ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಹುಬ್ಬಳ್ಳಿ: ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಹಬ್ಬಗಳು ಮಕ್ಕಳನ್ನು ಸಂಸ್ಕಾರವಂತರಾಗಿ ಬೆಳೆಸಲು ಸಹಾಯಕವಾಗಿವೆ; ಅವುಗಳ ಮಹತ್ವವನ್ನು ಮಕ್ಕಳಿಗೆ ಆಚರಣೆಯ ಮೂಲಕವೇ ತಲುಪಿಸಬೇಕಾಗಿದೆ ಎಂದು ಹಿರಿಯ ಜಾನಪದ ವಿದ್ವಾಂಸ ಡಾ. ಶಂಭು ಬಳಿಗಾರ ಹೇಳಿದರು.
ಇಲ್ಲಿನ ಲಿಂಗರಾಜ ನಗರ ದಸರಾ ೨೦೨೪ ಕಾರ್ಯಕ್ರಮವನ್ನು ಗುರುವಾರ ಸಂಜೆ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಸದಭಿರುಚಿಗಳನ್ನು ಬೆಳೆಸುವಲ್ಲಿ ತಾಯಂದಿರ ಪಾತ್ರದ ಜೊತೆಗೆ, ಅವರ ಸುತ್ತಮುತ್ತಲಿನ ವಾತಾವರಣವೂ ಪೂರಕವಾಗುತ್ತದೆ; ಅಂಥ ವಾತಾವರಣವನ್ನು ಲಿಂಗರಾಜ ನಗರದ ನಾಗರಿಕರು ರೂಪಿಸಿಕೊಂಡಿರುವ ಸ್ವಾಗತಾರ್ಹ ಎಂದರು.
ಹಲವು ಜಾನಪದ ಗೀತೆಗಳನ್ನು ಹಾಡುತ್ತ, ಗ್ರಾಮೀಣ ಬದುಕಿನ ವಿವಿಧ ಮಜಲುಗಳನ್ನು ಪರಿಚಯಿಸಿದ ಬಳಿಗಾರ ಅವರು, ಇಂದಿನ ವಿದ್ಯಾವಂತ ಜನಾಂಗ ಗ್ರಾಮೀಣ ಬದುಕಿನಿಂದ, ಜಾನಪದ ಸಾಹಿತ್ಯದಿಂದ ದೂರವಾಗಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ನಾಮಕರಣ, ಜನ್ಮದಿನದಂಥ ಕೌಟುಂಬಿಕ ಸಂಭ್ರಮಗಳಲ್ಲಿ ನಮ್ಮ ನಮ್ಮ ಜಾನಪದ ಸಾಹಿತ್ಯ, ಸಂಸ್ಕೃತಿಯನ್ನು ಪಸರಿಸುವ ಕಾರ್ಯವನ್ನು ಎಲ್ಲರೂ ಮಾಡಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರಲ್ಲಿ ನಮ್ಮ ಸಂಸ್ಕೃತಿಯ ಅತೀವ ಕಾಳಜಿ ಇರುವುದನ್ನು ಉದಾಹರಿಸಿದ ಬಳಿಗಾರರು, ಹಲವು ಜಾನಪದ ಗೀತೆಗಳನ್ನು ಸಾಂದರ್ಭಿಕವಾಗಿ ಹಾಡಿ, ಪ್ರೇಕ್ಷಕರನ್ನು ರಂಜಿಸಿದರು.
ಆರಂಭದಲ್ಲಿ ಪ್ರೊ ಜಿ.ವಿ. ವಳಸಂಗ ಅವರು ಸರ್ವರನ್ನು ಸ್ವಾಗತಿಸಿದರೆ, ಸಿದ್ದು ಕಪ್ಪಾಳಿ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ವಿ.ಎನ್. ಸಂಗೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಸಂಗಮೇಶ ಮೆಣಸಿನಕಾಯಿ ಕಾರ್ಯಕ್ರಮ ನಿರೂಪಿಸಿದರು. ರಾಜಶೇಖರ ಬತ್ಲಿ ವಂದಿಸಿದರು.