ಶಾಂತಿಕುಟೀರದಲ್ಲಿ ವಿದ್ಯಾರ್ಥಿಗಳ ಸಡಗರ : ಜ್ಞಾನ ಸಂವರ್ಧಿನಿ ಶಿಬಿರ

ವಿಜಯಪುರ : ಭಾರತೀಯ ಸುರಾಜ್ಯ ಸಂಸ್ಥೆ ಹಾಗೂ ಶಾಂತಿಕುಟೀರ ಟ್ರಸ್ಟ್ ನ ಅಡಿಯಲ್ಲಿ, ಜ್ಞಾನಪೂರಿತ ಕಲಿಕೆಯಿಂದ, ಕೂಡಿದ ವ್ಯಕ್ತಿತ್ವ ವಿಕಸನ ಶಿಬಿರವು ಜ.28 ರಂದು ಶಾಂತಿಕುಟೀರ ಕನ್ನೂರಿನಲ್ಲಿ ಜರುಗಿತು.
ಬೆಂಗಳೂರಿನ ದಿಶಾ ಭಾರತ ಸಂಸ್ಥೆಯ ಪ್ರದೀಪ ನಟರಾಜ್, ಶ್ರೀಮತಿ ಸ್ನೇಹಾ ದಾಮ್ಲೆ, ದೀಕ್ಷಿತ್ ಕುಶಲಪ್ಪ ಹಾಗೂ ಶಾಂತಿಕುಟೀರದ ಸಾಧಕ ಶ್ರೀಕೃಷ್ಣ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯ ನಿರ್ವಹಿಸಿದರು.
ಹತ್ತಾರು ಬಸ್ ಮುಖೇನ ಆಗಮಿಸಿದ ಎಕ್ಸಲಂಟ್ ಹಾಗೂ ವೇದ ಅಕಾಡೆಮಿಯ ವಿದ್ಯಾರ್ಥಿಗಳು ಮೊದಲು ಶಾಂತಿ ಕುಟೀರ ಆಶ್ರಮ ಪರಿಸರದಲ್ಲಿ ನಲಿದಾಡಿ ಸದ್ಗುರು ಮಹಾರಾಜರ ಸಮಾಧಿ ಮಂದಿರವಿರುವ ಸಭಾಂಗಣಕ್ಕೆ ಆಗಮಿಸಿದರು.
ಆಸನಸ್ಥ ಶಿಕ್ಷಕ ವೃಂದ ಹಾಗೂ ನೆರೆದಿರುವ 550 ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಸ್ವಾಗತವನ್ನು ಕೋರಲಾಯಿತು.
ನಂತರ ಶ್ರೀಕೃಷ್ಣ ಗುರೂಜಿಯವರಿಂದ ಸಾಮೂಹಿಕ ಭಜನೆ, ನಾಮಸ್ಮರಣೆ ಹಾಗೂ ಆರತಿಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.
ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕಾದ ಸದ್ಗುಣಗಳನ್ನು ,ನಮ್ಮ ವ್ಯಕ್ತಿತ್ವ ಎತ್ತರಕ್ಕೆ ಹೋಗಬೇಕಾದರೆ ನಮ್ಮಲ್ಲಿ ಇರಬೇಕಾದ ದೈವಿ ಗುಣಗಳಾದ ಪ್ರಾಮಾಣಿಕತೆ, ಮಾತಾಪಿತೃಗಳಿಗೆ ವಿಧೇಯತೆ, ಸಮಯದ ಸದುಪಯೋಗ, ಸತತೋದ್ಯೋಗ ಮುಂತಾದವುಗಳ ಬಗ್ಗೆ ತಿಳಿಸಿಕೊಟ್ಟ ಅವರು, 'ಧನವ ಗಳಿಸಬೇಕೆಂಥಾದ್ದು, ಈ ಜನರಿಗೆ ಕಾಣಿಸದಂಥಾದ್ದು, ಅನುದಿನ ಹರಿಹರ ಬ್ರಹ್ಮಾದಿಕರು ಹೌದ ಹೌದ ಹೌದ ಅನ್ನುವಂಥಾದ್ದು' ಎಂಬ ಅನುಭವ ಪದವನ್ನು ಅಭಿನಯದ ಮೂಲಕ ಮಾಡಿ ತೋರಿಸಿದರು. ಶ್ರೀ ಸಮರ್ಥ ಸದ್ಗುರು ಗಣಪತರಾವ ಮಹಾರಾಜರ ಜೀವನದಲ್ಲಿ ನಡೆದ ಘಟನೆಯ ದೃಷ್ಟಾಂತಗಳ ಮೂಲಕ ಮಕ್ಕಳಿಗೆ ನೀತಿ, ನಡತೆಯ ಬಗ್ಗೆ ಹೇಳಿದರು.
ಪ್ರದೀಪ ನಟರಾಜ ಅವರು ಮಾತನಾಡಿ ನಮ್ಮ ಜೀವನದಲ್ಲಿ ನಾವು ಪಡೆಯುವ ನಿಲುವು ಏನು? ಹೇಗೆ ಇರಬೇಕು? ಅಧ್ಯಯನದಲ್ಲಿ ಏಕಾಗ್ರತೆ ಹೇಗೆ ಸಾಧಿಸಬೇಕು? ಸ್ಮರಣ ಶಕ್ತಿ ಹೆಚ್ಚಿಸಿಕೊಳ್ಳುವ ರೀತಿ, ಇವುಗಳ ಕುರಿತು ಚಟುವಟಿಕೆ ಮತ್ತು ಪ್ರಾತ್ಯಕ್ಷಿಕೆಯ ಮೂಲಕ ತಿಳಿ ಹೇಳಿದರು.
ಮಹಾನ್ ಸಾಧಕರ, ಸತ್ಪುರುಷರ ವಿಶೇಷ ಘಟನೆಗಳು, ಭಾರತೀಯ ಸಂಸ್ಕಾರ, ಸಂಸ್ಕೃತಿಗೆ ಸಂಬಂಧ ಪಟ್ಟ ರಸಪ್ರಶ್ನೆಯನ್ನು ಏರ್ಪಡಿಸಿದರು.
ಪ್ರಸ್ತುತ ಪರಿಸ್ಥಿತಿ ಹಾಗೂ ಸಮಸ್ಯೆಗಳ ಬಗ್ಗೆ ಹಲವಾರು ವಿಚಾರಗಳನ್ನು ತಿಳಿಸಿದ ಅವರು ಸಾಧನೆಗೆ 'C3' ಎಂದರೆ Character, Culture, Country ಮುಖ್ಯ ಎಂದರು.
ದೀಕ್ಷಿತ್ ಕುಶಲಪ್ಪ ಅವರ ಅಧ್ಯಯನಕ್ಕೆ ನಿಮ್ಮ ಪುಸ್ತಕ ಅಷ್ಟೇ ಅಲ್ಲ, ಶಾರೀರಿಕ ಶಕ್ತಿ ಮತ್ತು ಮಾನಸಿಕ ಶಕ್ತಿ ಹಾಗೂ ದೈಹಿಕ ಶಕ್ತಿ ಉಪಯೋಗವಾಗುತ್ತದೆ ಎಂದು ಹೇಳಿದರು.
ಶ್ರೀಮತಿ ಸ್ನೇಹಾ ದಾಮ್ಲೆ ಮಾತನಾಡಿ ಸ್ವಾಮಿ ವಿವೇಕಾನಂದರ ಬಾಲ್ಯ, ವಿದ್ಯಾರ್ಥಿ ಜೀವನ ಹಾಗೂ ಅವರ ದೇಶಭಕ್ತಿಯ, ರಾಷ್ಟ್ರಪ್ರೇಮದ ಕಥೆಗಳನ್ನು, ನಮ್ಮ ಜೀವನದಲ್ಲಿ ನಡತೆ ಹೇಗಿರಬೇಕು, ಚಾರಿತ್ರ್ಯ ಹೇಗಿರಬೇಕು, ನಮ್ಮ ಸಂಸ್ಕೃತಿಯನ್ನು ಹೇಗೆ ಕಾಪಾಡಿಕೊಳ್ಳಬೇಕು, ಎಂಬುದನ್ನು ವಿಸ್ತಾರವಾಗಿ ತಿಳಿಸಿದರು.
ಶೋತೃಗಳ ಮನಸ್ಸಿನ ಮೇಲೆ ಬಹಳ ಧನಾತ್ಮಕ ಪರಿಣಾಮ ಬೀರಿದರು. 7 ಗಂಟೆಕಾಲ ನಡೆದ ಈ ಕಾರ್ಯಾಗಾರದಲ್ಲಿ " ನಾವು ಮುಂದಿನ ಜೀವನದಲ್ಲಿ ಅಳವಡಿಸಬೇಕಾದ ಅಂಶಗಳನ್ನು ಕಲಿತಿದ್ದೇವೆ, ನಮ್ಮ ಜೀವನಕ್ಕೆ ಒಂದು ಭದ್ರಬುನಾದಿ ಸಿಕ್ಕಿದೆ. ಇಂತಹ ಕ್ಷೇತ್ರದಿಂದ ನಾವು ಮೌಲ್ಯಗಳನ್ನು ಪರಿಪಾಲನೆ ಮಾಡುವ ಸಂಕಲ್ಪದೊಡನೆ ಮರಳುತ್ತಿದ್ದೇವೆ" ಎಂದು ಎಕ್ಸಲೆಂಟ್ ಶಾಲೆಯ ವಿದ್ಯಾರ್ಥಿನಿ ಕುಮಾರಿ ಅಕ್ಷತಾ ಶಿಂದೆ, ಭಾಗ್ಯಶ್ರೀ ಡೋನಗಿ, ಹಾಗೂ ಸಚ್ಚಿದಾನಂದ ಮುಲ್ವಾಡಿ ಮೂರು ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರತಿಯೊಬ್ಬ ವಿದ್ಯಾರ್ಥಿಗೆ ಶ್ರೀ ಸಮರ್ಥ ಸದ್ಗುರು ಗಣಪತರಾವ ಮಹಾರಾಜರ ಸಂದೇಶದ ತೂಗು ಭಿತ್ತಿ ಪತ್ರ ಹಾಗೂ ಪ್ರಸಾದ ವಿತರಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲ ರಾಮ, ವೇದ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಶಿವಾನಂದ ಕೇಲೂರು, ಶಾಂತಿ ಕುಟೀಲ ಟ್ರಸ್ಟ್ ನ ಟ್ರಸ್ಟಿ ವಿಶ್ವನಾಥ ಪಾಟೀಲ, ಸತೀಶ ತಿಕೋಟಿ, ಸೇರಿದಂತೆ ಶಿಕ್ಷಕರು, ಕಾರ್ಯಕರ್ತರು ಉಪಸ್ಥಿತರಿದ್ದರು.