"ಫಾರೆಸ್ಟ್" ಚಿತ್ರದ "ಪೈಸಾ ಪೈಸಾ ಪೈಸಾ" ಹಾಡಿಗೆ ಅಭಿಮಾನಿಗಳು ಫಿದಾ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ - ಸಿನಿಮಾ ಕಮಾಲು
"ಅಡ್ವೆಂಚರ್ಸ್ ಕಾಮಿಡಿ ಕಥಾಹಂದರ ಹೊಂದಿರುವ ಈ ಮಲ್ಟಿಸ್ಟಾರರ್ ಚಿತ್ರದ ಟ್ರೇಲರ್ ಜನವರಿ10ರಂದು ಬಿಡುಗಡೆ .
ಆರಂಭದಿಂದಲೂ ಕುತೂಹಲ ಮೂಡಿಸಿರುವ, ಅಡ್ವೆಂಚರ್ಸ್ ಕಾಮಿಡಿ ಕಥಾಹಂದರ ಒಳಗೊಂಡಿರುವ, ಮಲ್ಟಿ ಸ್ಟಾರರ್ ಸಿನಿಮಾ "ಫಾರೆಸ್ಟ್" ಚಿತ್ರದ "ಪೈಸಾ ಪೈಸಾ ಪೈಸಾ" ಹಾಡು ಇತ್ತೀಚಿಗೆ ಬಿಡುಗಡೆಯಾಗಿ, ಐದು ಮಿಲಿಯನ್ ಗೂ ಅಧಿಕ ವೀಕ್ಷಣೆಯಾಗಿದೆ. "ಬಹದ್ದೂರ್" ಚೇತನ್ ಕುಮಾರ್ ಅವರು ಬರೆದು, ಚಂದನ್ ಶೆಟ್ಟಿ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಧರ್ಮವಿಶ್ ಸಂಗೀತ ನೀಡಿರುವ ಈ ಹಾಡಿಗೆ ಅಜಯ್ ಶಿವಶಂಕರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಚಿಕ್ಕಣ್ಣ, ಗುರುನಂದನ್, ಅನೀಶ್ ತೇಜೇಶ್ವರ್, ರಂಗಾಯಣ ರಘು, ಶರಣ್ಯ ಶೆಟ್ಟಿ ಹಾಗೂ ಅರ್ಚನಾ ಕೊಟ್ಟಿಗೆ ಹೆಜ್ಜೆ ಹಾಕಿದ್ದಾರೆ. RAP ಶೈಲಿಯಲ್ಲಿರುವ ಈ ಹಾಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಶೀರ್ಷಿಕೆಯಿಂದಲೇ ಜನರ ಮನಸ್ಸಿಗೆ ಹತ್ತಿರವಾಗಿರುವ ಈ ಚಿತ್ರ ಜನವರಿ 24 ರಂದು ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಜನವರಿ 10ರಂದು ಟ್ರೇಲರ್ ಬಿಡುಗಡೆಯಾಗಲಿದೆ. ಬಿಡುಗಡೆಗೂ ಪೂರ್ವವಾಗಿ ಚಿತ್ರದ ಪ್ರಚಾರ ಬಿರುಸಿನಿಂದ ಸಾಗಿದೆ. ನಮ್ಮ ಚಿತ್ರದ ಪ್ರಚಾರಕ್ಕೆ ಪಿ.ವಿ.ಆರ್ ಸಂಸ್ಥೆ ಕೈಜೋಡಿಸಿದೆ. ಜನವರಿ ಹತ್ತರಿಂದ ಎಲ್ಲಾ ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಟ್ರೇಲರ್ ಪ್ರದರ್ಶನವಾಗಲಿದೆ. ಜನವರಿ 24ರಂದು ಚಿತ್ರವನ್ನು ಅದ್ದೂರಿಯಾಗಿ ಬಿಡುಗಡೆ ಮಾಡುವ ಸಿದ್ದತೆ ನಡೆಯುತ್ತಿದೆ ಎಂದು ನಿರ್ಮಾಪಕ ಎನ್ ಎಂ ಕಾಂತರಾಜ್ ತಿಳಿಸಿದ್ದಾರೆ.
ಕಾಡಿನಲ್ಲೇ ಹೆಚ್ಚು ಭಾಗದ ಚಿತ್ರೀಕರಣ ನಡೆದಿರುವ ಈ ಚಿತ್ರವನ್ನು ಚಂದ್ರಮೋಹನ್ ನಿರ್ದೇಶಿಸಿದ್ದಾರೆ.
ಸತ್ಯಶೌರ್ಯ ಸಾಗರ್ ಹಾಗೂ ಚಂದ್ರಮೋಹನ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ರಚಿಸಿದ್ದಾರೆ. ಸತ್ಯಶೌರ್ಯ ಸಾಗರ್ ಅವರೆ ಸಂಭಾಷಣೆಯನ್ನೂ ಬರೆದಿದ್ದಾರೆ. ಧರ್ಮವಿಶ್ ಸಂಗೀತ ನಿರ್ದೇಶನ, ಆನಂದ್ ರಾಜಾ ವಿಕ್ರಮ್ ಅವರ ಹಿನ್ನೆಲೆ ಸಂಗೀತ, ರವಿಕುಮಾರ್ ಅವರ ಛಾಯಾಗ್ರಹಣ, ಅರ್ಜುನ್ ಕಿಟ್ಟು ಅವರ ಸಂಕಲನ, ಅಮರ್ ಅವರ ಕಲಾ ನಿರ್ದೇಶನ ಹಾಗೂ ಡಾ.ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್, ರಂಗಾಯಣ ರಘು ಪ್ರಮುಖಪಾತ್ರದಲ್ಲಿ ನಟಿಸಿರುವ "ಫಾರೆಸ್ಟ್" ಚಿತ್ರದ ತಾರಾಬಳಗದಲ್ಲಿ ಶರಣ್ಯ ಶೆಟ್ಟಿ, ಅರ್ಚನಾ ಕೊಟ್ಟಿಗೆ, ಅವಿನಾಶ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಂಜೆ, ಸೂರಜ್ ಪಾಪ್ಸ್, ಸುನೀಲ್‌ಕುಮಾರ್ ಮುಂತಾದವರಿದ್ದಾರೆ.