ಕಾವೇರಿ ಹ್ಯಾಂಡ್‍ಲೂಮ್ಸ್‍ಗೆ ಬಜೆಟ್‍ನಲ್ಲಿ ಅನುದಾನ: ಜವಳಿ ಸಚಿವ ಶಿವಾನಂದ ಪಾಟೀಲ ಭರವಸೆ

Jan 7, 2025 - 23:35
 0
ಕಾವೇರಿ ಹ್ಯಾಂಡ್‍ಲೂಮ್ಸ್‍ಗೆ ಬಜೆಟ್‍ನಲ್ಲಿ ಅನುದಾನ: ಜವಳಿ ಸಚಿವ ಶಿವಾನಂದ ಪಾಟೀಲ ಭರವಸೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ಬೆಂಗಳೂರು : ಕಾವೇರಿ ಹ್ಯಾಂಡ್‍ಲೂಮ್ಸ್‍ನ ಗತವೈಭವವನ್ನು ಮರಳಿ ತರಬೇಕಿದ್ದು, ಬಜೆಟ್‍ನಲ್ಲಿ ಅಗತ್ಯ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಜವಳಿ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದ್ದಾರೆ.

ಜನವರಿ 06ರಂದು, ಜಾಲಹಳ್ಳಿ ಮುಖ್ಯ ರಸ್ತೆಯ ಎಚ್‍ಎಂಟಿ ಮೈದಾನದಲ್ಲಿ ಕೇಂದ್ರ ಸರ್ಕಾರದ ಜವಳಿ ಸಚಿವಾಲಯದ ನೆರವಿನೊಂದಿಗೆ ಕಾವೇರಿ ಹ್ಯಾಂಡ್‍ಲೂಮ್ಸ್ ಆಯೋಜಿಸಿದ್ದ 15 ದಿನಗಳ ಗಾಂಧಿ ಬುನ್ಕರ್ ಮೇಳ (ರಾಷ್ಟ್ರೀಯ ಕೈಮಗ್ಗ ಮೇಳ)ವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾವೇರಿ ಹ್ಯಾಂಡ್‍ಲೂಮ್ಸ್ ಮಾರಾಟ ಮಳಿಗೆ ಆರಂಭಿಸಲು ಸಹಕಾರ ನೀಡಲಾಗುವುದು ಎಂದು ಹೇಳಿದರು.

ರೂ.16 ಕೋಟಿ ಸಾಲ ತೀರಿಸಲು ಸಾಧ್ಯವಾಗದ ಕಾರಣ, ಅಪೆಕ್ಸ್ ಬ್ಯಾಂಕ್ ಮುಟ್ಟುಗೋಲು ಹಾಕಿಕೊಂಡಿದ್ದ ಕಟ್ಟಡವನ್ನು ಇತ್ಯರ್ಥಪಡಿಸಿ ಉಳಿಸಿಕೊಡಲಾಗಿದೆ. ಈ ಕಟ್ಟಡವನ್ನು ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಸುಮಾರು ರೂ.50 ಕೋಟಿ ಆಸ್ತಿಯಾಗಲಿದೆ. ಅಪೆಕ್ಸ್ ಬ್ಯಾಂಕ್ ಆಡಳಿತ ಮಂಡಳಿಯಲ್ಲಿ ಇರುವ ಕಾರಣ ಈ ಸಾಲದ ಮೊತ್ತವನ್ನು ಕಡಿಮೆ ಮಾಡಿಸಿ ಇತ್ಯರ್ಥಪಡಿಸಲು ಸಾಧ್ಯವಾಯಿತು ಎಂದು ಹೇಳಿದರು.

ರಾಷ್ಟ್ರೀಯ ಕೈಮಗ್ಗ ಮೇಳಕ್ಕೆ ಕೇಂದ್ರ ಸರ್ಕಾರ ಕೇವಲ 80 ಮಳಿಗೆಗಳಿಗೆ ಮಾತ್ರ ಅವಕಾಶ ಕಲ್ಪಿಸಿದ್ದು, ಅನೇಕ ನೇಕಾರರು ಮಳಿಗೆ ಸಿಗದೆ ಮೇಳದಿಂದ ಹೊರಗೆ ಉಳಿಯುತ್ತಿರುವುದು ಗಮನಕ್ಕೆ ಬಂದಿದೆ. ಹೆಚ್ಚುವರಿ 20 ಮಳಿಗೆಗಳಿಗೆ ರಾಜ್ಯ ಸರ್ಕಾರ ನೆರವು ನೀಡಲಿದೆ ಎಂದು ಹೇಳಿದರು.

ಕೈಮಗ್ಗ ನೇಕಾರರ ಹಿತದೃಷ್ಟಿಯಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಹೊಸ ಜವಳಿ ನೀತಿ ಜಾರಿಗೆ ಸಿದ್ಧತೆ ನಡೆದಿದ್ದು, ತಜ್ಞರೊಂದಿಗೆ ಸಮಾಲೋಚನೆ ನಡೆದಿದೆ. ಜವಳಿ ಉದ್ಯಮ ಪುನಶ್ಚೇತನಕ್ಕೆ ಪೂರಕವಾಗಿ ನೀತಿ ರೂಪಿಸಲಾಗುತ್ತಿದೆ. ನೆರೆ ರಾಜ್ಯಗಳಲ್ಲಿನ ಪೂರಕ ಅಂಶಗಳನ್ನೂ ಅಳವಡಿಸಿಕೊಳ್ಳುವ ಚಿಂತನೆ ಇದೆ ಎಂದು ತಿಳಿಸಿದರು.

ವಿದ್ಯುತ್ ಮಗ್ಗ ನೇಕಾರಿಕೆ ಪೆÇ್ರೀತ್ಸಾಹಿಸಲು ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಒಂದರಿಂದ ಹತ್ತು ಅಶ್ವಶಕ್ತಿವರೆಗೆ ಉಚಿತವಾಗಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. 10.1  ಅಶ್ವಶಕ್ತಿಯಿಂದ 20 ಅಶ್ವಶಕ್ತಿವರೆಗಿನ ವಿದ್ಯುತ್ ಮಗ್ಗಗಳಿಗೆ ಪ್ರತಿ ಯೂನಿಟ್‍ಗೆ 1.25 ರೂ. ರಿಯಾಯಿತಿ ದರದಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. 2024-25ನೇ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು 30,042 ಘಟಕಗಳು ರಿಯಾಯಿತಿ ದರದ ವಿದ್ಯುತ್ ಸೌಲಭ್ಯ ಪಡೆಯುತ್ತಿವೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯುತ್ ಮಗ್ಗ ಘಟಕಗಳಿಗೆ 20ರಿಂದ 200 ಎಚ್‍ಪಿ ವರೆಗಿನ ವಿದ್ಯುತ್ ಸಂಪರ್ಕ ಪಡೆದ ಘಟಕಗಳಿಗೆ ವಿದ್ಯುತ್ ಬಿಲ್ ಪಾವತಿ ಮಾಡಿದ ಒಟ್ಟು ಮೊತ್ತದಲ್ಲಿ ಪ್ರತಿಶತ 50ರಷ್ಟು  ಸಹಾಯಧನ ನೀಡಲಾಗುತ್ತಿದೆ. ಈ ಉದ್ದೇಶಕ್ಕೆ ನೂರು ಕೋಟಿ ರೂ. ಅನುದಾನ ನೀಡಲಾಗುತ್ತಿದೆ ಎಂದು ಸಚಿವರು ವಿವರಿಸಿದರು.

ನೇಕಾರರ ಸಹಕಾರ ಸಂಘಗಳು ಹಾಗೂ ಸಹಕಾರ ಬ್ಯಾಂಕುಗಳಿಂದ ನೇಕಾರರಿಗೆ ಶೂನ್ಯ ಹಾಗೂ ಪ್ರತಿಶತ ಒಂದರ ಬಡ್ಡಿ ದರದಲ್ಲಿ ಎರಡು ಲಕ್ಷ ರೂ.ವರೆಗೆ ಹಾಗೂ ಪ್ರತಿಶತ ಮೂರರ ಬಡ್ಡಿ ದರದಲ್ಲಿ ಎರಡರಿಂದ ಐದು ಲಕ್ಷ ರೂ. ವರೆಗೆ ನೀಡುವ ಸಾಲಕ್ಕೆ ಬಡ್ಡಿ ಸಹಾಯಧನ ನೀಡಲಾಗುತ್ತಿದೆ. ವಿದ್ಯುತ್ ಮಗ್ಗ ನೇಕಾರರು ಹಾಗೂ ಮಗ್ಗ ಪೂರ್ವ ಘಟಕಗಳ ಕೆಲಸಗಾರರಿಗೆ ಒಟ್ಟು 1.17 ಲಕ್ಷ ಸ್ಮಾರ್ಟ್ ಕಾರ್ಡ್‍ಗಳನ್ನು ವಿತರಣೆ ಮಾಡಲಾಗಿದೆ ಎಂದು ಹೇಳಿದರು.

ಹೊಸದಾಗಿ ಸಣ್ಣ ಮತ್ತು ಅತಿಸಣ್ಣ ಜವಳಿ ಘಟಕಗಳ ಸ್ಥಾಪನೆಗೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಉದ್ಯಮಶೀಲರಿಗೆ ಪೆÇ್ರೀತ್ಸಾಹ ನೀಡಲು ಪ್ರಸಕ್ತ ಸಾಲಿಗೆ ರೂ. 50 ಕೋಟಿ ಹಂಚಿಕೆ ಮಾಡಲಾಗಿದೆ. ಮೂರನೇ ತ್ರೈಮಾಸಿಕ ಅವಧಿಗೆ ಬಿಡುಗಡೆ ಮಾಡಲಾದ ರೂ.37.50 ಕೋಟಿ ಗಳನ್ನು 68 ಘಟಕಗಳಿಗೆ ಹಂಚಿಕೆ ಮಾಡಲಾಗಿದೆ ಎಂದರು.

ಕಾವೇರಿ ಹ್ಯಾಂಡ್‍ಲೂಮ್ಸ್ ಅಧ್ಯಕ್ಷ ಬಿ.ಜೆ.ಗಣೇಶ ಮಾತನಾಡಿ, ಬೆಳಗಾವಿ ಸೇರಿದಂತೆ ಹಲವೆಡೆ ಮಾರಾಟ ಮಳಿಗೆ ಆರಂಭಿಸಲು ಸಹಕಾರ ನೀಡಬೇಕು. ಬೆಂಗಳೂರಿನಲ್ಲಿ ಕನಿಷ್ಟ ಮೂರು ಮಳಿಗೆಗಳನ್ನು ಆರಂಭಿಸುವ ಅಗತ್ಯವಿದ್ದು, ತಮ್ಮ ಸಹಕಾರ ಅಗತ್ಯ ಎಂದು ಜವಳಿ ಸಚಿವರಿಗೆ ಮನವಿ ಮಾಡಿದರು.

ಕಾವೇರಿ ಹ್ಯಾಂಡ್‍ಲೂಮ್ಸ್ ನ ಆಸ್ತಿ ಉಳಿಸುವುದರ ಜೊತೆಗೆ ಹೊಸ ಕಟ್ಟಡ ನಿರ್ಮಿಸಲು ಜವಳಿ ಸಚಿವ ಶಿವಾನಂದ ಪಾಟೀಲ ಅವರು ನೀಡಿರುವ ಸಹಕಾರವನ್ನು ಮರೆಯುವುದಿಲ್ಲ. ಅವರ ಅವಧಿಯಲ್ಲಿ ಕಾವೇರಿ ಹ್ಯಾಂಡ್‍ಲೂಮ್ಸ್ ಮತ್ತೆ ತನ್ನ ಹಳೆಯ ದಿನಗಳಿಗೆ ಮರಳುವ ವಿಶ್ವಾಸ ಇದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ, ಕಾವೇರಿ ಹ್ಯಾಂಡ್ ಲೂಮ್ಸ್ ಉಪಾಧ್ಯಕ್ಷ ನಾರಾಯಣ, ಶಿವಾನಂದ ಟರ್ಕಿ, ಜವಳಿ ಇಲಾಖೆ ಆಯುಕ್ತೆ ಕೆ. ಜ್ಯೋತಿ, ಶ್ರೀನಿವಾಸಮೂರ್ತಿ ಉಪಸ್ಥಿತರಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ ವಿಜಯಪುರದ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.