ಶರಣರ ವಚನಗಳು ಬದುಕಿಗೆ ದಾರಿದೀಪ : ಶಿಕ್ಷಕ ಸಂಗನಬಸವ

ಜಮಖಂಡಿ : ಭವ ಸಾಗರವನ್ನು ದಾಟಲು ಜ್ಞಾನವೇ ಹುಟಾಗಿದ್ದು ಹನ್ನೆರಡನೆಯ ಶತಮಾನದ ನಿಜ ಶರಣ ಅಂಬಿಗರ ಚೌಡಯ್ಯನವರು ತಮ್ಮ ವಚನಗಳ ಮೂಲಕ ಓರೆ ಕೋರೆಗಳನ್ನು ತಿದ್ದಿದರು ಎಂದು ಆಶುಕವಿ ಮುಖ್ಯ ಶಿಕ್ಷಕ ನಾರಾಯಣ ಶಾಸ್ತ್ರಿ ಹೇಳಿದರು.
ಅವರು ಕುಂಬಾರಹಳ್ಳ ಸರಕಾರಿ ಪ್ರೌಢಶಾಲೆಯಲ್ಲಿ ಅಂಬಿಗರ ಚೌಡಯ್ಯನವರ ಜಯಂತಿ ಹಾಗೂ ತ್ರೀವಿಧ ದಾಸೋಹಿ ಶಿವಕುಮಾರ ಮಹಾಸ್ವಾಮಿಗಳ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಜ್ಞಾನವೆ ಆಸ್ತಿಯಾಗಿದ್ದು ಅದರ ಸಹಾಯದಿಂದ ಜೀವನ ರೂಪಿಸಿಕೊಂಡು ತಂದೆ ತಾಯಿಗಳ ಮತ್ತು ಕಲಿಸಿದ ಶಿಕ್ಷಕರ ಋಣ ತೀರಿಸಬೇಕೆಂದು ಹೇಳಿದರು.
ಶಿಕ್ಷಕ ಸಂಗನಬಸವ ಉಟಗಿ ಮಾತನಾಡಿ ಅಂಬಿಗರ ಚೌಡಯ್ಯನವರ ಜೀವನ ವೃತ್ತಾಂತವನ್ನು ಮಕ್ಕಳಿಗೆ ತಿಳಿಸುತ್ತಾ ನೋವು, ಹತಾಶೆ ಮತ್ತು ಕೋಪತಾಪಗಳನ್ನು ಕಠಿಣ ವಚನಗಳಲ್ಲಿ ವ್ಯಕ್ತಪಡಿಸಿ ನಿಷ್ಕಾರವಾದಿಯಾಗಿದ್ದರು. ಡಾಂಭಿಕರ ನಿಷ್ಠೆಯನ್ನು ನಿರ್ದಾಕ್ಷಿಣ್ಯವಾಗಿ ಟೀಕಿಸುತ್ತಿದ್ದರು, ಎಂದು ಹೇಳುತ್ತಾ ಶರಣ ಸಂಸ್ಕೃತಿಯನ್ನು ಅಳವಡಿಸಿಕೊಂಡು ಜೀವನದಲ್ಲಿ ಗುರಿಯನ್ನು ಮುಟ್ಟಬೇಕು ಗುರಿ ಮುಟ್ಟಲು ಶರಣರ ವಚನಗಳು ದಾರಿದೀಪಗಳಾಗಿವೆ ಹಾಗೂ ಅನ್ನ, ಜ್ಞಾನ, ಆಶ್ರಯ ನೀಡುತ್ತಾ ಸಾವಿರಾರು ವಿದ್ಯಾರ್ಥಿಗಳ ಬದುಕನ್ನು ರೂಪಿಸಿದ ನಡೆದಾಡುವ ದೇವರು ಶಿವಕುಮಾರ ಸ್ವಾಮೀಜಿ ಮಾತೃ ಹೃದಯದವರಾಗಿದ್ದರು. ಅವರ ಕಾಲಘಟ್ಟದಲ್ಲಿ ನಾವೆಲ್ಲರೂ ಬದುಕಿರುವುದು ನಮ್ಮ ಪೂರ್ವಜನ್ಮದ ಪುಣ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸಂಜೀವ ಝಂಬುರೆ, ಬಾಹುಬಲಿ ಮುತ್ತೂರ, ಸವಿತಾ ಬೆನಕಟ್ಟಿ, ಶಕುಂತಲಾ ಬಿರಾದಾರ ಉಪಸ್ಥಿತರಿದ್ದರು.
ಶಿಕ್ಷಕಿ ಶಾರದಾ ಮಠ ಪ್ರಾಸ್ತಾವಿಕವಾಗಿ ಮಾತಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.