧಾನಮಂತ್ರಿ ಆವಾಸ ಯೋಜನೆ | ಫಲಾನುಭವಿಗಳಿಗೆ ಮನೆ ಕಟ್ಟಿಕೊಳ್ಳಲು ಅನುಕೂಲ ಮಾಡಿ : ಇಓಗಳಿಗೆ ವಿ.ಪ ಶಾಸಕ ಸುನೀಲಗೌಡ ಪಾಟೀಲ ಪತ್ರ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ : ಜಿಲ್ಲೆಯ ಎಲ್ಲ ೧೩ ತಾಲೂಕುಗಳ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಪ್ರಧಾನಮಂತ್ರಿ ಆವಾಸ ಯೋಜನೆಯಡಿ ೨೦೨೪-೨೫ನೇ ಆರ್ಥಿಕ ವರ್ಷದಲ್ಲಿ ವಸತಿರಹಿತರಿಗೆ ಮನೆ ಕಟ್ಟಲು ಸರಕಾರದಿಂದ ಅನುದಾನ ಬಿಡುಗಡೆಯಾಗಿದೆ. ಆದ್ದರಿಂದ ಕೂಡಲೇ ಈ ಮನೆಗಳ ಜಿ.ಪಿ.ಎಸ್ ಮಾಡಿ, ಫಲಾನುಭವಿಗಳು ಮನೆ ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಡಲು ಪಂಚಾಯತಿ ಅಭಿವೃದ್ಧಿ ಅಧಿಕಾರಿ(ಪಿ.ಡಿ.ಓ)ಗಳಿಗೆ ನಿರ್ದೇಶನ ನೀಡುವಂತೆ ವಿಧಾನ ಪರಿಷತ್ ಶಾಸಕ ಸುನೀಲಗೌಡ ಬಿ. ಪಾಟೀಲ ವಿಜಯಪುರ ಜಿಲ್ಲೆಯ ಎಲ್ಲ ತಾಲೂಕ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ(ಇ.ಓ)ಗಳಿಗೆ ಪತ್ರ ಬರೆದಿದ್ದಾರೆ.
ಈ ಎಲ್ಲ ಮನೆಗಳ ನಿರ್ಮಾಣಕ್ಕೆ ಸರಕಾರ ಎಸ್.ಸಿ ಫಲಾನುಭವಿಗಳಿಗೆ ರೂ. ೪೩,೭೫೦ ಮತ್ತು ಇತರೆ ಫಲಾನುಭವಿಗಳಿಗೆ ರೂ. ೩೦,೦೦೦ ಅನುದಾನವನ್ನು ಫಲಾನುಭವಿಗಳಿಗೆ ಖಾತೆಗಳಿಗೆ ನೇರವಾಗಿ ಜಮೆ ಮಾಡುತ್ತಿದೆ. ಜಿಲ್ಲೆಯ ಆಲಮೇಲ ತಾಲೂಕಿನ ೧೩ ಗ್ರಾ. ಪಂ ಗಳಲ್ಲಿ ೫೧೧, ಬಬಲೇಶ್ವರ ತಾಲೂಕಿನ ೧೬ ಗ್ರಾ. ಪಂ ಗಳಲ್ಲಿ ೭೧೧, ಬಸವನ ಬಾಗೇವಾಡಿ ತಾಲೂಕಿನ ೧೮ ಗ್ರಾ. ಪಂ ಗಳಲ್ಲಿ ೧೦೫೩, ಚಡಚಣ ತಾಲೂಕಿನ ೧೩ ಗ್ರಾ. ಪಂ ಗಳಲ್ಲಿ ೮೨೩, ದೇವರ ಹಿಪ್ಪರಗಿ ತಾಲೂಕಿನ ೧೪ ಗ್ರಾ. ಪಂ ಗಳಲ್ಲಿ ೮೪೦, ಇಂಡಿ ತಾಲೂಕಿನ ೩೯ ಗ್ರಾ. ಪಂ ಗಳಲ್ಲಿ ೧೪೮೬, ಕೊಲ್ಹಾರ ತಾಲೂಕಿನ ೧೦ ಗ್ರಾ. ಪಂ ಗಳಲ್ಲಿ ೬೭೫, ಮುದ್ದೇಬಿಹಾಳ ತಾಲೂಕಿನ ೨೨ ಗ್ರಾ. ಪಂ ಗಳಲ್ಲಿ ೧೩೦೭, ನಿಡಗುಂದಿ ತಾಲೂಕಿನ ೧೧ ಗ್ರಾ. ಪಂ ಗಳಲ್ಲಿ ೨೦೭, ಸಿಂದಗಿ ತಾಲೂಕಿನ ೧೮ ಗ್ರಾ. ಪಂ ಗಳಲ್ಲಿ ೪೫೭, ತಾಳಿಕೋಟಿ ತಾಲೂಕಿನ ೧೪ ಗ್ರಾ. ಪಂ ಗಳಲ್ಲಿ ೭೭೪, ತಿಕೋಟಾ ತಾಲೂಕಿನ ೧೫ ಗ್ರಾ. ಪಂ ಗಳಲ್ಲಿ ೭೭೧, ವಿಜಯಪುರ ತಾಲೂಕಿನ ೧೭ ಗ್ರಾ. ಪಂ ಗಳಲ್ಲಿ ೭೭೦ ಫಲಾನುಭವಿಗಳ ಖಾತೆಗೆ ನೇರವಾಗಿ ಯೋಜನೆಯ ಹಣ ಜಮೆ ಆಗುತ್ತಿದೆ.
ಗ್ರಾ. ಪಂ. ಅಧಿಕಾರಿಗಳು ಈ ನಿಟ್ಟಿನಲ್ಲಿ ಕೂಡಲೇ ಜಿ.ಪಿ.ಎಸ್ ಮಾಡಿಸಿ, ವಸತಿರಹಿತ ಫಲಾನುಭವಿಗಳು ಮನೆ ಕಟ್ಟಿಕೊಳ್ಳುವಂತೆ ಮಾಹಿತಿ ನೀಡಲು ಕ್ರಮ ಕೈಗೊಳ್ಳಬೇಕು ಅಲ್ಲದೇ, ಜಿ.ಪಿ.ಎಸ್ ಮಾಡಿದ ಪ್ರತಿಯನ್ನು ವಿಧಾನ ಪರಿಷತ್ ಶಾಸಕರ ಕಚೇರಿಗೆ ಸಲ್ಲಿಸುವಂತೆ ಸುನೀಲಗೌಡ ಬಿ. ಪಾಟೀಲ ಅವರು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.