ಮೂವರು ದರೋಡೆಕೋರರ ಬಂಧನ : ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ

Feb 2, 2025 - 01:19
Feb 2, 2025 - 01:33
 0
ಮೂವರು ದರೋಡೆಕೋರರ ಬಂಧನ : ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ

ವಿಜಯಪುರ: ನಗರ ಮತ್ತು ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿ ಜನರ ನಿದ್ದೆಗೆಡಿಸಿದ್ದ ಸುಲಿಗೆ, ದರೋಡೆ ಆರೋಪಿತರನ್ನು ಬಂಧಿಸುವಲ್ಲಿ ಜಿಲ್ಲಾ ಪೋಲೀಸರು ಯಶಸ್ವಿಯಾಗಿದ್ದಾರೆ.

ಈ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ಬಿ ನಿಂಬರಗಿ ಅವರು ಶನಿವಾರ ಮಾಹಿತಿ ನೀಡಿದ್ದಾರೆ.

ಸುಲಿಗೆ/ದರೋಡೆ ಪ್ರಕರಣಗಳಿಗೆ ಸಂಬಂಧಿಸಿದಂತೆ
ಬಂಧಿತ ಮೂವರು ಆರೋಪಿತರೂ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್ತದ ಏಕತಾ ನಗರದವರಾಗಿದ್ದಾರೆ.

ಸುರೇಶ ವಿಶ್ವಲ ಮದುಕರ ಚವ್ಹಾಣ (42 ವರ್ಷ), ಸೂರಜ್ ತುಳಸಿರಾಮ್ ಚವ್ಹಾಣ (32 ) ಆಕಾಶ ಅಕ್ಷಯ ಸುಖದೇವ ರಾವತ್ (31 ವರ್ಷ) ಬಂಧಿತ ಆರೋಪಿತರು.

ಜ. 16 ರಂದು ರಾತ್ರಿ 00.45 ಗಂಟೆಯಿಂದ 01.00 ಗಂಟೆಯ ನಡುವಿನ ಅವಧಿಯಲ್ಲಿ ವಿಜಯಪುರ ನಗರದ ಜೈನಾಪುರ ಲೇಔಟ್‌ನಲ್ಲಿ ಒಂದು ಮನೆಗೆ 04 ಜನ ಸುಲಿಗೆಕೋರರು ನುಗ್ಗಿ ಮನೆಯ ಮುಖ್ಯ ಬಾಗಿಲನ್ನು ಮುರಿದು, ಒಳಗೆ ನುಗ್ಗಿ ಮನೆಯ ಮಾಲೀಕರಾದ ಸಂತೋಷ ಕಾನಾಳ ಎಂಬುವವರಿಗೆ ಚಾಕುವಿನಿಂದ ಇರಿದು, ಒಂದನೇಯ ಅಂತಸ್ತಿನಿಂದ ಕೆಳಗೆ ಕೆಡವಿ ಗಾಯಪಡಿಸಿ, ನಂತರ ಅವರ ಪತ್ನಿಯ ಕೊರಳಿನಲ್ಲಿದ್ದ 15 ಗ್ರಾಂ. ಬಂಗಾರದ ತಾಳಿಸರವನ್ನು ಕಿತ್ತುಕೊಂಡು ಹೋಗಿದ್ದರು.

ಈ ಬಗ್ಗೆ ಭಾಗ್ಯಜ್ಯೋತಿ ಸಂತೋಷ ಕಾನಾಳ ಇವರು ನೀಡಿದ ದೂರಿನ ಮೇರೆಗೆ ಗಾಂಧಿಚೌಕ ಪೊಲೀಸ್ ಠಾಣೆಯ ಗುನ್ನಾ ನಂ: 07/25 ಕಲಂ: 311 ಬಿ.ಎನ್.ಎಸ್-2023 ಅಡಿ ಪ್ರಕರಣ ದಾಖಲಾಗಿತ್ತು. 

ಅದೇ ರೀತಿ ಗಾಂಧಿಚೌಕ ಪೊಲೀಸ್ ಠಾಣೆ ಗುನ್ನಾ ನಂ: 02/25 ಕಲಂ: 309(4) ಬಿಎನ್ಎಸ್-2023 ಹಾಗೂ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 15/25 ಕಲಂ: 309(4) ಸಹ ಕಲಂ. 3(5) ಬಿ.ಎನ್.ಎಸ್-2023 ಆಡಿ ಒಟ್ಟು 03 ಸುಲಿಗೆ ಪ್ರಕರಣಗಳು ದಾಖಲಾಗಿದ್ದವು.

ನಗರದ ಜನತೆರಲ್ಲಿ ತಲ್ಲಣ ಸೃಷ್ಟಿಸಿದ್ದ ಈ ಪ್ರಕರಣಗಳ ಪತ್ತೆ ಕುರಿತು ಲಕ್ಷ್ಮಣ ನಿಂಬರಗಿ, ಐಪಿಎಸ್, ಜಿಲ್ಲಾ ಪೊಲೀಸ್ ಅಧೀಕ್ಷಕರು, ವಿಜಯಪುರ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ ರವರ ಮಾರ್ಗದರ್ಶನದಲ್ಲಿ, ಬಸವರಾಜ ಯಲಿಗಾರ, ಡಿಎಸ್‌ಪಿ ವಿಜಯಪುರ ನಗರ ಉಪ-ವಿಭಾಗ,  ಸುನೀಲ ಕಾಂಬಳೆ, ಡಿಎಸ್.ಪಿ ಸಿಇಎನ್ ಪಿಎಸ್, ಪ್ರದೀಪ ತಳಕೇರಿ, ಪಿಐ ಗಾಂಧಿಚೌಕ, ಪಿಎಸ್.ಐ ಗಳಾದ ರಾಜು ಮಮದಾಪೂರ, ಸೋಮೇಶ ಗೆಜ್ಜಿ, ವಿನೋದ ಪೂಜಾರಿ ಹಾಗೂ ಸಿಬ್ಬಂದಿಯನ್ನೊಳಗೊಂಡ ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದರು.

ಸುಲಿಗೆ, ದರೋಡೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಮೂವರೂ ಆರೋಪಿತರನ್ನು ಬಂಧಿಸಿ, ದಿನಾಂಕ: 29.01,2025 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸದರಿ ಪ್ರಕರಣವು ಪ್ರಸ್ತುತ ತನಿಖೆಯಲ್ಲಿದ್ದು, ಇನ್ನುಳಿದ ಆರೋಪಿತರ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.