ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆ ಬಗೆಹರಿಸಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ಬಬಲೇಶ್ವರ: ೨೦೧೬ ಕ್ಕಿಂತ ಮುಂಚೆ ೧ ರಿಂದ ೭/೮ ಕ್ಕೆ ನೇಮಕಗೊಂಡ ಶಿಕ್ಷಕರ ಹಿಂಬಡ್ತಿಯನ್ನು ಕೂಡಲೇ ಹಿಂಪಡೆದು, ಪದವಿ ಹೊಂದಿದ ಎಲ್ಲ ಶಿಕ್ಷಕರನ್ನು ಒಂದೇ ಬಾರಿಗೆ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರೆಂದು ಸೇವಾಹಿರಿತನದೊಂದಿಗೆ ಪದನಾಮೀಕರಿಸುವುದರ ಜೊತೆಗೆ ಮುಖ್ಯಶಿಕ್ಷಕ ಹುದ್ದೆಗೆ ಹಾಗೂ ಪ್ರೌಢಶಾಲಾ ಶಿಕ್ಷಕ ಬಡ್ತಿಗೆ ಈ ಮುಂಚಿನ ನಿಯಮಾವಳಿಯಂತೆ ಸೇವಾ ಹಿರಿತನದ ಆಧಾರದ ಮೇಲೆ ನೀಡಲು ಆಗ್ರಹಿಸಿ ಸರಕಾರಕ್ಕೆ ಒತ್ತಾಯಿಸಲು ಹಾಗೂ ಸರಕಾರ ರಚಿಸಿರುವ ಸಮಿತಿಯು ನಿಗದಿತ ಕಾಲಮಿತಿಯೊಳಗೆ ವರದಿಯನ್ನು ನೀಡಿ ೨೦೧೬ ಕ್ಕಿಂತ ಮುಂಚೆ ನೇಮಕವಾದ ಸಮಸ್ತ ಶಿಕ್ಷಕರ ಹಕ್ಕುಗಳನ್ನು ರಕ್ಷಿಸಲು ಆಗ್ರಹಿಸಿ, ಬಬಲೇಶ್ವರ ತಾಲೂಕು ಶಿಕ್ಷಕ ಸಂಘದ ನೇತೃತ್ವದಲ್ಲಿ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಅವರಿಗೆ ರವಿವಾರ ಮನವಿ ಸಲ್ಲಿಸಲಾಯಿತು.
ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕರು ಈ ಕುರಿತು ಮುತುವರ್ಜಿ ವಹಿಸಿ ಸಮಿತಿಗೆ ಮನವರಿಕೆ ಮಾಡವುದರ ಜೊತೆಗೆ ಶಿಕ್ಷಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿ ಶಿಕ್ಷಕರಿಗೆ ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಿಕ್ಷಕ ಸಂಘದ ಬಬಲೇಶ್ವರ ಘಟಕದ ಅಧ್ಯಕ್ಷೆ ಎನ್.ಎಲ್. ಇಂಗಳೆ, ಪ್ರಧಾನ ಕಾರ್ಯದರ್ಶಿ ಉದಯಕುಮಾರ್ ಕೋಟ್ಯಾಳ, ಅಶ್ವಿನಿ ಸುರೇಬಾನ್ ,ಶಿಕ್ಷಕ ಸಂಘದ ನಿರ್ದೇಶಕ ಸಿದರಾಯ ಅಥಣಿ, ಹೋರಾಟಗಾರ ಶಿಕ್ಷಕ ಪ್ರವೀಣ ಪತ್ತಾರ, ಲಕ್ಷ್ಮಣ ಕೊರಬು, ವಿಜಯಲಕ್ಷ್ಮಿ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.