ಪ್ರತಿಯೊಬ್ಬರೂ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಹುಬ್ಬಳ್ಳಿ : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸ್ವಚ್ಛ ಭಾರತ ಕನಸು ನನಸು ಮಾಡುವ ನಿಟ್ಟಿನಲ್ಲಿ ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿರಬೇಕು. ಪ್ರತಿಯೊಬ್ಬರೂ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಬೇಕಾಗಿದೆ ಎಂದು ೧ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪರಮೇಶ್ವರ ಪ್ರಸನ್ನ ಬಿ. ಹೇಳಿದರು.
ಇಂದು ಹಳೇ ಕೋರ್ಟ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹುಬ್ಬಳ್ಳಿ, ವಕೀಲರ ಸಂಘ ಹುಬ್ಬಳ್ಳಿ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
೨೦೨೧ ರಿಂದ ದೇಶದಾದ್ಯಂತ ಸ್ವಚ್ಚತಾ ಆಂದೋಲನವನ್ನು ಆರಂಭಿಸಲಾಗಿದ್ದು
, ಅಕ್ಟೋಬರ್ ೨ ರಿಂದ ಹತ್ತು ದಿನಗಳ ಕಾಲ ಸ್ವಚ್ಚತಾ ಆಂದೋಲನ ನಡೆಯಲಿದೆ. ಪರಿಸರ ಸ್ವಚ್ಛತೆ ಜೊತೆಗೆ ಮನಸ್ಸನ್ನು ಕೂಡ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಸ್ವಚ್ಛತೆ ಕುರಿತು ಅರಿವನ್ನು ಮೈಗೂಡಿಸಿಕೊಳ್ಳದಿದ್ದರೆ, ಮಾನವನ ಸಂತತಿ ವಿನಾಶವಾಗಲಿದೆ. ಹಸಿ ಕಸ ಮತ್ತು ಒಣ ಕಸವನ್ನು ವಿಂಗಡಿಸಿ, ವಿಲೇವಾರಿ ಮಾಡಬೇಕಾಗಿದೆ. ಪರಿಸರವನ್ನು ಸ್ವಚ್ಛಂದವಾಗಿ ಇಟ್ಟುಕೊಳ್ಳುವಲ್ಲಿ ಪೌರ ಕಾರ್ಮಿಕರ ಕಾರ್ಯ ಮೆಚ್ಚುವಂತಹದು. ಎಲ್ಲೆಂದರಲ್ಲಿ ಬಿಸಾಡುವ ವಿಷಕಾರಿ ಪ್ಲಾಸ್ಟಿಕ್ ನ್ನು ಪ್ರಾಣಿಗಳು ಸೇವಿಸಿ ಪ್ರಾಣವನ್ನು ಕಳೆದುಕೊಳ್ಳುತ್ತಿವೆ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಅವರು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷರಾದ ಎಮ್. ಎಸ್. ಬಾಣದ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ಲಾಸ್ಟಿಕ್ ಬಳಕೆಯನ್ನು ನಿಷೇಧ ಮಾಡಬೇಕಾಗಿದೆ. ಅತಿ ಹೆಚ್ಚಿನ ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಹಾನಿ ಉಂಟಾಗುತ್ತಿದೆ. ಪರಿಸರ ಸ್ವಚ್ಛತೆಯಲ್ಲಿ ಪೌರ ಕಾರ್ಮಿಕರ ಕಾರ್ಯ ಶ್ಲಾಘನೀಯ. ಉತ್ತಮ ಪರಿಸರದಿಂದ ಉತ್ತಮ ಆರೋಗ್ಯ ಕಾಯ್ದುಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರು ಹಾಗೂ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಯಮನಪ್ಪ ಕೆ., ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ನಾಗೇಶ್ ನಾಯ್ಕ, ಹಿರಿಯ ಆರೋಗ್ಯ ನಿರೀಕ್ಷಕರಾದ ಶೇಖರ್ ಲಮಾಣಿ, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಹಿರಿಯ ಶ್ರೇಣಿಯ, ಕಿರಿಯ ಶ್ರೇಣಿಯ ನ್ಯಾಯಾಧೀಶರು, ನ್ಯಾಯಾಲಯಗಳ ಸಿಬ್ಬಂದಿ ಮತ್ತು ವಕೀಲರು ಭಾಗವಹಿಸಿದ್ದರು.