ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ ಸಮರ್ಪಕವಾಗಿ ಜಾರಿಗೊಳಿಸಿ : ಜಿಲ್ಲಾಧಿಕಾರಿ ಟಿ.ಭೂಬಾಲನ್
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ವಿಜಯಪುರ: ಅನಧಿಕೃತವಾಗಿ ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಅಪರಾಧವಾಗಿದ್ದು, ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ, ಸಂಬAಧಿಸಿದ ಅಧಿಕಾರಿಗಳು ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಅಧಿಕಾರಿಗಳಿಗೆ ತಿಳಿಸಿದರು.
ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪಿಸಿಪಿಎನ್ಡಿಟಿ ಕಾಯ್ದೆಯ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಮಾಡುವುದು ಕಾಯ್ದೆಯನ್ವಯ ಅಪರಾಧವಾಗಿದ್ದು, ಒಂದು ವೇಳೆ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಸಂಬಧಿಸಿದ ಅಧಿಕಾರಿಗಳು ಅಂತಹವರ ಮೇಲೆ ಕಾಯ್ದೆಯನ್ವಯ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಹೊಸದಾಗಿ ಸ್ಕ್ಯಾನಿಂಗ್ ಕೇಂದ್ರಗಳ ಸ್ಥಾಪನೆಗೆ ಅರ್ಜಿ ಸಲ್ಲಿಸಿರುವ ಆಸ್ಪತ್ರೆ/ ಸ್ಕ್ಯಾನಿಂಗ್ ಕೇಂದ್ರಗಳ ಮಾಲೀಕರು, ಸದರಿ ಕಾಯ್ದೆ ಅಡಿಯಲ್ಲಿ ನೊಂದಣಿಯಾಗುವವರೆಗೆ ಬಳಸತಕ್ಕದಲ್ಲ, ಹಾಗೂ ಅದನ್ನು ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿ ಸದಸ್ಯರುಗಳು ಖಚಿತ ಪಡೆಸಿಕೊಳ್ಳಬೇಕು. ಒಂದು ವೇಳೆ ನೊಂದಣಿಯನ್ನು ಪಡೆದುಕೊಳ್ಳದೆ ಸ್ಕ್ಯಾನಿಂಗ್ ಯಂತ್ರಗಳನ್ನು ಬಳಸಿದ್ದಲ್ಲಿ ಅಂತಹವರ ವಿರುದ್ದ ಮೇಲೆ ಕಾಯ್ದೆಯನ್ವಯ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ಅವರು ಸೂಚಿಸಿದರು.
ರಾಜ್ಯ ಸಕ್ಷಮ ಪ್ರಾಧಿಕಾರದ ಪ್ರತ್ಯಾಯೋಜಿತ ಅಧಿಕಾರಿ ಮತ್ತು ತಂಡದವರು ದಿನಾಂಕ:೨೬/೧೨/೨೦೨೪ & ೨೭/೧೨/೨೦೨೪ ರಂದು ಜಿಲ್ಲೆಯಲ್ಲಿನ ಆಸ್ಪತ್ರೆ/ ಸ್ಕ್ಯಾನಿಂಗ್ ಕೇಂದ್ರಗಳಿಗೆ ಅನೀರಿಕ್ಷಿತವಾಗಿ ಭೇಟಿ ಪಿಸಿಪಿಎನ್ಡಿಸಿ ಕಾಯ್ದೆಯ ಉಲ್ಲಂಘನೆ ಮಾಡಿರುವ ೧) ದೇಸಾಯಿ ಆಸ್ಪತ್ರೆ ಇಂಡಿ ೨) ಗಜಾಕೋಶ ಆಸ್ಪತ್ರೆ ಇಂಡಿ ಹಾಗೂ ೩) ಆದಿತ್ಯ ಮೆಟರನಿಟಿ & ಜನರಲ್ ಆಸ್ಪತ್ರೆ ವಿಜಯಪುರ ಇವುಗಳಲ್ಲಿನ ಅಗತ್ಯ ದಾಖಲೆಗಳನ್ನು ವಶಪಡಿಸಿಕೊಂಡು ಅವರುಗಳ ಮೇಲೆ ಮುಂದಿನ ಕಾನೂನು ಕ್ರಮವನ್ನು ಜರುಗಿಸಲು ಸೂಚಿಸಿರುವುದರಿಂದ ಸಂಬಂದಪಟ್ಟ ಅಧಿಕಾರಿಗಳು ಈ ಮೂರು ಆಸ್ಪತ್ರೆಗಳ ಮೇಲೆ ಪಿ.ಸಿ.ಪಿ.ಎನ್.ಡಿ.ಟಿ ಕಾಯ್ದೆ ಅಡಿ ಪ್ರಕರಣವನ್ನು ದಾಖಲಿಸುವಂತೆ ಸೂಚಿಸಿದರು.
ಇನ್ನುಳಿದ ೪ ಸ್ಕ್ಯಾನಿಂಗ್ ಕೇಂದ್ರ/ಆಸ್ಪತ್ರೆಗಳಿಗೆ ನೀಡಲಾಗಿರುವ ನೋಟಿಸ್ ಗಳಿಗೆ ಸಲ್ಲಿಕೆಯಾಗಿರುವ ವಿವರಣೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಕಾಯ್ದೆ ಉಲ್ಲಂಘನೆ ಕಂಡು ಬರುವ ಸ್ಕ್ಯಾನಿಂಗ್ ಕೇಂದ್ರ/ಆಸ್ಪತ್ರೆಗಳ ಮೇಲೆ ಪಿಸಿಪಿಎನ್ಡಿಸಿ ಕಾಯ್ದೆಯನ್ವಯ ಕಾನೂನು ಕ್ರಮವನ್ನು ಜರುಗಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಹಾಗೂ ಜಿಲ್ಲಾ ಕುಟುಂಬ ಕಲ್ಯಾಣ ಸೂಚಿಸಿದರು.
ಪಿಸಿಪಿಎನ್ಡಿಸಿ ಕಾಯ್ದೆಯ ಕುರಿತು ಜಿಲ್ಲೆಯಾದ್ಯಂತೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ಕಾಯ್ದೆಯ ಕುರಿತು ತಿಳುವಳಿಕೆ ಮೂಡಿಸಬೇಕು. ಕಾಯ್ದೆಯ ನಿಯಮಗಳ ಕುರಿತು ಕರಪತ್ರಗಳನ್ನು ಮುದ್ರಿಸಿ ಜನನಿಬಿಡ ಪ್ರದೇಶಗಳಾದ ಬಸ್ನಿಲ್ದಾಣ, ರೈಲು ನಿಲ್ದಾಣ ಒಳಗೊಂಡಂತೆ ವಿವಿಧ ಸ್ಥಳಗಳಲ್ಲಿ ಪ್ರಚುರಪಡಿಸುವ ಮೂಲಕ ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸಬೇಕು. ಲಿಂಗಾನುಪಾತದ ಸಮಾನತೆ ಕಾಪಾಡಲು ಜಾಗೃತಿ ಅಭಿಯಾನ ಕೈಗೊಳ್ಳಬೇಕು. ರೇಡಿಯೋ ಜಿಂಗಲ್ಸ್ ಮೂಲಕ ಪ್ರಚುರಪಡಿಸಬೇಕು. ಜನನಿಬಿಡ ಪ್ರದೇಶಗಳಲ್ಲಿ ವಿಡಿಯೋ ಪ್ರದರ್ಶನ ಮೂಲಕ ಜಾಗೃತಿ ಮೂಡಿಸುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಭಾ.ಆ.ಸೇ , ವಿಜಯಪುರ ಉಪ ವಿಭಾಗಾಧಿಕಾರಿ ಶ್ರೀ ಗುರುನಾಥ ದಡ್ಡೆ, , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂಪತ್ ಗುಣಾರಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ, ಡಾ.ರಾಜೇಶ್ವರಿ ಗೊಲಗೇರಿ, ಪಿಸಿಪಿಎನ್ಡಿಟಿಯ ಸಲಹಾ ಸಮಿತಿ ಸದಸ್ಯರಾದ ಡಾ.ಟಿ.ಪಿ.ನಾಯ್ಡು, ಡಾ.ಶೈಲಜಾ ಬಿದರಿ, ಪೀಟರ್ ಅಲೆಕ್ಸಾಂಡರ್, ಎಸ್.ಜಿ.ರೂಡಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.