ಗಾಂಧಿಜೀ ಶಾಂತಿ ಸಂಕೇತವಾದರೆ, ಶಾಸ್ತ್ರೀಜೀ ಪ್ರೀತಿಯ ಸಂಕೇತ: ಪಾಟೀಲ್

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಅಫಜಲಪುರ: ಭಾರತವನ್ನು ಬ್ರೀಟಿಷರ ದಾಸ್ಯದಿಂದ ಬಿಡಿಸಲು ಶಾಂತಿ ಮಾರ್ಗವನ್ನು ಆರಿಸಿಕೊಂಡ ಗಾಂಧಿಜೀ ಶಾಂತಿಯ ಸಂಕೇತವಾದರೆ, ಭಾರತವನ್ನು ಸಮರ್ಥವಾಗಿ ಮುನ್ನಡೆಸಲು ಪ್ರಾಮಾಣಿಕತೆಯ ಮಾರ್ಗ ಆರಿಸಿಕೊಂಡ ಲಾಲ್ ಬಹಾದ್ದೂರ ಶಾಸ್ತ್ರೀಜೀ ಅವರು ಪ್ರೀತಿಯ ಸಂಕೇತವಾಗಿದ್ದಾರೆ ಎಂದು ಜ್ಞಾನಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಪಾಟೀಲ್ ಸೊನ್ನ ಹೇಳಿದರು.
ಅವರು ತಾಲೂಕಿನ ತಾಲೂಕಿನ ಮಲ್ಲಾಬಾದ ಗ್ರಾಮದ ಜ್ಞಾನ ಭಾರತಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಗಾಂಧಿಜೀ, ಲಾಲ್ ಬಹಾದ್ದೂರ ಶಾಸ್ತ್ರೀಜೀ ಜಯಂತಿ ಹಾಗೂ ನಿವೃತ್ತ ಶಿಕ್ಷಕ ದೇವಣ್ಣ ಕಿರಸಾವಳಗಿ ಅವರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಗಾಂಧಿಜೀ, ಶಾಸ್ತ್ರೀಜೀ ಅವರ ಆದರ್ಶಗಳನ್ನು ಪಾಲನೆ ಮಾಡಬೇಕು ಎಂದು ಕರೆ ನೀಡಿದರು.
ಶಿಕ್ಷಕಿ ಅರ್ಚನಾ ಜೈನ್ ಉದ್ಘಾಟಿಸಿ ಮಾತನಾಡುತ್ತಾ ಶಿಕ್ಷಕ ವೃತ್ತಿಯು ಬಹಳ ಶ್ರೇಷ್ಠವಾದ ವೃತ್ತಿಯಾಗಿದೆ. ಇಂತಹ ಶ್ರೇಷ್ಠ ವೃತ್ತಿಯನ್ನು ಮಾಡಿ ನಿವೃತ್ತರಾದ ದೇವಣ್ಣ ಕಿರಸಾವಳಗಿ ಅವರ ಕೈ ಕೆಳಗೆ ನಾನು ಕೆಲಸ ಮಾಡಿದ್ದು ನನಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಪ್ರಾಚಾರ್ಯ ಡಾ. ಸಂಗಣ್ಣ ಸಿಂಗೆ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಗಾಂಧೀಜೀ, ಶಾಸ್ತ್ರೀಜೀ ಇಬ್ಬರು ದೇಶ ಕಂಡ ಶ್ರೇಷ್ಠ ದಾರ್ಶನಿಕರಾಗಿದ್ದಾರೆ. ಅವರ ತತ್ವಾದರ್ಶಗಳನ್ನು ಎಲ್ಲರೂ ಪಾಲಿಸುವಂತಾಗಲಿ, ವಿದ್ಯಾರ್ಥಿಗಳು ಗಾಂಧಿಜೀ, ಶಾಸ್ತ್ರೀಜೀ ಅವರ ಸರಳತೆಯನ್ನು ಮೈಗೂಡಿಸಿಕೊಳ್ಳಿ ಎಂದ ಅವರು ನಿವೃತ್ತ ಶಿಕ್ಷಕರಾದ ದೇವಣ್ಣ ಕಿರಸಾವಳಗಿ ಅವರು ತಮ್ಮ ನಿವೃತ್ತಿ ಬದುಕನ್ನು ಸಮಾಜಮುಖಿಯಾಗಿ ಕಳೆಯಬೇಕೆಂದು ಶುಭ ಹಾರೈಸಿದರು.
ಸಾಹಿತಿ, ಪತ್ರಕರ್ತ ಎ.ಬಿ ಪಟೇಲ್ ಸೊನ್ನ, ಶಿಕ್ಷಕ ಶ್ರೀಶೈಲ್ ಮ್ಯಾಳೇಶಿ ಮಾತನಾಡಿದರು. ಈ ಸಂದರ್ಭದಲ್ಲಿ ಬಾಹುಬಲಿ ಮಾಲಗತ್ತಿ, ಬಸವರಾಜ ಪಾಟೀಲ್, ಶಿವರಾಯ ಕುದರಿ, ಅಂಬಣ್ಣ ಕುದರಿ, ರುದ್ರಗೌಡ ಪಾಟೀಲ ಅತನೂರ, ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಹಿರೇಮಠ, ಬಸವಂತ್ರಾಯಗೌಡ ಪಾಟೀಲ್ ಸೇರಿದಂತೆ ವಿದ್ಯಾರ್ಥಿಗಳು, ಪಾಲಕರು ಇದ್ದರು.