ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ : ನಸೀಮಾ.ಇ. ಚಪ್ಪರಬಂದ್ ತೃತೀಯ ಸ್ಥಾನ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ವಿಜಯಪುರ : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ೧೫೫ನೇ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ/ಸ್ನಾತಕೋತ್ತರ ಪದವಿ ವಿಭಾಗಗಳಿಗೆ ಪ್ರತ್ಯೇಕವಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ.
ಪದವಿ/ಸ್ನಾತಕೋತ್ತರ ವಿಭಾಗದಲ್ಲಿ ವಿಜಯಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಸೀಮಾ.ಇ. ಚಪ್ಪರಬಂದ್ ಅವರು ತೃತೀಯ ಸ್ಥಾನ ಪಡೆದಿದ್ದಾರೆ. ಜಿಲ್ಲಾ ಮಟ್ಟದಲ್ಲಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಇವರು ಪ್ರಥಮ ಸ್ಥಾನ ಪಡೆದಿದ್ದರು.
ಗಾಂಧೀಜಿಯವರ ತತ್ವಗಳಿಂದ ದೇಶ ಕಟ್ಟುವ ಬಗೆ, ಗಾಂಧೀಜಿ ವಿಚಾರದಲ್ಲಿ ಸತ್ಯಾಗ್ರಹ, ಅಸ್ಪೃಶ್ಯತೆ ನಿವಾರಣೆಗೆ ಗಾಂಧೀಜಿಯವರ ಪ್ರಯೋಗಗಳು, ಗಾಂಧೀಜಿ ಹಾಗೂ ಪ್ರಜಾಪ್ರಭುತ್ವ, ಸ್ವರಾಜ್ ಆರ್ಥಿಕ ಚಿಂತನೆಗಳು, ಸತ್ಯದ ಪರಿಕಲ್ಪನೆ ಮತ್ತಿತರ ವಿಷಯಗಳ ಕುರಿತು ಪ್ರಬಂಧ ಸ್ಪರ್ಧೆ ನಡೆದಿತ್ತು. ರಾಜ್ಯದಾದ್ಯಂತ ಪ್ರೌಢಶಾಲೆ ವಿಭಾಗದಲ್ಲಿ ೧,೨೪,೩೯೨ ವಿದ್ಯಾರ್ಥಿಗಳು, ಪಿಯುಸಿ ವಿಭಾಗದಲ್ಲಿ ೧೨,೮೪೦ ವಿದ್ಯಾರ್ಥಿಗಳು, ಕಾಲೇಜು ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ೧೭,೦೬೨ ವಿದ್ಯಾರ್ಥಿಗಳು ಸೇರಿ ಒಟ್ಟು ೧,೫೪,೨೯೪ ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ರಾಜ್ಯ ಮಟ್ಟದಲ್ಲಿ ಪ್ರಥಮ , ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಕ್ರಮವಾಗಿ ೩೧,೦೦೦ ರೂ., ೨೧,೦೦೦ ರೂ ಹಾಗೂ ೧೧,೦೦೦ ರೂ.ನಗದು ಪುರಸ್ಕಾರ ಹಾಗೂ ಪ್ರಮಾಣ ಪತ್ರಗಳನ್ನು ಅಕ್ಟೋಬರ್ ೨ ರಂದು ಸಂಜೆ ೪.೩೦ಕ್ಕೆ ಬೆಂಗಳೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೇಂದ್ರ ಕಚೇರಿಯ ಸುಲೋಚನ ಸಭಾಂಗಣದಲ್ಲಿ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಹುಮಾನ ವಿತರಣೆ ಮಾಡಲಿದ್ದಾರೆ ಎಂದು ಇಲಾಖೆಯ ಆಯುಕ್ತರಾದ ಹೇಮಂತ್ ಎಂ.ನಿಂಬಾಳ್ಕರ್ ತಿಳಿಸಿದ್ದಾರೆ.