ತೆಲಂಗಾಣಕ್ಕೆ ನೀರು : ರೈತ ವಿರೋಧಿ ಕೆಲಸ

ದೇವರಹಿಪ್ಪರಗಿ: ಜಿಲ್ಲೆಯಲ್ಲಿ ಸುಮಾರು ಐದುನೂರು ಕೆರೆಗಳು ಖಾಲಿಯಿದ್ದು, ಕುಡಿಯುವ ನೀರಿಗಾಗಿ ಈಗಲೇ ಹಾಹಾಕಾರ ಪ್ರಾರಂಭವಾಗಿದೆ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತೆಲಂಗಾಣಕ್ಕೆ ನೀರು ಹರಿಸುತ್ತಿರುವುದು ರೈತ ವಿರೋಧಿ ಕೆಲಸವಾಗಿದೆ ಎಂದು ರಾಜ್ಯ ರೈತ ಮತ್ತು ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಎಂದು ಆರೋಪಿಸಿದ್ದಾರೆ.
ನಮ್ಮ ಜಿಲ್ಲೆಯಲ್ಲಿಯೇ ನೀರಿನ ಅಭಾವ ಹೆಚ್ಚಾಗಿದೆ. ಬೇಸಿಗೆ ಇನ್ನು ಮುಂದಿದೆ, ಆದರೂ ಅನ್ಯ ರಾಜ್ಯಕ್ಕೆ ನೀರು ಹರಿಸುತ್ತಿರುವುದು ಯÁವ ನ್ಯಾಯ?. ಇದರ ಜೊತೆಯಲ್ಲಿ ಜಿಲ್ಲೆಯ ಇಬ್ಬರೂ ಸಚಿವರು ನೀರಿನ ವಿಷಯದಲ್ಲಿ ತಮಗೇನು ಗೊತ್ತಿಲ್ಲ ಎನ್ನುವಂತೆ ರೈತ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ. ಜವಾಬ್ದಾರಿ ಸ್ಥಾನದಲ್ಲಿದ್ದುಕೊಂಡು ನೀರಿನ ವಿಷಯದಲ್ಲಿ ರೈತರೊಂದಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಬೇಕು. ನಮ್ಮ ಜಿಲ್ಲೆಯಲ್ಲಿ ಈಗಲೇ ಜನ-ಜಾನುವಾರುಗಳು ನೀರಿನ ತಾಪತ್ರಯ ತೊಂದರೆ ಅನುಭವಸುತ್ತಿದ್ದಾರೆ. ಕೆರೆಗಳಲ್ಲಿ ನೀರಿಲ್ಲದೆ ಒಣಗಿ ನಿಂತಿವೆ. ಕಾಲುವೆಗಳಲ್ಲಿ ನೀರು ಕಾಣದಾಗಿದೆ. ಆದರೂ ತೆಲಂಗಾಣ ರಾಜ್ಯಕ್ಕೆ ೧. ೨೭ ಟಿಎಂಸಿ ನೀರು ಹರಿಸಿರುವುದು ಅಕ್ಷಮ್ಯ ಅಪರಾಧವಾಗಿದೆ. ಸರಕಾರ, ಅಧಿಕಾರಿಗಳಿಗೆ ರೈತರ ಕುರಿತು ಒಂದಿಷ್ಟು ಕಾಳಜಿಯಿಲ್ಲದಂತಾಗಿದೆ. ಅದಕ್ಕಾಗಿ ಇನ್ನು ಮುಂದೆ ಅನ್ಯ ರಾಜ್ಯಕ್ಕೆ ನೀರು ಬಿಡುವುದನ್ನು ತಕ್ಷಣವೇ ನಿಲ್ಲಿಸಬೇಕು. ಮೊದಲು ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಬೇಕು. ಕುಡಿಯುವ ನೀರಿಗಾಗಿ ಸಾಕಷ್ಟು ನೀರು ಸಂಗ್ರಹ ಮಾಡಿಕೊಂಡು ರೈತರು, ಜನ-ಜಾನುವಾರುಗಳಿಗೆ ಅನುಕೂಲವಾದ ಬಳಿಕ ನೀರು ಬಿಡಲು ನಮ್ಮ ಅಭ್ಯಂತರವಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ದೇವರಹಿಪ್ಪರಗಿ ತಾಲೂಕು ಅಧ್ಯಕ್ಷ ಈರಪ್ಪ ಕುಳೆಕುಮುಟಗಿ, ಕಾರ್ಯಾಧ್ಯಕ್ಷ ಶಿವಾನಂದಯ್ಯ ಹಿರೇಮಠ, ಮುಖಂಡರಾದ ಸುನಂದಾ ಸೊನಳ್ಳಿ, ಶಾಖಿರಾ ಹೆಬ್ಬಾಳ, ಮಹಾದೇವಪ್ಪ ತೇಲಿ, ಪ್ರಕಾಶ ತೇಲಿ, ಸೋಮು ಬಿರಾದಾರ, ಎಸ್ ಎಸ್ ಸಾಲಿಮಠ, ಸಂಗಪ್ಪ ಟಕ್ಕೆ, ನಜೀರ ನಂದರಗಿ, ಜಕರಾಯ ಪೂಜಾರಿ ಸೇರಿದಂತೆ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳು ರೈತರು, ಸಾರ್ವಜನಿಕರು ಪತ್ರಿಕಾ ಪ್ರಕಟಣೆಯಲ್ಲಿ ಸರಕಾರವನ್ನು ಆಗ್ರಹಿಸಿದ್ದಾರೆ.