ಹಾದಿಮನಿ ಆಸ್ಪತ್ರೆಯ ಉಚಿತ ಆರೋಗ್ಯ ತಪಾಸಣೆ ಶಿಬಿರ ಶ್ಲಾಘನೀಯ: ಶಾಸಕ ಅಶೋಕ ಮನಗೂಳಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ಆಲಮೇಲ: ಇತ್ತೀಚೆಗೆ ಆಹಾರ ಪದ್ದತಿಯಲ್ಲಿನ ಬದಲಾವಣೆಯಿಂದಾಗಿ ಜನರಲ್ಲಿ ರಕ್ತದೊತ್ತಡ, ಸಕ್ಕರೆ ಖಾಯಿಲೆ, ಹೃದಯ ಸಂಬಂಧಿಸಿದ ಖಾಯಿಲೆ ಸೇರಿದಂತೆ ಅನೇಕ ರೋಗಗಳು ಸಾಮಾನ್ಯವಾಗಿವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಡಾ.ಸಮೀರ ಹಾದಿಮನಿ ಹಾಗೂ ಸಮಾನ ಮನಸ್ಕರ ಬಳಗದ ವತಿಯಿಂದ ಹಮ್ಮಿಕೊಂಡ ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಹಲವು ವರ್ಷಗಳಿಂದ ಹಾದಿಮನಿ ಆಸ್ಪತ್ರೆಯು ಗ್ರಾಮೀಣ ಪ್ರದೇಶದ ಬಡ ರೋಗಿಗಳಿಗಾಗಿ ಉಚಿತ ಆರೋಗ್ಯ ಶಿಬಿರ ಏರ್ಪಡಿಸುವ ಮೂಲಕ ಆರೋಗ್ಯ ಜಾಗೃತಿ ಮತ್ತು ರೋಗಿಗಳ ಆರ್ಥಿಕ ಹೊರೆ ತಗ್ಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಹಾದಿಮನಿ ಆಸ್ಪತ್ರೆಯ ವೈದ್ಯ ಡಾ.ಸಮೀರ ಹಾದಿಮನಿ ಇವರ ಸಾಮಾಜಿಕ ಕಳಕಳಿ ಹಾಗೂ ನಿಸ್ವಾರ್ಥ ಸೇವಾ ಕಾರ್ಯ ಶ್ಲಾಘನೀಯ ಎಂದರು.
ವಿಜಯಪುರದ ನೇತ್ರ ತಜ್ಞ ಡಾ.ಬಸವರಾಜ್ ಝಳಕಿ, ಮೂತ್ರಪಿಂಡ ತಜ್ಞ ಡಾ. ಸಂದೀಪ ಪಾಟೀಲ್, ಎಲುಬು-ಕೀಲು ತಜ್ಞ ಡಾ. ಪ್ರೀತಿಶ್ ಯಂಡಿಗೇರೆ ಮಾತನಾಡಿ ಜನರು ತಮ್ಮ ಆರೋಗ್ಯದ ಕುರಿತು ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಇಂತಹ ಉಚಿತ ಆರೋಗ್ಯ ಶಿಬಿರಗಳು ಹಮ್ಮಿಕೊಂಡಾಗ ಶಿಬಿರದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡಿಸಿಕೊಂಡು ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸಬೇಕು ಎಂದರು ಹೇಳಿದರು. ಡಾ. ಸಮೀರ ಹಾದಿಮನಿ ಪ್ರಾಸ್ತಾವಿಕ ಮಾತನಾಡಿದರು.ಮಕ್ಕಳ ತಜ್ಞ ಡಾ ರಾಜೇಶ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದಲ್ಲಿ ಐದು ನೂರಕ್ಕೂ ಅಧಿಕ ರೋಗಿಗಳು ಭಾಗವಹಿಸಿ, ರಕ್ತ, ಮೂತ್ರ ತಪಾಸಣೆ ಸಂಧಿವಾತ, ಸ್ನಾಯು ಸೆಳೆತ, ಮೂಳೆ ಮುರಿತ, ಎಲುಬು-ಕೀಲುಗಳ ಸಮಸ್ಯೆ, ಅಂಧತ್ವ, ಕಣ್ಣಿನ ಪೊರೆ, ಬಿಪಿ, ಮಧುಮೇಹ (ಶುಗರ್), ಕಿಡ್ನಿ ಸ್ಟೋನ್ಸ್ (ಹರಳುಗಳು), ಮೂತ್ರಕೋಶದ ಸೋಂಕು, ಕಿಡ್ನಿ ವೈಫಲ್ಯ, ಉರಿ ಮೂತ್ರ ಸೇರಿದಂತೆ ಮುಂತಾದ ಸಮಸ್ಯೆಗಳ ತಪಾಸಣೆ ಮಾಡಿಸಿಕೊಂಡು ಶಿಬಿರದ ಸದುಪಯೋಗ ಪಡೆದುಕೊಂಡರು. ಇದೇ ವೇಳೆ ಡಾ.ಬಸವರಾಜ್ ಝಳಕಿ, ಡಾ.ಸಂದೀಪ್ ಪಾಟೀಲ್, ಪ್ರೀತಿಶ್ ಯಂಡಿಗೇರೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯ ಮೇಲೆ ಪಟ್ಟಣ ಪಂಚಾಯತ ಅಧ್ಯಕ್ಷ ಸಾದೀಕ್ ಸುಂಬಡ, ಡಾ. ಜುನೇರಾ ಹಾದಿಮನಿ, ಸಮಾನ ಮನಸ್ಕರ ಬಳಗದ ಸಚಿನ್ ಕ್ಷೀರಸಾಗರ, ಮಂಜುನಾಥ ಯಂಟಮಾನ, ಸಿದ್ಧಲಿಂಗ ಕ್ಷೇಮಶೆಟ್ಟಿ, ಬಂದೇನವಾಜ್ ನಾದ, ಆರಕ್ಷಕ ಮೌಲಾಲಿ ಆಲಗೂರ ಉಪಸ್ಥಿತರಿದ್ದರು.