ರೈತರು ಪಶುಚಿಕಿತ್ಸಾಲಯದ ಪ್ರಯೋಜನ ಪಡೆದುಕೊಳ್ಳಿ : ಶಾಸಕ ವಿಠಲ ಕಟಕಧೋಂಡ

ಹೊರ್ತಿ:ರೈತರು ನೂತನ ಪಶುಚಿಕಿತ್ಸಾಲಯದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ನಾಗಠಾಣ ಶಾಸಕ ವಿಠಲ ಕಟಕಧೋಂಡ ಹೇಳಿದರು.
ಸಮೀಪದ ಇಂಚಗೇರಿ ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರವನ್ನು ನ್ಯಾಶನಲ್ ಪ್ರಾಜೆಕ್ಟ್ ಕನ್ಸ್ಟ್ರ ಕ್ಷನ್ ಕಾರ್ಪೊರೇಷನ್ ಲಿಮಿಟೆಡ್ (ಎನ್ ಪಿಸಿಸಿಎಲ್)ಅಡಿಯಲ್ಲಿ ರೂ.50ಲಕ್ಷ ವೆಚ್ಚದಲ್ಲಿ ಪಶುಚಿಕಿತ್ಸಾಲವನ್ನಾಗಿ ಮೇಲ್ದರ್ಜೇಗೇರಿಸಲಾಗುತ್ತಿರುವ ನೂತನ ಪಶುಚಿಕಿತ್ಸಾಲಯದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
'ಈ ಭಾಗದ ಇಂಚಗೇರಿ ಗಡಿ ಭಾಗದ ಹಳ್ಳಿಗಳಲ್ಲಿನ ರೈತರ ಹೈನುಗಾರಿಕೆ ಸದುದ್ದೇಶದಿಂದ ರೈತರ ಸಾಕು ಪ್ರಾಣಿಗಳಲ್ಲಿ ವಿವಿಧ ತಳಿಗಳಾದ ಗೀರ್, ಜರ್ಸಿ, ಜವಾರಿ ಆಕಳುಗಳನ್ನು ಹಾಗೂ ವಿವಿಧ ತಳಿಗಳ ಮುರ್‍ರಾ, ಜವಾರಿ ಇತರೆ ಎಮ್ಮೆ ಸಲುಹಿದ್ದು ಅಲ್ಲದೇ ಕುರಿ, ಮೆಕೆ, ಅವುಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಕಾರಣದಿಂದ ಸತತ ಪ್ರಯತ್ನದಿಂದ ಈ ಇಂಚಗೇರಿ ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರವನ್ನು ಪಶುಚಿಕಿತ್ಸಾಲವನ್ನಾಗಿ ಮೇಲ್ದರ್ಜೇಗೇರಿಸಲಾಗುತ್ತಿರುವ ಮಹತ್ತರ ಕಾರ್ಯವನ್ನು ಕೈಗೊಳ್ಳಲಾಗಿದೆ.' ಎಂದರು.
ಚಡಚಣ ತಾಲ್ಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ರವಿದಾಸ ಜಾಧವ ಮಾತನಾಡಿ,'ಈ ಗಡಿ ಭಾಗದ ಹಳ್ಳಿಗಳಲ್ಲಿ ಹೈನುಗಾರಿಕೆ ಹೆಚ್ಚಾಗಿದ್ದು, ರೈತರ ಉತ್ತೇಜನ ನೀಡುವ ಉದ್ದೇಶದಿಂದ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರವನ್ನು ಮೇಲ್ದರ್ಜೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಶಾಸಕ ಕಟಕಧೋಂಡ ಅವರು ಭೂಮಿ ಪೂಜೆ ನೆರವೇರಿಸಿದ್ದಾರೆ. ಅದರಂತೆ ಈ ಭಾಗದಲ್ಲಿ ಕೆರೆಗಳಿಗೆ ನೀರು ತುಂಬಿಸುವುದು ಮತ್ತು ನೀರಾವರಿ ಯೋಜನೆಗೆ ಹೆಚ್ಚಿನ ಮುತುವರ್ಜಿ ವಹಿಸಿ ಕಾರ್ಯಕ್ಕೆ ಕೈಗೊಳ್ಳಬೇಕು' ಎಂದು ಮನವಿ ಮಾಡಿದರು.
ಈ ವೇಳೆ, ಚಡಚಣ ತಾಲ್ಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ರವಿದಾಸ ಜಾಧವ, ಗ್ರಾ.ಪಂ ಅಧ್ಯಕ್ಷ ರವಿಕುಮಾರ ಚವ್ಹಾಣ, ಪಿಡಿಒ ವಿಶ್ವನಾಥ ರಾಠೋಡ, ಶಂಕರ ಸಾತಲಗಾಂವ, ಮಲ್ಲಣ್ಣ ಸಕ್ರಿ, ಚಡಚಣ ಪಶು ಪಾಲನಾ ಸಹಾಯಕ ಇಲಾಖೆ ನಿರ್ದೇಶಕ ಡಾ.ಎಂ.ಎಸ್ ಗಂಗನಳ್ಳಿ, ಇಂಚಗೇರಿ ಕಿರಿಯ ಪಶು ವೈದ್ಯಕೀಯ ಪರೀಕ್ಷಕ ಆಸ್ಪಕ ಬಳ್ಳಾರಿ, ಜಿಗಜೀವಣಿ ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಪ್ರಕಾಶ ಕುಂಬಾರ, ಸಾತಲಗಾಂವ ಕಿರಿಯ ಪಶು ವೈದ್ಯಕೀಯ ಪರೀಕ್ಷಕ ಪ್ರಧೀಪ ವಗದುರ್ಗಿ, ಸಿಬ್ಬಂದಿಗಳಾದ ರಮೇಶ ಅರವತ್ತಿ, ಸಂಜೀವ ಬಿರಾದಾರ, ಬಿಳಿಯಾನಸಿದ್ಧ ಬಿರಾದಾರ, ಪಶುಸಖಿ ಭಾಗ್ಯಶ್ರೀ ಮಠಪತಿ, ಸುನೀಲ ಚವ್ಹಾಣ, ನ್ಯಾಶನಲ್ ಪ್ರಾಜೆಕ್ಟ್ ಕನ್ಸ್ಟ್ರ ಕ್ಷನ್ ಕಾರ್ಪೊರೇಷನ್ ಲಿಮಿಟೆಡ್(ಎನ್ ಪಿಸಿಸಿಎಲ್) ಎಂಜಿನಿಯರ ಕರವೀರಯ್ಯ ಹಿರೇಮಠ, ದಾಯಾನಂದ ಹುಬ್ಬಳ್ಳಿ ಇತರರು ಇದ್ದರು. ಡಾ.ಮಲ್ಲಿಕಾರ್ಜುನ ಗಂಗನಳ್ಳಿ ಸ್ವಾಗತಿಸಿ ನಿರೂಪಿಸಿದರು, ಆಸ್ಪಕ ಬಳ್ಳಾರಿ ವಂದಿಸಿದರು.