ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ದೇವರಹಿಪ್ಪರಗಿ: ಮಗು ಹಾಗೂ ವೈಯಕ್ತಿಕ ಆರೋಗ್ಯಕ್ಕಾಗಿ ತಾಯಂದಿರು ಪೌಷ್ಟಿಕಾಂಶಗಳನ್ನು ಒಳಗೊಂಡ ಆಹಾರ ಸೇವನೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಸಿಂದಗಿ ಸಿಡಿಪಿಓ ಎಸ್ ಎನ್ ಹಿರೇಮಠ ಹೇಳಿದರು.
ಪಟ್ಟಣದ ಕರಿದೇವರ ದೇವಸ್ಥಾನದ ಆವರಣದಲ್ಲಿ ಜರುಗಿದ ರಾಷ್ಟ್ರೀಯ ಪೋಷಣಾ ಅಭಿಯಾನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಇಲಾಖೆ ಅಡಿಯಲ್ಲಿ ದೊರೆಯುವಂತ ಸೌಲಭ್ಯಗಳನ್ನು ಮನೆ, ಮನಗಳಿಗೆ ತಲುಪಿಸಲು ಕಾರ್ಯಕರ್ತೆಯರು ಶ್ರಮವಹಿಸಬೇಕು ಎಂದರು. ಎಸಿಡಿಪಿಓ ಎಸ್.ಎನ್. ಕೋರವಾರ ಮಾತನಾಡಿ, ಇಂದಿನ ದಿನಗಳಲ್ಲಿ ಹಳೆಯ ಆಹಾರ ಪದ್ಧತಿ ಮರೆಯಾಗುತ್ತಿದೆ. ಇದರಿಂದ ಮಹಿಳೆ ಹಾಗೂ ಮಕ್ಕಳ ಆರೋಗ್ಯದ ಮೇಲೆ ಪರಿಣಾಮಗಳಾಗುತ್ತಿವೆ. ಆದ್ದರಿಂದ ನಾವು ಕಾಳು, ಹಣ್ಣು, ಹಂಪಲು, ತರಕಾರಿ ಸೇರಿದಂತೆ ಸಿರಿಧಾನ್ಯಗಳನ್ನು ಆಹಾರದಲ್ಲಿ ಸಮಪ್ರಮಾಣದಲ್ಲಿ ಬಳಕೆ ಮಾಡಬೇಕು ಎಂದರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ ಮಕ್ಕಳ ಭದ್ರ ಬುನಾದಿಗೆ ಶಿಕ್ಷಕಿಯರ ಪ್ರಾಮಾಣಿಕ ಪ್ರಯತ್ನ ಅಗತ್ಯವಾಗಿದೆ ಎಂದರು. ನಂತರ ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸೀಮಂತ, ಮಕ್ಕಳಿಗೆ ಅನ್ನಪ್ರಾಶನ, ಹೆಣ್ಣುಮಗುವಿನ ಜನ್ಮದಿನಾಚರಣೆ, ಚಿಕ್ಕಮಕ್ಕಳ ಛದ್ಮವೇಶ ಜರುಗಿ ಉಡುಗೊರೆ ನೀಡಲಾಯಿತು.
ಗ್ರಾಮಪಂಚಾಯಿತಿ ಅಧ್ಯಕ್ಷೆ ಜಯಶ್ರೀ ದೇವಣಗಾಂವ, ಉಜ್ವಲ ಸಂಸ್ಥೆಯ ಸಾಗರ ಘಾಟಗೆ, ಪಟ್ಟಣ ಪಂಚಾಯಿತಿ ಸದಸ್ಯರಾದ ಕಾಸು ಜಮಾದಾರ, ಶಾಂತಯ್ಯ ಜಡಿಮಠ, ಮಂಗಳೇಶ ಕಡ್ಲೇವಾಡ, ರತ್ನಾಬಾಯಿ ದೇವೂರ, ಮೇಲ್ವಿಚಾರಕಿಯರದ ಅಂಬಿಕಾ ಕುಂಬಾರ, ಶಾಂತಾ ನಾಯಕ, ರಶ್ಮೀ ಗುತ್ತೇದಾರ, ಸರಸ್ವತಿ ಕೋಟ್ಯಾಳ, ಪ್ರೇಮಾ ಕೊಣ್ಣೂರ, ಹೋಳೆನವರ ಸೇರಿದಂತೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸಹಾಯಕಿ ಯರು, ಹಾಗೂ ತಾಯಂದಿರು ಇದ್ದರು.