ಮೋಹ ಜಯಿಸಿದವನಿಗೆ ಆತ್ಮಜ್ಞಾನದ ಅನುಭವ

Oct 1, 2024 - 21:25
 0
ಮೋಹ ಜಯಿಸಿದವನಿಗೆ ಆತ್ಮಜ್ಞಾನದ ಅನುಭವ
ಡಾ.ಈಶ್ವರಾನಂದ ಸ್ವಾಮೀಜಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ಡಾ.ಈಶ್ವರಾನಂದ ಸ್ವಾಮೀಜಿ

ಪ್ರತಿಯೊಬ್ಬರು ಅವರು ಅವರಾಗಿ ಬದುಕುತ್ತಿಲ್ಲ. ಅವರ ಇನ್ಯಾವುದೋ ಮೋಹದಲ್ಲಿ ಬದುಕುತ್ತಿದ್ದಾರೆ. ಒಬ್ಬನ ಜೀವ ತಿಜೋರಿಯಲ್ಲಿರುವುದು, ಅದೇನಾದರೂ ಲೂಟಿಯಾದರೆ, ಅವನ ಜೀವ ಹೋದಂತೆ. ಒಬ್ಬನು ತನ್ನ ಪ್ರಾಣವನ್ನು ತನ್ನ ಮಗನ ಮೇಲೆ ಅಥವಾ ಹೆಂಡತಿಯ ಮೇಲೆ ಇಟ್ಟಿರುವನು. ಅವರಿಗೆ ಏನಾದರೂ ಹೆಚ್ಚು ಕಮ್ಮಿ ಆದರೆ ಆಗ ಅವನ ಪ್ರಾಣವೂ ಹಾರಿಹೋಗುತ್ತದೆ. ತಮ್ಮದೇ ಆದ ಭ್ರಮೆಯಲ್ಲಿ ಬದುಕುತಿದ್ದಾರೆ. ಇನ್ನೊಬ್ಬನು ತನ್ನ ಆಸ್ತಿಯ ಮೇಲೆ ತನ್ನ ಪ್ರಾಣ ಇಟ್ಟಿರುವನು, ಅದೆನ್ನೆನಾದರೂ ಕಳೆದು ಕೊಂಡರೆ, ಇವನ ಪ್ರಾಣ ಹೋದಂತೆ ಸರಿ. ಇನ್ನೂ ಕೆಲವರು ತಮ್ಮ ಪ್ರಾಣವನ್ನು ಪದವಿ, ಪ್ರತಿಷ್ಠೆ ಅಂತಸ್ತು, ಅಧಿಕಾರಗಳ ಮೇಲೆ ಇಟ್ಟಿರುತ್ತಾರೆ. ಅದಕ್ಕೇನಾದರೂ ಧಕ್ಕೆ ಉಂಟಾದರೆ ಇವರ ಪ್ರಾಣ ಹೋದಂತೆ ಸರಿ. ಹಾಗಾಗಿ ಅವರು ಅದನ್ನು ಜೋಪಾನ ಮಾಡುತ್ತಿರುತ್ತಾರೆ. ಇದಕ್ಕೊಂದು ಸುಂದರ ಉದಾಹರಣೆಗೆ ನೋಡೋಣ.              

 ಒಬ್ಬ ರಾಕ್ಷಸ. ಅವನು ಜನರಿಗೆ ತುಂಬಾ ತೊಂದರೆ ಕೊಡುತ್ತಿದ್ದ. ಆ ರಾಕ್ಷಸನನ್ನು ಎಷ್ಟೇ ಕೊಲ್ಲಲು ಪ್ರಯತ್ನ ಮಾಡಿದರೂ ಅವನಿಗೆ ಸಾಯುವುದಿಲ್ಲ. ಅವನಿಗೆ ಎಷ್ಟೇ ಗಾಯಗಳಾಗಿ ಎದೆ ಸೀಳಿದರೂ  ಕೂಡ, ಅವನು ಬದುಕುಳಿಯುತ್ತಾನೆ. ಏಕೆಂದರೆ ಆತನ ಪ್ರಾಣ ಒಂದು ಪಕ್ಷಿಯಲ್ಲಿ ಅಡಗಿತ್ತು.                      

 ಆ ರಾಕ್ಷಸನನ್ನು ಕೊಲ್ಲಬೇಕಿದ್ದರೆ ಈ ಹಕ್ಕಿಯನ್ನು ಹುಡುಕಬೇಕು. ಅದನ್ನು ಅವನು ಏಳು ಸಮುದ್ರದ ಆಚೆ, ಏಳು ಬೆಟ್ಟಗಳ ಆಚೆ ಎಲ್ಲೋ ಒಂದು ಗುಹೆಯಲ್ಲಿ ಬಚ್ಚಿಟ್ಟಿದ್ದಾನೆ. ಅವನ ಪ್ರಾಣವಿರುವುದು ಆ ಹಕ್ಕಿಯಲ್ಲಿ. ಅವುಗಳ ಕತ್ತನ್ನು ತಿರುಚಿದರೆ ಮಾತ್ರ ರಾಕ್ಷಸನ ಪ್ರಾಣ ಹೋಗುವುದು.  ಮೋಹದ ಬಲೆಗೆ ಸಿಕ್ಕಿಕೊಂಡರೆ, ನಮ್ಮ ಆತ್ಮ ನಮ್ಮ ಬಳಿಯಲ್ಲಿರುವುದಿಲ್ಲ. ಅದು ಮತ್ತೆಲ್ಲೋ ಬೇರೆಡೆ ಅವಿತುಕೊಳ್ಳುವುದು. ಈ ಮೋಹ ಯಾವುದು ಎಂದು ಪತ್ತೆ ಹಚ್ಚಿ, ಇವು ಯಾವುದೂ ಇಲ್ಲದೆ, ನಾವು ಜೀವಿಸಲು ಸಾಧ್ಯವೇ ಎಂದು ನಮ್ಮನ್ನು ನಾವು ಪರೀಕ್ಷಿಸಿಕೊಳ್ಳಬೇಕು. ಇವೆಲ್ಲವೂ ಇಲ್ಲದಾಗಲೂ ನಮ್ಮ ಮನಸ್ಸಿನಲ್ಲಿ ಸ್ವಲ್ಪವೂ ಕಂಪನ, ಆತಂಕ, ಭಯ ಉಂಟಾಗಬಾರದು. ಅಂತಹ ಒಂದು ಸ್ಥಿತಿಯನ್ನು ಮುಟ್ಟಿದರೆ, ನಾವು ಮೋಹವನ್ನು ಜಯಿಸಿದಂತೆ. ಮೋಹವನ್ನು ಜಯಸಿದೆನೆಂಬ ಭಾವ ನಮ್ಮಲ್ಲಿ ಎಂದು ಮೂಡುವುದೋ, ಅಂದೆ ನಮಗೆ ಆತ್ಮಜ್ಞಾನದ ಅನುಭವ ಉಂಟಾಗುತ್ತದೆ. ಗಿಡದಿಂದ ಹೂವು ತನಗೆ ತಾನೇ ಅರಳಿದಂತೆ, ನೆಲದಿಂದ ನೀರಿನ ಬುಗ್ಗೆ ಚಿಮ್ಮುವಂತೆ, ನಮ್ಮೊಳಗೂ ಸಹ ಒಂದು ಆತ್ಮ ಶಕ್ತಿ  ಸಹಜವಾಗಿ ಹರಿಯುತ್ತಲೇ ಇರುತ್ತದೆ. ಅದು ಕೇವಲ ನಮ್ಮದಷ್ಟೇ, ಅದನ್ನು ಸ್ವತಹ ನಾವೇ ಕಂಡುಕೊಳ್ಳಬೇಕು.                    

ನೀತಿ : ಭ್ರಮೆ ಅಥವಾ ಮೋಹ ಎಂಬುದು ಒಂದು ಬಲೆ. ಆ ಮೋಹ ನಾವು ಎಲ್ಲೆಲ್ಲಿ ಇಟ್ಟಿರುತ್ತೇವೋ ಅವುಗಳಿಗೆಲ್ಲ ಗುಲಾಮರಾಗಿರುತ್ತೇವೆ. ಇಲ್ಲಿ ರಾಕ್ಷಸನ ಪ್ರಾಣ ಹಕ್ಕಿಯಲ್ಲಿರುವುದರಿಂದ ಅವನು ಅದರ ಅಡಿಯಾಳಾದ. ಹಕ್ಕಿಯ ಮೇಲೆ ಅವಲಂಬಿತನಾಗಿ ಅದು ಸತ್ತರೆ, ರಾಕ್ಷಸನ ಪ್ರಾಣಕ್ಕೆ ಸಂಚು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.