ಗಾಂಧಿಯನ್ನು ಖಳನಾಯಕನನ್ನಾಗಿ, ಗೋಡ್ಸೆಯನ್ನು ನಾಯಕನನ್ನಾಗಿ ಬಿಂಬಿಸುವ ಯತ್ನ

Oct 1, 2024 - 21:15
 0
ಗಾಂಧಿಯನ್ನು ಖಳನಾಯಕನನ್ನಾಗಿ, ಗೋಡ್ಸೆಯನ್ನು ನಾಯಕನನ್ನಾಗಿ ಬಿಂಬಿಸುವ ಯತ್ನ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ಮಂಜುನಾಥ.ಎಸ್.ಕಟ್ಟಿಮನಿ

ಭಾರತ ದೇಶದ ಸ್ವಾತಂತ್ರ‍್ಯ ಹೋರಾಟಕ್ಕೆ ಹೊಸ ರೂಪ ನೀಡುವುದರ ಜೊತೆಗೆ ಇಲ್ಲಿನ ಎಲ್ಲ ಜನಸಮುದಾಯಗಳನ್ನು ಒಳಗೊಂಡ ನವ ಭಾರತ ನಿರ್ಮಾಣದ ಕನಸು ಕಂಡ ಮಾಸ್ ಲೀಡರ್ ಎಂ.ಕೆ ಗಾಂಧೀ ಎಂಬ ಆ ಮಹಾತ್ಮನನ್ನೇ ಇತ್ತೀಚಿನ ದಿನಗಳಲ್ಲಿ ಕೆಲ ಅವಕಾಶವಾದಿ ನಾ(ಲಾ)ಯಕರು ಅಲ್ಲದೇ ಕೆಲವು ನಿರ್ಲಜ್ಜ ದೇಶವಾಸಿಗಳು ಮರೆಮಾಚಲಾರಂಭಿಸಿ ಇತಿಹಾಸಕ್ಕೆ ದೊಡ್ಡ ಅಪಚಾರ ಎಸಗುತ್ತಿದ್ದಾರೆ ಅನ್ನಿಸುತಿದೆ. ಅನ್ನ ತಿನ್ನದ ಇಂತಹವರನ್ನು ಇತಿಹಾಸ ಎಂದಿಗೂ ಕ್ಷಮಿಸುವುದಿಲ್ಲ ಎಂಬುದು ಬಹುಶಃ ಇಂತಹ ಮೂರು ಬಿಟ್ಟವರಿಗೆ ಗೊತ್ತಿರಲಿಕ್ಕಿಲ್ಲ.


ಇತ್ತೀಚಿನ ವರ್ಷಗಳಲ್ಲಿ ಕೆಲವು ಸ್ವಯಂ ಘೋಷಿತ ದೇಶ ಪ್ರೇಮಿಗಳಿಂದ ಮಕ್ಕಳು ಹಾಗೂ ಯುವಜನರ ಎದೆಯಲ್ಲಿ ಗೋಡ್ಸೆಯನ್ನು ನಾಯಕನನ್ನಾಗಿ, ಗಾಂಧಿಯನ್ನು ಖಳನಾಯಕನನ್ನಾಗಿ ಬಿಂಬಿಸುವ ವಿಷ ಬೀಜ ಬಿತ್ತಲಾಗುತ್ತಿದೆ. ಭಾರತದ ವಿಭಜನೆಗೆ ಗಾಂಧಿ ಕಾರಣ ಎಂದು ಮಕ್ಕಳು ಹಾಗೂ ಜನರ ಮನಸಿನಲ್ಲಿ ಅತ್ಯಂತ ವ್ಯವಸ್ಥಿತವಾಗಿ ತುಂಬಲಾಗುತ್ತಿದೆ. ಅಲ್ಲದೇ ಇದೊಂದು ದೇಶಪ್ರೇಮದ ಇನ್ನೊಂದು ಮುಖ ಎಂದೇ ಭಾವಿಸಲಾಗುತ್ತಿದೆ.


ಎಲ್ಲರನ್ನು ಜೊತೆಗೂಡಿಸಿಕೊಂಡು ಸ್ವಾತಂತ್ರ‍್ಯ ಹೋರಾಟದ ಸಾರಥ್ಯ ವಹಿಸಿದ ಗಾಂಧೀಜಿ ಬಗ್ಗೆ ಸಂಪೂರ್ಣ ಗೊತ್ತಿಲ್ಲದೆ, ಗೊತ್ತಿದ್ದರೂ ತಮ್ಮ ಸ್ವಾರ್ಥಸಾಧನಕ್ಕಾಗಿ ಗಾಂಧೀಜಿಯನ್ನು ನಕಾರಾತ್ಮಕವಾಗಿ ಬಿಂಬಿಸಲ್ಪಟ್ಟಿರುವುದು ದೇಶದ ದುರಂತವಾಗಿದ್ದು, 'ಗಾಂಧೀಜಿ ದೇಶ ವಿಭಜಕರು, ಗೋಡೆ ನಿಜವಾದ ದೇಶಭಕ್ತ' ಎಂದು ಯುವಜನರ, ಮಕ್ಕಳ ಮೆದುಳಿನಲ್ಲಿ ವಿಷಲೇಪನ ಮಾಡಲಾಗುತ್ತಿದೆ. ಆದ್ದರಿಂದಲೇ ಅಲ್ಲಲ್ಲಿ ಹಲವು ಮಕ್ಕಳು, ಯುವಜನರು ಗಾಂಧಿ ಬಗ್ಗೆ ಕಿಡಿಕಾರುತ್ತಾರೆ. ಗೋಡ್ಸೆ ಇಸ್ ಲೈಕ್ ಗಾಢ್.... ಅಂತಾರೆ. ಕೆಲವರು ಗೋಡ್ಸೆ ಭಕ್ತರಾಗಿಯೇ ಹೋಗಿದ್ದಾರೆ. ಹೀಗಾಗಿ ಕೆಲವೊಮ್ಮೆ ಇಂತಹ ಕುಚೋದ್ಯಕ್ಕೆ ಏನೇನ್ನಬೇಕೋ ಗೊತ್ತಾಗುವುದಿಲ್ಲ.


ಹೀಗೆ ಒಂದೆಡೆ ದೇಶದಲ್ಲಿ ಮಹಾತ್ಮನನ್ನು ವ್ಯವಸ್ಥಿತವಾಗಿ ಮುಗಿಸುವ ಷಡ್ಯಂತ್ರ ನಡೆಯುತ್ತಿದ್ದರೆ ಇನ್ನೊಂದೆಡೆ ವಿದೇಶಗಳಲ್ಲಿ ಗಾಂಧೀ ಪ್ರೇಮ, ಗೌರವ, ಅಭಿಮಾನ ದಿನೇ ದಿನೇ ಹೆಚ್ಚುತ್ತಿದೆ. ಹೂವಿನ ಬಗ್ಗೆ ಅಪಚಾರ ಮಾಡಿದರೇನು, ಅದರ ಸುವಾಸನೆ ಹರಡೋದು ತಡೆಯಲಾದಿತೆ? ಸುವಾಸನೆಯೇ ಹೂವಿನ ಅಸಲಿ ಗುಣವನ್ನು ಬಿಚ್ಚಿಡುತ್ತದಲ್ಲವೇ.


ಪಿಎಂ ಮೋದಿಯವರು ಅಮೆರಿಕ, ಫ್ರಾನ್ಸ್, ಇಂಗ್ಲೆAಡ್ ಸೇರಿ ವಿದೇಶಕ್ಕೆ ಹೋದಾಗಲೆಲ್ಲ ಅಲ್ಲಿನ ಸರಕಾರದ ಪ್ರತಿನಿಧಿಗಳು ಮಾತ್ರವಲ್ಲ ಅಲ್ಲಿನ ಜನರು “ಗಾಂಧಿ ನಾಡಿನಿಂದ ಬಂದಿದ್ದೀರಿ. ನಿಮಗೆ ಸ್ವಾಗತ' ಎಂದು ಹಾಡಿ ಹೊಗಳುತ್ತಾರೆ. ಮೋದಿಯವರು ಕೂಡ ತಾನು ಬುದ್ಧ ಮತ್ತು ಗಾಂಧೀಜಿ ನಾಡಿನಿಂದ ಬಂದಿದ್ದೇನೆ ಎಂದು ಹೇಳಿಕೊಳ್ಳುತ್ತಾರೆ.


ಭಾರತ ಭಾಗ್ಯವಿಧಾತ ಬಾಬಾಸಾಹೇಬ ಅಂಬೇಡ್ಕರ್ ಅವರಂತೆ 'ಮಿಸ್ಟರ್ ಎಂ.ಕೆ.ಗಾAಧಿ' ಎಂದು ಕರೆಯುವ ಮೂಲಕ ಗಾಂಧೀಜಿಯನ್ನು  ಸಕಾರಣಕ್ಕೆ ಹಾಗೂ ತಾತ್ವಿಕವಾಗಿ ತಿರಸ್ಕರಿಸುವವರು ಆಗಲೂ ಇದ್ದರು. ಈಗಲೂ ಇದ್ದಾರೆ. ಇಂತವರು ವಿಭಿನ್ನ ಬೇರೆ ಬೇರೆ ಕಾರಣಗಳಿಗೆ ತಾತ್ವಿಕವಾಗಿ ವಿರೋಧಿಸುತ್ತಿದ್ದರು. ವಿರೋಧಿಸುತ್ತಾರೆ. ಇದನ್ನು ಬಹುಜನರು ಒಪ್ಪುತ್ತಿದ್ದರು. ಈಗಲೂ ಒಪ್ಪುತ್ತಾರೆ.


ಬಾಬಾಸಾಹೇಬ ಅಂಬೇಡ್ಕರ್ ಅವರು ಗಾಂಧಿ ಅವರನ್ನು ಸಕಾರಣವಾಗಿ ಟೀಕಿಸುತ್ತಿದ್ದರು. ಭಗತ್ ಸಿಂಗ್ ಬೆಂಬಲಿಗರಾದ ಎಡಪಂಥೀಯರು ತಮ್ಮದೇ ಆದ ಕಾರಣಗಳಿಗಾಗಿ ಗಾಂಧೀಜಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಸಾವರ್ಕರ್ ಮತ್ತು ಗೋಳ್ವರ್‌ವಾದಿಗಳು ಕೂಡ ಗಾಂಧೀಜಿಯನ್ನು ಧಿಕ್ಕರಿಸುತ್ತಾರೆ. ಆದರೆ, ಇವರೆಲ್ಲರ ಗಾಂಧಿ ವಿರೋಧ ಎಂದೂ ವಯಕ್ತಿಕ ದ್ವೇಷವಾಗಿ ರೂಪಾಂತರಗೊಳ್ಳಲಿಲ್ಲ.
ಸ್ವಾತAತ್ರ‍್ಯ ಹೋರಾಟದ ಕಾಲ ಘಟ್ಟದಲ್ಲಿ, ಗಾಂಧೀಜಿಗೆ ಭಾರತದಿಂದ ಬ್ರಿಟಿಷ್ ಸಾಮ್ರಾಜ್ಯವನ್ನು ನಾಶಗೊಳಿಸುವುದು ಮೊದಲ ಆದ್ಯತೆಯಾಗಿತ್ತು. ಅನಂತರ ನಮ್ಮ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳೋಣ ಎಂಬುದು ಅವರ ನಿಲುವಾಗಿತ್ತು. ಆದರೆ, ಅಂಬೇಡ್ಕರ್ ಇದನ್ನು ಒಪ್ಪಲಿಲ್ಲ. 'ದೇಶಕ್ಕೆ ಬರೀ ಸ್ವಾತಂತ್ರ‍್ಯ ಬಂದರೆ ಸಾಲದು. ಶತಮಾನಗಳಿಂದ ನಾಯಿ, ಬೆಕ್ಕುಗಳಿಗಿಂತ ಕೀಳಾಗಿ ನರಳುತ್ತಿರುವ ನನ್ನ ಜನರಿಗೆ ಸ್ವಾತಂತ್ರ‍್ಯ ಮಾತ್ರವಲ್ಲದೇ ಸ್ವಾಭಿಮಾನದ ಬದುಕೂ ಬೇಕು. ಗಾಂಧೀಜಿ ಪಡೆಯುವ ಸ್ವಾತಂತ್ರ‍್ಯ ಮೇಲ್ಜಾತಿಯ ಮೇಲ್ವರ್ಗದ ಜನರಿಗೆ ಮಾತ್ರ ದಕ್ಕುತ್ತದೆ. ದಲಿತರ ಬದುಕಿಗೆ ಅದು ಬೆಳಕನ್ನು ನೀಡುವುದಿಲ್ಲ' ಎಂಬುದು ಬಾಬಾಸಾಹೇಬ ಅಂಬೇಡ್ಕರ್ ಅವರ ಸ್ಪಷ್ಟ ನಿಲುವಾಗಿತ್ತು.


ಅಂಬೇಡ್ಕರ್‌ರAತೆ ಮಹಾತ್ಮಾ ಗಾಂಧೀಜಿ ಜೊತೆಗೆ ಸುಭಾಷ್ ಚಂದ್ರ ಬೋಸ್ ಮತ್ತು ಭಗತ್‌ಸಿಂಗರಿಗೂ ಭಿನ್ನಾಭಿಪ್ರಾಯವಿತ್ತು. ಎಡಪಂಥೀಯರೂ ಗಾಂಧಿ ಅವರನ್ನು ಒಪ್ಪುತ್ತಿರಲಿಲ್ಲ. ದೇಶ ಸ್ವಾತಂತ್ರ‍್ಯ ಪಡೆಯುವ ಜೊತೆಗೆ ಸಮ ಸಮಾಜದ ನಿರ್ಮಾಣವಾಗಬೇಕು ಎಂಬುದು ಇವರೆಲ್ಲರ ನಿಲುವಾಗಿತ್ತು. ಆದರೆ ಇವರೆಲ್ಲರ ಈ ಭಿನ್ನಾಭಿಪ್ರಾಯಗಳು ಎಂದೂ ವೈಯಕ್ತಿಕ ದ್ವೇಷದ ರೂಪ ತಾಳಲಿಲ್ಲ. ಇವರೆಲ್ಲರಿಗೂ ಗಾಂಧೀಜಿ ಬಗ್ಗೆ ಭಿನ್ನಾಭಿಪ್ರಾಯಗಳ ನಡುವೆಯೂ ಬಹಳ ಗೌರವವಿತ್ತು.


ಗಾಂಧೀಜಿ ಯಾರ ಮೇಲೂ ಮುನಿಸಿಕೊಳ್ಳಲಿಲ್ಲ. ಕಮ್ಯುನಿಸ್ಟರ ಜೊತೆಗೂ ಗಾಂಧೀಜಿಗೆ ಭಿನ್ನಾಭಿಪ್ರಾಯಗಳಿದ್ದವು. ಏಕೆಂದರೆ ಹಿಂಸೆಯನ್ನು ಅವರು ಒಪ್ಪುತ್ತಿರಲಿಲ್ಲ. ಆದರೆ ಕಮ್ಯುನಿಸ್ಟರ ಬದ್ಧತೆ ಬಗ್ಗೆ ಅವರಿಗೆ ಅಪಾರ ಗೌರವವಿತ್ತು, ಮೀರತ್ ಪಿತೂರಿ ಬಿಟ್ಟೆಯಲ್ಲಿ ಕಮ್ಯುನಿಸ್ಟರು ಬಂಧನಕ್ಕೆ ಒಳಗಾಗಿ ಜೈಲಿನಲ್ಲಿದ್ದಾಗ ಗಾಂಧಿ ಆ ಕಮ್ಯುನಿಸ್ಟ್ ನಾಯಕರನ್ನು ಭೇಟಿಯಾಗಲು ಹೋಗಿದ್ದರು. ಕಮ್ಯುನಿಸ್ಟ್ ನಾಯಕ ಪೂರ್ಣಚಂದ್ರ ಜೋಶಿ ಮತ್ತು ಗಾಂಧೀಜಿ ನಡುವೆ ಉತ್ತಮ ಸ್ನೇಹ ಸಂಬAಧ ಹೊಂದಿದ್ದರು.


ಒಟ್ಟಿನಲ್ಲಿ ಗಾಂಧಿಯAತಹ ಮಹಾಪುರುಷರು ಬಯಸಿದ ಸರ್ವಜನಾಂಗದ ಶಾಂತಿಯ ತೋಟವನ್ನು ಕಾಪಾಡಿಕೊಳ್ಳಲು ಎಲ್ಲರೂ ಸಂಕಲ್ಪ ಮಾಡಬೇಕು. ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದ ಬಸವಣ್ಣನ ನಾಡಿನಲ್ಲಿ ಗಾಂಧಿ ಎಂಬ ಮಹಾ ಬೆಳಕು ಬೆಳಕು ಆರದಿರಲಿ. ಇಂತಹ ಮಹಾತ್ಮರು ಮತ್ತೆ ಮತ್ತೆ ಹುಟ್ಟಿ ಬರಲಿ..

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.