ಬಸವ ಪರ ಸಂಘಟನೆಗಳಿಂದ ತಹಶೀಲ್ದಾರ್‌ಗೆ ಮನವಿ : ಶರಣರ ಶಕ್ತಿ ಸಿನಿಮಾ ನಿರ್ಬಂಧಿಸಲು ಆಗ್ರಹಿಸಿ ಪ್ರತಿಭಟನೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಮುದ್ದೇಬಿಹಾಳ : ಶರಣರ ಶಕ್ತಿ ಚಲನಚಿತ್ರವನ್ನು ನಿರ್ಬಂಧಿಸಬೇಕು ಹಾಗೂ ವಚನ ದರ್ಶನ ಕೃತಿ ಮುಟ್ಟುಗೋಲು ಹಾಕಬೇಕು ಎಂದು ಆಗ್ರಹಿಸಿ ಮಂಗಳವಾರ ಪಟ್ಟಣದಲ್ಲಿ ಬಸವ ಮಹಾಮನೆ ಸಮೀತಿ ಹಾಗೂ ಶರಣ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಬಸವ ಪರ ಸಂಘಟನೆಗಳ ಪದಾಧಿಕಾರಿಗಳು ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.
ಇದೇ ವೇಳೆ ಚಲನಚಿತ್ರದ ನಿರ್ದೇಶಕರು, ನಿರ್ಮಾಪಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.
ನಿರ್ದೇಶಕ ದಿಲೀಪ್ ಶರ್ಮಾ, ನಿರ್ಮಾಪಕಿ ಆರಾಧನಾ ಕುಲಕರ್ಣಿಯವರು ನಿರ್ಮಿಸಿರುವ ಚಲನಚಿತ್ರ ‘ಶರಣರ ಶಕ್ತಿ’ ಸಂಪೂರ್ಣ ಬಸವಾದಿ ಶರಣರ ತತ್ವಗಳಿಗೆ ವಿರುದ್ಧವಾಗಿದ್ದು, ಅದನ್ನು ಕೂಡಲೇ ಸರ್ಕಾರ, ಚಲನಚಿತ್ರ ವಾಣಿಜ್ಯ ಮಂಡಳಿ, ಸೆನ್ಸಾರ್ ಮಂಡಳಿಗಳು ಮಧ್ಯಪ್ರವೇಶಿಸಿ ಮರು ಸೆನ್ಸಾರ್ ಮಾಡಬೇಕು ಮತ್ತು ಅಲ್ಲಿಯವರೆಗೆ ಆ ಚಿತ್ರವನ್ನು ಯಾವುದೇ ಮಾಧ್ಯಮಕ್ಕೆ ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿದರು. ಅಕ್ಕ ನಾಗಮ್ಮನವರಿಗೆ ಅವಹೇಳನ ಮಾಡಿರುವ ಚಿತ್ರ ತಂಡದ ಮೇಲೆ ಕ್ರಿಮಿನಲ್ ಮೊಕದಮೆ ದಾಖಲಿಸಿ, ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಾಹಿತಿ ಅಬ್ದುಲರಹೆಮಾನ್ ಬಿದರಕುಂದಿ, ನಿವೃತ್ತ ಶಿಕ್ಷಕ ಬಿ.ವಿ.ಕೋರಿ ಮಾತನಾಡಿ, ಕೂಡಲೇ ಸರ್ಕಾರ ಈ ಚಲನಚಿತ್ರವನ್ನು ನಿಷೇಧಿಸಬೇಕು. ಶರಣರಿಗೆ ಅವಹೇಳನ ಮಾಡಿರುವ ಶರಣರ ಶಕ್ತಿ ಚಲನಚಿತ್ರವನ್ನು ನಿರ್ಬಂಧಿಸಿ, ನಿರ್ದೇಶಕ ಹಾಗೂ ನಿರ್ಮಾಪಕರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಈ ರೀತಿ ಬಸವಾದಿ ಶರಣರ ತತ್ವದ ಮೇಲಿನ ದಾಳಿ ದಿನೇ ದಿನೇ ಹೆಚ್ಚಾಗುತ್ತಿರುವುದು ದುರಂತದ ಸಂಗತಿ ಎಂದರು.
ಅಕ್ಟೋಬರ್ ೧೮.೨೦೨೪ ರಂದು ಬಿಡುಗಡೆಯಾಗುತ್ತದೆಂದು ಸುಮಾರು ಎರಡು ನಿಮಿಷದ ಟ್ರೇಲರ್ ಬಿಡುಗಡೆಮಾಡಿರುವ “ಶರಣರಶಕ್ತಿ” ಚಲನಚಿತ್ರದ ಟ್ರೇಲರ್‌ನಲ್ಲಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಅನೇಕ ದೋಷಗಳು ಹಾಗೂ ಬಸವಾದಿ ಶರಣರಿಗೆ ಅವಮಾನಮಾಡುವ ರೀತಿಯಲ್ಲಿ ಈ ಚಲನಚಿತ್ರವನ್ನು ಚಿತ್ರಿಕರಿಸಲಾಗಿದೆ. ಕರ್ನಾಟಕದ ಸಾಂಸ್ಕೃತಿಕ ನಾಯಕರೆಂದು ಘನಸರಕಾರವು ಘೋಷಿಸಿದ ಬಸವಣ್ಣನವರ ಅಕ್ಕ ನಾಗಮ್ಮನವರು ಅನೈತಿಕವಾಗಿ ಗರ್ಭಧರಿಸಿದ್ದಾರೆಂದು ಚಿತ್ರಿಕರಿಸಿದ್ದು, ಲಿಂಗಾಯತ ಹಾಗೂ ಇನ್ನಿತರ ಅಭಿಮಾನಿ ಸಮಾಜಗಳಿಗೆ ಅವಮಾನವಾಗಿದೆ. ಇಂಥಹ ಒಂದು ತಪ್ಪನ್ನು ಯಾವ ನಾಗರಿಕ ಸಮಾಜವೂ ಒಪ್ಪುವದಿಲ್ಲ. ಇದನ್ನು ತೀರ್ವವಾಗಿ ಖಂಡಿಸುತ್ತೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮನವಿಯನ್ನು ಉಪ ತಹಶೀಲ್ದಾರ್ ಗುರುರಾಜ ಕಟ್ಟಿ ಅವರಿಗೆ ಸಲ್ಲಿಸಲಾಯಿತು. ಶಸಾಪ ಅಧ್ಯಕ್ಷ ಬಸವರಾಜ ನಾಲತವಾಡ, ಪ್ರಮುಖರಾದ ಅಶೋಕ ಮಣಿ, ಎಸ್.ಬಿ.ಕನ್ನೂರ, ಚಂದ್ರಶೇಖರ ಇಟಗಿ, ಅಶೋಕ ನಾಡಗೌಡ, ಪ್ರತಿಭಾ ಅಂಗಡಗೇರಿ, ಮಹಾದೇವಿ ವಾಲಿ, ಪುರಸಭೆ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸಂಗಣ್ಣ ಶಿವಣಗಿ, ವಕೀಲರಾದ ಎನ್.ಆರ್. ಮೊಕಾಶಿ ,ಎಂ.ವಿ. ಮಾಟಲದಿನ್ನಿ, ಬಿ.ಎಸ್.ಮೇಟಿ, ವೆಂಕನಗೌಡ ಪಾಟೀಲ್, ಸಿ.ಜಿ.ನಾಗರಾಳ, ಬಾಪುಗೌಡ ಪಾಟೀಲ್.ಎಲ್ .ಎಸ್.ಗುರವ, ಎಸ್.ಆರ್. ಪಾಟೀಲ್,ಸಹನಾ ಬಡಿಗೇರ, ಮಹಾದೇವಿ ನಾಲತವಾಡ, ವಿಜಯಲಕ್ಷ್ಮೀ ಗಡೇದ, ಸರೋಜಾ ಕೋರಿ ಮೊದಲಾದವರು ಪಾಲ್ಗೊಂಡಿದ್ದರು.