ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಬೆಂಗಳೂರು : ಕಾಲೇಜು ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2024-25 ನೇ ಶೈಕ್ಷಣಿಕ ಸಾಲಿನಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಖಾಯಂ ಉಪನ್ಯಾಸಕರಿಗೆ ಕಾರ್ಯಭಾರ ಹಂಚಿಕೆ ಮಾಡಿದ ನಂತರ ಉಳಿಕೆಯಾಗುವ ಬೋಧನಾ ಕಾರ್ಯಭಾರಕ್ಕೆ ಅತಿಥಿ ಉಪನ್ಯಾಸಕರನ್ನು ಆನ್‍ಲೈನ್ ಕೌನ್ಸಿಲಿಂಗ್ ಮೂಲಕ ಆಯ್ಕೆ ಮಾಡಿಕೊಳ್ಳಲು ಸರ್ಕಾರವು ಅನುಮತಿ ನೀಡಿರುತ್ತದೆ.
ಯುಜಿಸಿ ನಿಗಧಿಪಡಿಸಿರುವ ವಿದ್ಯಾರ್ಹತೆ ಅನುಗುಣವಾಗಿ ಎನ್‍ಇಟಿ/ ಎಸ್‍ಎಲ್‍ಇಟಿ/ ಎಸ್‍ಇಟಿ/ ಪಿಹೆಚ್‍ಡಿ ವಿದ್ಯಾರ್ಹತೆಯನ್ವಯ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿರುತ್ತದೆ. 2024-25 ನೇ ಸಾಲಿನಲ್ಲಿ ಜನವರಿ/ಫೆಬ್ರವರಿ 2024 ರಿಂದ 2, 4 ಮತ್ತು 6ನೇ ಸೆಮಿಸ್ಟರ್ ತರಗತಿಗಳು ಪ್ರಾರಂಭವಾಗಲಿರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಖಾಯಂ ಉಪನ್ಯಾಸಕರ ಕೊರತೆಯಿಂದ ಲಭ್ಯವಾಗುವ ಹೆಚ್ಚುವರಿ ಬೋಧನಾ ಕಾರ್ಯಭಾರಕ್ಕೆ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳಬೇಕಾಗಿರುತ್ತದೆ.
ಮಾನ್ಯ ಉಚ್ಚ ನ್ಯಾಯಾಲಯದ ತೀರ್ಪಿನನ್ವಯ ಅತಿಥಿ ಉಪನ್ಯಾಸಕರನ್ನು 2024-25ನೇ ಸಾಲಿಗೆ ಆನ್‍ಲೈನ್ ಕೌನ್ಸಿಲಿಂಗ್ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ.
ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು / ಎಡಿಟ್ ಮಾಡಲು ಪ್ರಾರಂಭದ ದಿನಾಂಕ 2025ನೇ ಜನವರಿ 03, ಅರ್ಜಿ ಸಲ್ಲಿಸಲು / ಎಡಿಟ್ ಮಾಡಲು 2025 ನೇ ಜನವರಿ 8 ಕೊನೆಯ ದಿನಾಂಕವಾಗಿದೆ. ಜನವರಿ 09 ರಂದು ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟಿಸಲಾಗುವುದು. ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟಿಸಿದ ನಂತರ ಅರ್ಜಿಯನ್ನು ಎಡಿಟ್ ಮಾಡಲು ಅವಕಾಶ ಜನವರಿ 10 ಮತ್ತು 11, ಜನವರಿ 13 ರಂದು ತಾತ್ಕಾಲಿಕ ಕಾರ್ಯಭಾರ ಪ್ರಕಟಿಸಲಾಗುವುದು. ಜನವರಿ 20 ರಿಂದ 29 ರವರೆಗೆ ಮೆರಿಟ್ ಪಟ್ಟಿಯನ್ವಯ ಕಾಲೇಜು ಆಯ್ಕೆ ಕೌನ್ಸಿಲಿಂಗ್ ನಡೆಸಲಾಗುವುದು. ಜನವರಿ 30 ರಂದು ಕೌನ್ಸಿಲಿಂಗ್‍ನಲ್ಲಿ ಕಾಲೇಜು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುವುದು.
ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲಾಖೆಯ ಜಾಲತಾಣ www.dce.karnataka.gov.in ಗೆ ಸಂಪರ್ಕಿಸುವುದು ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದೆ.