ಧರ್ಮಸ್ಥಳ ೧೦ ವರ್ಷಗಳಿಂದ ಸಮಾಜಮುಖಿ ಕೆಲಸದಲ್ಲಿ ನಿರತ : ಸಂತೋಷ ಕುಮಾರ

Mar 18, 2025 - 21:19
 0
ಧರ್ಮಸ್ಥಳ ೧೦ ವರ್ಷಗಳಿಂದ ಸಮಾಜಮುಖಿ ಕೆಲಸದಲ್ಲಿ ನಿರತ : ಸಂತೋಷ ಕುಮಾರ
ಮುದ್ದೇಬಿಹಾಳ: ಶ್ರೀ ವಿನಾಯಕ ಹಾಗೂ ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿ ಮಂಜೂರಾದ ಲಕ್ಷ ರೂಗಳ ಚಕ್ ಅನ್ನು ದೇವಸ್ಥಾನ ಕಮಿಟಿಯವರಿಗೆ ಹಸ್ತಾಂತರಿಸಲಾಯಿತು.
ಮುದ್ದೇಬಿಹಾಳ: ಧರ್ಮಸ್ಥಳವು ಸರ್ವಧರ್ಮ ಸಮನ್ವಯತೆಯಿಂದ ಕೂಡಿರುವ ಚತುರ್ದಾನದ ಕ್ಷೇತ್ರವಾಗಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಕ್ಷೇತ್ರಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರ ಕನಸಿನ ಕೂಸಾಗಿದೆ. ಮಹಿಳೆಯರ ಅಭಿವೃದ್ದಿಯ ಜೊತೆಗೆ ಗ್ರಾಮಾಭಿವೃದ್ದಿಯ ಗುರಿಯನ್ನೂ ಇಟ್ಟುಕೊಂಡು ಕಳೆದ ೧೦ ವರ್ಷಗಳಿಂದ ಸಮಾಜಮುಖಿ ಕೆಲಸದಲ್ಲಿ ನಿರತವಾಗಿದೆ ಎಂದು ಯೋಜನೆಯ ವಿಜಯಪುರ ಜಿಲ್ಲಾ ನಿರ್ದೇಶಕ ಸಂತೋಷ ಕುಮಾರ ಹೇಳಿದರು.
ಇಲ್ಲಿನ ತಾಳಿಕೋಟೆ ರಸ್ತೆ ಪಕ್ಕದ ವಿನಾಯಕ ನಗರದಲ್ಲಿರುವ ಶ್ರೀ ವಿನಾಯಕ ಹಾಗೂ ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ದೇವಸ್ಥಾನ ಅಭಿವೃದ್ದಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಹೆಗ್ಗಡೆ ಅವರು ಪ್ರಸಾದ ರೂಪದಲ್ಲಿ ದೇಣಿಗೆಯಾಗಿ ನೀಡಿದ ಲಕ್ಷ ರೂಗಳ ಡಿಡಿ ಹಸ್ತಾಂತರ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಾಲೆ, ಜಲಮೂಲ, ಧಾರ್ಮಿಕ ಶಕ್ತಿ ಕೇಂದ್ರಗಳು ಹಳ್ಳಿಗಳ ಸಂಪತ್ತು ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಇವುಗಳ ಅಭಿವೃದ್ದಿಗೆ ಯೋಜನೆಯು ಶ್ರಮಿಸುತ್ತಿದೆ. ೪೩ ವರ್ಷಗಳಲ್ಲಿ ರಾಜ್ಯವ್ಯಾಪಿ ವಿಸ್ತರಿಸಿ ೬.೫ ಲಕ್ಷ ಸಂಘಗಳು, ೬೫ ಲಕ್ಷ ಸದಸ್ಯರನ್ನೊಳಗೊಂಡಿರುವ ಬೃಹತ್ ಸಮಾಜಸೇವಾ ಸಂಸ್ಥೆಯಾಗಿದೆ. ವೈಯುಕ್ತಿಕ, ಕುಟುಂಬ, ಸಮುದಾಯ ಅಭಿವೃದ್ಧಿ ಒಳಗೊಂಡಿರುವ ಇದು ವ್ಯಕ್ತಿ ಜೊತೆ ಕುಟುಂಬ, ಸಮುದಾಯ, ಸಮಾಜ ಬದಲಾಗಬೇಕೆನ್ನುವ ತತ್ವ ಪಾಲಿಸುತ್ತಿದೆ ಎಂದರು.
ಐಎನ್‌ಬಿಸಿಡಬ್ಲು ಫೆಡರೇಷನ್‌ನ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ, ಯೋಜನೆಯ ಜನಜಾಗೃತಿ ವೇದಿಕೆ ಸದಸ್ಯೆ ಸಂಗೀತಾ ನಾಡಗೌಡ ಅವರು ಮಾತನಾಡಿ ಶ್ರೀಕ್ಷೇತ್ರದಿಂದ ಕೊಡಲಾಗುವ ಸೌಲಭ್ಯಗಳ ಸದುಪಯೋಗವಾಗಬೇಕು. ಹೆಗ್ಗಡೆಯವರ ಧರ್ಮಪತ್ನಿಯವರ ಅಭಿಲಾಷೆಯಂತೆ ಗ್ರಾಮಾಭಿವೃದ್ದಿ ಯೋಜನೆ ಜಾರಿಯಾಗಿದ್ದು ಕುಟುಂಬದ ಕಣ್ಣಾಗಿರುವ ಮಹಿಳೆ ಅಭಿವೃದ್ದಿ ಹೊಂದಬೇಕು ಎನ್ನುವ ಮಹತ್ತರ ಗುರಿ ಹೊಂದಲಾಗಿದೆ ಎಂದರು.
ದಿ| ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಸತೀಶಕುಮಾರ ಓಸ್ವಾಲ್, ಜನಜಾಗೃತಿ ವೇದಿಕೆ ಸಂಪನ್ಮೂಲ ವ್ಯಕ್ತಿ ಚೇತನ್ ಕಲ್ಲುಂಡಿ, ಸುಮಾ ಪುರಾಣಿಕಮಠ ಮಾತನಾಡಿದರು. ದೇವಸ್ಥಾನ ಕಮೀಟಿ ಅಧ್ಯಕ್ಷ ವಿಶ್ವನಾಥ ನಾಗಠಾಣ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅರವಿಂದ ಹೂಗಾರ, ವಿಜಯಪುರ ಜಿಓಸಿಸಿ ಬ್ಯಾಂಕ್ ಅಧ್ಯಕ್ಷ ಆನಂದಗೌಡ ಬಿರಾದಾರ, ಅನುರಾಧ ಪ್ಯಾಟಿಗೌಡರ, ಜನಜಾಗೃತಿ ವೇದಿಕೆ ಸದಸ್ಯ ಡಾ| ವೀರೇಶ ಪಾಟೀಲ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುದೇವ ಕಲಬುರ್ಗಿ ವೇದಿಕೆಯಲ್ಲಿದ್ದರು.
ಬಡಾವಣೆಯ ಪ್ರಮುಖರಾದ ಮಲ್ಲಣ್ಣ ಲಕ್ಷಟ್ಟಿ, ಬಸವಂತರಾಯ ದೇಶಪಾಂಡೆ, ಸಿ.ಎಸ್.ಗುಡ್ಡದ, ಡಾ.ವೀರೇಶ ಪಾಟೀಲ, ವಿನೋದ ನಾಗಠಾಣ, ಕಿರಣ್ ನಾಗಠಾಣ, ಪ್ರಮೋದ ನಾಗಠಾಣ, ಗಂಗಪ್ಪ ಹೆಬ್ಬಾಳ, ದೇವಸ್ಥಾನ ಅರ್ಚಕ ಕಾಂತು ಹೆಬ್ಬಾಳ, ಭಾಗ್ಯಾ ಹೆಬ್ಬಾಳ, ವಿದ್ಯಾ ಬಡಿಗೇರ, ಶೋಭಾ ಚಳಗೇರಿ, ಮಹಾದೇವಿ ಹಿರೇಮಠ, ಶೋಭಾ ನಾಗಠಾಣ, ಪಾರ್ವತಿ ಗಣಕುಮಾರಮಠ ಇನ್ನಿತರರು ಉಪಸ್ಥಿತರಿದ್ದರು.
ದೇವಸ್ಥಾನ ಸಮಿತಿಯ ವಿಶ್ವನಾಥ ನಾಗಠಾಣ, ಸಾಹಿಲ್ ನಾಗಠಾಣ ಅವರಿಗೆ ಲಕ್ಷ ರೂಗಳ ಡಿಡಿಯನ್ನು ಸಂತೋಷಕುಮಾರ, ಯೋಜನೆಯ ತಾಲೂಕು ಯೋಜನಾಧಿಕಾರಿ ನಾಗೇಶ ಎನ್.ಪಿ.ಅವರು ಜಂಟಿಯಾಗಿ ಹಸ್ತಾಂತರಿಸಿದರು. ನಾಗೇಶ ಎಸ್.ಕೆ.ಸ್ವಾಗತಿಸಿದರು. ತಾಲೂಕು ಯೋಜನಾಧಿಕಾರಿ ನಾಗೇಶ ಎನ್.ಪಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಶ್ರೀ ವಿನಾಯಕ ಹಾಗೂ ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರ ದೇವಸ್ಥಾನ ಕಮೀಟಿಯವರು ಧರ್ಮಸ್ಥಳಕ್ಕೆ ಹೋಗಿ ಧರ್ಮಾಧಿಕಾರಿ ಡಾ| ವೀರೇಶಂದ್ರ ಹೆಗ್ಗಡೆಯವರಲ್ಲಿ ಮನವಿ ಮಾಡಿದ್ದರಿಂದ ಪ್ರಸಾದ ರೂಪದಲ್ಲಿ ಲಕ್ಷ ರೂ ದೇಣಿಗೆ ಅರ್ಪಣೆಯಾಗಿದೆ. ದೇವಸ್ಥಾನ ಕಟ್ಟುವುದು ಪುಣ್ಯದ ಕೆಲಸವಾಗಿದ್ದು ಅದರ ಖರ್ಚು ಬಹಳ ದೊಡ್ಡದಾಗಿರುವುದರಿಂದ ಕ್ಷೇತ್ರದ್ದು ಅಳಿಲು ಸೇವೆಯಾಗಿದೆ. ಶ್ರದ್ದಾ ಕೇಂದ್ರಗಳ ಜೀರ್ಣೋದ್ದಾರ, ಸ್ವಚ್ಚತಾ ಕಾರ್ಯ ಸೇವೆಯ ಭಾಗವಾಗಿದೆ.
- ಸಂತೋಷಕುಮಾರ, ನಿರ್ದೇಶಕರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ವಿಜಯಪುರ.
Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.