ಗಾಂಧೀಜಿ-ಶಾಸ್ತ್ರೀಜಿ ದೇಶದ ಅಮೂಲ್ಯ ರತ್ನ : ಅನಂತಪೂರ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಚಿಕ್ಕಪಡಸಲಗಿ : ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀಜಿಯವರಂಥ ಮಹಾನ ಚೇತನರ ತತ್ವ, ಸಿದ್ಧಾಂತಗಳು ಜನಮನದ ಹೃದಯದಲ್ಲಿ ನೆಲೆಸಿವೆ.ಅದರಲ್ಲೂ ಭಾರತೀಯರ ಧ್ರುವತಾರೆಯಾಗಿ ಮಿನುಗಿರುವ ಗಾಂಧೀಜಿಯವರ ಸತ್ಯ ಪ್ರೇಮ,ಅಹಿಂಸೆ ನೀತಿಭಾವ ಇಂದಿಗೂ ಪರಮಳಿಸಿವೆ.ಅವು ಸದಾಕಾಲವೂ ಪ್ರಸ್ತುತವಾಗಿವೆ.ಈ ಮಹಾತ್ಮರ ಜೀವನ ಎಂದೂ ಮರೆಯಲಾಗದು ಎಂದು ವಿಶ್ರಾಂತ ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಅನಂತಪೂರ ನುಡಿದರು.
ಚಿಕ್ಕಪಡಸಲಗಿ ಗ್ರಾಮದಲ್ಲಿ ಗದುಗಿನ ತೋಂಟದಾರ್ಯ ವಿದ್ಯಾಪೀಠ ಸಂಸ್ಥೆ ವತಿಯಿಂದ ನಡೆಯುತ್ತಿರುವ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಬುಧವಾರ ಜರುಗಿದ ಗಾಂಧೀಜಿಯವರ 155 ನೇ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿಯವರ 120 ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು,ಇಂಥ ಉದಾತ್ತ ಚಿಂತಕರ, ಮಹಾಪುರುಷರ ಜೀವನ ಚರಿತ್ರೆಯ ಮೌಲ್ಯ ಅರಿತು,ಅವರ ಬದುಕಿನ ಸಿದ್ಧಾಂತಗಳನ್ನು ತಿಳಿದು ಸತ್ಯದ ದಾರಿಯಲ್ಲಿ, ನೈತಿಕತೆಯ ನೆರಳಿನಲ್ಲಿ ಇಂದಿನ ಯುವಜನತೆ ಸ್ವಾಭಿಮಾನಿಗಳಾಗಿ ಬಾಳಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಭಾರ ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ, ಗಾಂಧೀಜಿಯವರ ರಚನಾತ್ಮಕ ಕಾಯಕಗಳು,ಪರಿಕಲ್ಪನೆಗಳು ಸ್ಮರಣೀಯವಾಗಿವೆ. ಈ ಪುಣ್ಯ ಪುರುಷ ಭಾರತೀಯರಿಗಷ್ಟೇ ಅಲ್ಲ.ಜಗತ್ತಿನ ಸ್ಪೂರ್ತಿಯ ಮೂಲವಾಗಿದ್ದಾರೆ.ಗಾಂಧಿ ಅವರ ಬದುಕು ದೇಶವಾಸಿಗಳಿಗೆ ಪ್ರೇರೇಪಿಸಿದೆ.ಸ್ವಾತಂತ್ರ್ಯ ಹೋರಾಟಕ್ಕೆ ಜೀವ ಸವೆದ ಮಹಾತ್ಮ ಗಾಂಧಿ ಪ್ರಜಾಪ್ರಭುತ್ವದ ಶಕ್ತಿಯಾಗಿ ಬಲ ತುಂಬಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದ ಜೊತೆಗೆ ಸ್ವರಾಜ್ಯ, ಸ್ವಾವಲಂಬಿ ಬದುಕನ್ನು ಪ್ರತಿಪಾದಿಸಿದ್ದಾರೆ. ಸತ್ಯಕ್ಕೆ ಮಾನ್ಯತೆ ಸ್ಪರ್ಶ ನೀಡಿರುವ ಗಾಂಧೀಜಿ ದೂರದೃಷ್ಟಿ ಅನನ್ಯವಾಗಿದೆ.ನೈತಿಕತೆಯ ಜ್ಞಾನ ಚಾರಿತ್ರಿಕವಾಗಿದೆ. ತ್ಯಾಗ ಜೀವದ ನಿರ್ಭಯತೆಯೇ ಅವರನ್ನು ಮಹಾತ್ಮರನ್ನಾಗಿ ರೂಪಿಸಿದೆ. ಗಾಂಧೀಜಿ ಸ್ವಾತಂತ್ರ್ಯ ಹೋರಾಟದ ಮಹಾನ ಅನ್ವೇಷಕ ಎಂದರು.
ಸಮಾಜ ವಿಜ್ಞಾನ ಶಿಕ್ಷಕಿ ಕವಿತಾ ಅಂಬಿ ಮಾತನಾಡಿ, ಶಾಂತ ಸ್ವಭಾವದ ಗಾಂಧೀಜಿಯವರ ಜನಪರ ವಿಚಾರಗಳೇ ಶ್ರೇಷ್ಠತೆಯಲ್ಲಿ ಸಂಧಿವೆ. ಸತ್ಯಾಗ್ರಹವೆಂಬ ದಿವ್ಯ ಅಸ್ತ್ರಗಳ ಪ್ರಯೋಗದಿಂದ ಅವರು ಭಾರತೀಯರನ್ನು ಆಂಗ್ಲರ ಕಪಿಮುಷ್ಟಿಯಿಂದ ಪಾರು ಮಾಡಿದ್ದಾರೆ.ಇದರಿಂದ ನೆಮ್ಮದಿ, ಮುಕ್ತಿ ನಾವು ಕಂಡಿದ್ದೆವೆ. ಮಹಾತ್ಮವೆಂಬ ಆತ್ಮಸಾಧಕ ಹರಿಕಾರ ಗಾಂಧೀಜಿ ನಮಗೆಲ್ಲ ಆದರ್ಶಪ್ರಾಯವಾಗಿದ್ದಾರೆ. ಶಾಸ್ತ್ರೀಜಿಯವರ ಸರಳ,ಸಜ್ಜನಿಕೆಯೂ ಭಾರತೀಯರ ಹೃದಯ ತಟ್ಟಿವೆ. ಅವರ ಸ್ವಾಭಿಮಾನಯುತ ದೇಶಭಕ್ತಿ, ಬಡವರ ಪರ ಕಾಳಜಿ, ಆದರ್ಶ ರಾಜಕಾರಣ ದೇಶಿ ಸಂಸ್ಕೃತಿಗೆ ಮೆರಗು ತಂದಿವೆ. ಅತ್ಯಂತ ಸರಳತೆಯಿಂದ ಕೂಡಿದ ಈ ನಾಯಕರ ಸಾಧನೆ ಜೀವನ ನಮಗೆಲ್ಲ ಪ್ರೇರಣೆಗಳಾಗಿವೆ. ನುಡಿದಂತೆ ನಡೆದು ತಮ್ಮ ತತ್ವ ಸಿದ್ದಾಂತಗಳಿಗೆ ಬದ್ದರಾಗಿ ಮರೆಯಾಗಿದ್ದಾರೆ.ಇಂಥ ಮಹನೀಯರ ಮಾನವೀಯ ಮೌಲ್ಯಯುತ ಗುಣಗಳನ್ನು ಮಕ್ಕಳು ಅಳವಡಿಸಿಕೊಳ್ಳಬೇಕು ಎಂದರು.
ಶಿಕ್ಷಕ ಗುಲಾಬಚಂದ ಜಾಧವ, ಸದಾಶಿವ ಸಿದ್ದಾಪುರ ಮಾತನಾಡಿದರು. ಗಾಂಧೀಜಿ, ಶಾಸ್ತ್ರೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪೂಜಿಸಲಾಯಿತು. ಶಿಕ್ಷಕಿ ಸಹನಾ ಹತ್ತಳ್ಳಿ ರಘಪತಿ ರಾಘವ ರಾಜಾರಾಮ ಸ್ತುತಿಸಿದರು. ಬಸವರಾಜ ಅನಂತಪೂರ, ಲೋಹಿತ ಮಿಜಿ೯, ಈರಪ್ಪ ದೇಸಾಯಿ, ಸಹನಾ ಹತ್ತಳ್ಳಿ ಸೇರಿದಂತೆ ಅಡುಗೆ ಮಾತೆಯರು ಇತರರಿದ್ದರು. ಮಕ್ಕಳು ಶ್ರದ್ಧೆಯಿಂದ ಭಾಗಿಯಾಗಿದ್ದರು.