ಸದ್ಯದಲ್ಲೇ ಕಾಂಗರೂ ಚಿತ್ರತಂಡದಿಂದ ಹೊಸಚಿತ್ರ ಆರಂಭ

ಕಳೆದ ವರ್ಷ ತೆರೆಕಂಡ ಆದಿತ್ಯ ಅಭಿನಯದ "ಕಾಂಗರೂ" ಚಿತ್ರತಂಡದಿಂದ ಹೊಸ ಚಿತ್ರವೊಂದು ಘೋಷಣೆಯಾಗಿದೆ. "ಕೆ.ಜಿ.ಎಫ್" ನಂತಹ ವಿಶ್ವಮನ್ನಣೆ ಪಡೆದ ಚಿತ್ರಕ್ಕೆ ಸಂಗೀತ ನೀಡುವುದರ ಮೂಲಕ ಜನಪ್ರಿಯರಾಗಿರುವ ಹೆಸರಾಂತ ಸಂಗೀತ ನಿರ್ದೇಶಕ ರವಿ ಬಸ್ರೂರ್ ಈ ನೂತನ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.
ಈ ಹಿಂದೆ "ಕಾಂಗರೂ" ಚಿತ್ರವನ್ನು ನಿರ್ಮಿಸಿದ್ದ ಆರೋಹ ಪ್ರೊಡಕ್ಷನ್ಸ್ ಲಾಂಛನದಲ್ಲಿ ಚನ್ನಕೇಶವ ಬಿ.ಸಿ, ಸ್ವಾಮಿ ಚಕ್ರಭಾವಿ, ನರಸಿಂಹಮೂರ್ತಿ ಚಕ್ರಭಾವಿ, ರಮೇಶ್ ಬಂಡೆ, ರವಿ ಕೀಲಾರ ಮಂಡ್ಯ ಹಾಗೂ ಕೆ.ಜಿ.ಆರ್.ಗೌಡ ಅವರು ಇದೇ ಬ್ಯಾನರ್ ಅಡಿಯಲ್ಲಿ ಅಪಾರ ವೆಚ್ಚದಲ್ಲಿ ಅದ್ದೂರಿಯಾಗಿ ಎರಡನೇ ಚಿತ್ರ ನಿರ್ಮಿಸಲು ಮುಂದಾಗಿದ್ದು, "ಕಾಂಗರೂ" ಚಿತ್ರದ ನಿರ್ದೇಶಕ ಕಿಶೋರ್ ಮೇಗಳಮನೆ ಅವರೆ ನಿರ್ದೇಶನ ಮಾಡುತ್ತಿದ್ದಾರೆ. ತಮ್ಮ ಜನಪ್ರಿಯ ಸಂಭಾಷಣೆ ಮೂಲಕ ಜನರ ಮನ ತಲುಪಿರುವ ಮಾಸ್ತಿ ಸಂಭಾಷಣೆ ಮತ್ತು ಚಿತ್ರಕಥೆ ಬರೆಯುತ್ತಿದ್ದಾರೆ.
"ಕಾಂಗರೂ" ತಂಡದ ಎರಡನೇ ಪ್ರಯತ್ನಕ್ಕೆ ಎಲ್ಲರ ಪ್ರೋತ್ಸಾಹವಿರಲಿ. ರವಿ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನೀಡಲು ಒಪ್ಪಿಕೊಂಡಿರುವುದು ಹಾಗೂ ಮಾಸ್ತಿ ಅವರು ಸಂಭಾಷಣೆಯ ಜೊತೆಗೆ ಚಿತ್ರಕಥೆಗೆ ಸಾಥ್ ನೀಡುತ್ತಿರುವುದು ತುಂಬಾ ಖುಷಿಯ ವಿಚಾರ. ಸದ್ಯದಲ್ಲೇ ಈ ನೂತನ ಚಿತ್ರದ ಶೀರ್ಷಿಕೆ ಅನಾವರಣ ಮಾಡಿ ಚಿತ್ರೀಕರಣ ಆರಂಭಿಸಲಾಗುವುದು. ಅದೇ ಸಮಯದಲ್ಲಿ ಚಿತ್ರದ ನಾಯಕ ಹಾಗೂ ನಾಯಕಿಯ ಯಾರೆಂದು ತಿಳಿಸಲಾಗುವುದು ಎಂದು ನಿರ್ದೇಶಕ ಕಿಶೋರ್ ಮೇಗಳಮನೆ ತಿಳಿಸಿದ್ದಾರೆ.