ಯುವನಿಧಿ: ಜಿಲ್ಲೆಯಲ್ಲಿ ನೋಂದಣಿ ಆರಂಭ ಕರ್ನಾಟಕ ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೆಂದ್ರಗಳಲ್ಲಿ ನೋಂದಣಿಗೆ ಅವಕಾಶ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ವಿಜಯಪುರ : ರಾಜ್ಯ ಸರ್ಕಾರದ ಯೋಜನೆಯಾದ “ಯುವನಿಧಿ” ಯೋಜನೆಯಲ್ಲಿ 2022-23 ಹಾಗೂ 2023-24ನೇ ಸಾಲಿನಲ್ಲಿ ತೇರ್ಗಡೆಯಾದ ಪದವಿ, ಸ್ನಾತಕೋತ್ತರ ಪದವಿ ಮತ್ತು ಡಿಪ್ಲೋಮಾ ಅಭ್ಯರ್ಥಿಗಳನ್ನು ಯುವನಿಧಿ ಯೋಜನೆ ವ್ಯಾಪ್ತಿಗೆ ತರಲು ಜನವರಿ 6ರಿಂದ 20ರವರೆಗೆ ವಿಶೇಷ ನೋಂದಣಿ ಅಭಿಯಾನವನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಯೋಜನೆಯಡಿ ಅರ್ಹ ಪದವಿಧರರಿಗೆ ಮಾಸಿಕ 3,000ರೂ ಹಾಗೂ ಡಿಪ್ಲೋಮಾ ತೇರ್ಗಡೆಯಾದವರಿಗೆ ರೂ 1,500 ಮಾಸಿಕ ಭತ್ಯೆ ಸಿಗಲಿದೆ. ಅರ್ಹ ಅಭ್ಯರ್ಥಿಗಳು ನೇರವಾಗಿ ಸೇವಾ ಸಿಂಧು ಪೋರ್ಟಲ್ https://sevssindhugs.karnataka.gov.in ನಲ್ಲಿ ತಮ್ಮ ಹೆಸರು ನೋಂದಾಯಿಸಿ ಕೊಳ್ಳಬಹುದು. ಅರ್ಜಿ ಸಲ್ಲಿಸಿದ ನಂತರ ಸೇವಾ ಸಿಂಧು ಪೋರ್ಟಲ್‌ನಲ್ಲಿ ತಮ್ಮ ದಾಖಲಾತಿಯನ್ನು ಪರಿಶೀಲಿಸಿಕೊಳ್ಳಬಹುದು. ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ದಾಖಲಾತಿ ಆಗಿರದಿದ್ದರೆ ಅಭ್ಯರ್ಥಿಗಳನ್ನು ತಮ್ಮ ದಾಖಲಾತಿಗಳನ್ನು ತೆಗೆದುಕೊಂಡು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿಗೆ ಎಸ್.ಎಸ್.ಎಲ್.ಸಿ ಪ್ರಮಾಣ ಪತ್ರ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿಗೆ ಪಿಯುಸಿ ಪ್ರಮಾಣ ಪತ್ರ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ಪದವಿ ಮತ್ತು ಡಿಪ್ಲೋಮಾ ಪ್ರಮಾಣ ಪತ್ರಗಳನ್ನು ಪರಿಶೀಲಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಸರ್ಕಾರಿ, ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ, ಸ್ವಯಂ ಉದ್ಯೋಗ ಮಾಡುತ್ತಿರುವ ಹಾಗೂ ಪದವಿ/ಡಿಪ್ಲೋಮಾ ಮುಗಿದ ನಂತರ ಮುಂದಿನ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಅರ್ಹರಿರುವುದಿಲ್ಲ. ಅರ್ಹ ಅಭ್ಯರ್ಥಿಗಳು ಕರ್ನಾಟಕ ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೆಂದ್ರಗಳಲ್ಲಿ ಸೇವಾಸಿಂಧು ಪೋರ್ಟಲ್‌ನಲ್ಲಿ ಲಾಗಿನ್ ಮಾಡಿಕೊಂಡು ಯುವನಿಧಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಸ್ಟೇಶನ್ ರಸ್ತೆ ವಿಜಯಪುರ ಕಚೇರಿಯನ್ನು ಹಾಗೂ ದೂರವಾಣಿ ಸಂಖ್ಯೆ 08352-250383ಗೆ ಸಂಪರ್ಕಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.