ಗಾಣಿಗ ಸಮಾಜದಲ್ಲಿ ಸಂಸ್ಕಾರ ಹಾಸುಹೊಕ್ಕಾಗಿದೆ : ಮಾಜಿ‌ ಸಚಿವ ಬೆಳ್ಳುಬ್ಬಿ

Oct 4, 2024 - 11:34
 0
ಗಾಣಿಗ ಸಮಾಜದಲ್ಲಿ ಸಂಸ್ಕಾರ ಹಾಸುಹೊಕ್ಕಾಗಿದೆ : ಮಾಜಿ‌ ಸಚಿವ ಬೆಳ್ಳುಬ್ಬಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ವಿಜಯಪುರ : ಕಾಯಕನಿಷ್ಠ ಗಾಣಿಗ ಸಮಾಜದಲ್ಲಿ ಪ್ರಾಮಾಣಿಕತೆ, ಸ್ವಾಭಿಮಾನ ಸಂಸ್ಕಾರ ಹಾಸುಹೊಕ್ಕಾಗಿದೆ. ಗಾಣಿಗರು ಸರ್ವ ಸಮಾಜಗಳೊಂದಿಗೆ ಪ್ರೀತಿಯಿಂದ ಬದುಕು ಸಾಗಿಸುತ್ತಾ ಎಲ್ಲ ರೀತಿಯಲ್ಲೂ ಶ್ರೀಮಂತರಾಗಬೇಕು ಎಂದು ಸಚಿವ ಎಸ್.ಕೆ.ಬೆಳ್ಳುಬ್ಬಿ ಸಮಾಜಕ್ಕೆ ಕಿವಿಮಾತು ಹೇಳಿದರು.

ನಗರದ ಜಿಲ್ಲಾ‌ ಪಂಚಾಯಿತಿ ಬಳಿಯ ವನಶ್ರೀ ಸಂಸ್ಥಾನ ಮಠದಲ್ಲಿ ಬುಧವಾರ ವಿಜಯಪುರ ಜಿಲ್ಲಾ ಗಾಣಿಗ ಸಮಾಜ ಸಂಘ ಹಾಗೂ ಶ್ರೀ ಜಗದ್ಗುರು ಜಯದೇವ ಶಿವಯೋಗೇಶ್ವರ ಟ್ರಸ್ಟ್ ಸಂಯುಕ್ತಾಶ್ರಯಲ್ಲಿ ಜರುಗಿದ‌ ಜಯದೇವ ಜಗದ್ಗುರುಗಳ‌ 86 ನೇ ಜಯಂತ್ಯುತ್ಸವ ಹಾಗೂ 15 ನೇ ವಾರ್ಷಿಕ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ‌ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಲಿಂ. ಜಯದೇವ ಜಗದ್ಗುರುಗಳು ತಮ್ಮ ಇಡಿ ಬದುಕನ್ನೇ ಸಮಾಜಕ್ಕೆ ಅರ್ಪಿಸಿದ್ದಾರೆ. ಪೂಜ್ಯ ಸಿದ್ದೇಶ್ವರ ಸ್ವಾಮಿಗಳು, ಪ್ರಧಾನಿ ಮೋದಿಯವರನ್ನು ಜಾತಿಗೆ ಸೀಮಿತಗೊಳಿಸುವುದು ಬೇಡ. ಅವರು ವೈಯಕ್ತಿಕ ಸಾಧನೆಯಿಂದ ಬೆಳೆದಿದ್ದು, ಗಾಣಿಗ ಸಮಾಜದಲ್ಲಿ ಹುಟ್ಟಿದ್ದಾರೆಂಬುದು ನಮಗೆ ಹೆಮ್ಮೆ, ಪ್ರೇರಣೆ. ಸಮಾಜವನ್ನು ಇನ್ನಷ್ಟು ಉನ್ನತಿಗೆ ಒಯ್ಯುವ ಜೊತೆಗೆ ಇನ್ನುಳಿದ ಸಮಾಜಗಳನ್ನು ಜೊತೆಗೆ ಕರೆದುಕೊಂಡು‌ ಭವ್ಯ ಭಾರತ ಕಟ್ಟುವಲ್ಲಿ ನಮ್ಮದೇಯಾದ ಕೊಡುಗೆ ನೀಡೋಣ ಎಂದು ಬೆಳ್ಳುಬ್ಬಿ ಕರೆ ನೀಡಿದರು.

ಅಖಿಲ‌ ಭಾರತ ಗಾಣಿಗ ಸಮಾಜದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಅವರು ಮಾತನಾಡಿ, ಗಾಣಿಗ ಸಮಾಜದ ಸ್ಥಿತಿಗತಿ ಅರಿತು ಹಿರಿಯರ ಪ್ರಯತ್ನದಿಂದ ಸಮಾಜಕ್ಕೆ ಸಿಕ್ಕ 2ಎ ಮೀಸಲಾತಿಗೆ ಕೆಲವಡೆ ಇಂದು ಕುತ್ತು ತರುವ ಕೆಲಸವಾಗುತ್ತಿದೆ. ಲಿಂಗಾಯತ ಗಾಣಿಗರೆಂಬ ಕಾರಣಕ್ಕೆ 5 ಜಿಲ್ಲೆಗಳಲ್ಲಿ ಗಾಣಿಗರಿಲ್ಲ‌ ಎಂದು ಹಿಂದಿನ ಜಯಪ್ರಕಾಶ ಹೆಗ್ಡೆ ಅವರ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಲಿಂಗಾಯತ ಗಾಣಿಗರಿಗೆ 2ಎ ಪ್ರಮಾಣಪತ್ರ ನೀಡಬೇಕೆಂದು ಸುಪ್ರಿಂ ಕೋರ್ಟ್ ಆದೇಶವಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸುಮಾರು 40-60 ಲಕ್ಷ ಜನಸಂಖ್ಯೆ ಇರುವ ಗಾಣಿಗ ಸಮಾಜದ ಏಲ್ಗೆ ಸಹಿಸದೇ ನಮ್ಮ 2ಎ ಮೀಸಲಾತಿ ಸರಿಸಲು ಕೆಲ ಅಧಿಕಾರಿಗಳು, ಒಂದೆರಡು ಸಮಾಜ ವ್ಯವಸ್ಥಿತವಾಗಿ ಷಡ್ಯಂತರ ಕಾರ್ಯ ಮಾಡುತ್ತಿದ್ದಾರೆ. ಸಾಮಾಜಿಕವಾಗಿ ಶೋಷಣೆಗೆ ಒಳಗಾಗಿರುವ ಗಾಣಿಗ ಸಮಾಜದಲ್ಲಿ 95% ಜನ ಬಡವರಿದ್ದಾರೆ. ಮೀಸಲಾತಿ ಉಳಿವಿಗಾಗಿ ಗಾಣಿಗರೆಲ್ಲರೂ ಒಗ್ಗಟ್ಟಾಗಬೇಕಿದೆ. ಸಮಾಜದ ಪರಮಪೂಜ್ಯರು ಹಾಗೂ ರಾಜಕೀಯ ಧುರೀಣರು, ಮುಖಂಡರನ್ನೊಳಗೊಂಡ ನಿಯೋಗ ರಚಿಸಿಕೊಂಡು ಸಿಎಂ ಅವರಿಗೆ ಭೇಟಿಯಾಗಿ ಸಮಾಜದ ಸ್ಥಿತಿಗತಿ ಮನವರಿಕೆ ಮಾಡುವ ಕೆಲಸ ಮಾಡೋಣ ಎಂದರು.

ಇದೇ ವೇಳೆ ಪತ್ರಕರ್ತ ಬಸವರಾಜ ಉಳ್ಳಾಗಡ್ಡಿ, ಯಶಸ್ವಿ ಉದ್ಯಮಿ ಶರಣು ಸಜ್ಜನ ಅವರಿಗೆ ಸನ್ಮಾನಿಸಲಾಯಿತು. 109 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ಗಾಣಿಗ ಸಮಾಜದ ನೂತನ ಜಿಲ್ಲಾ ಘಟಕದ ಪದಾಧಿಕಾರಿಗಳಿಗೆ ಸನ್ಮಾನಿಸಿ ಪದಗ್ರಹಣ ಮಾಡಲಾಯಿತು. ಜಿಲ್ಲಾ ಗಾಣಿಗ ಸಮಾಜ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಬಾಬು ಸಜ್ಜನ ಪ್ರಾಸ್ತಾವಿಕ ಮಾತನಾಡಿ ಸಂಘದ ಚಟುವಟಿಕೆಗಳನ್ನು ವಿವರಿಸಿದರು.

ಬೀದರಿನ ಸಿದ್ಧಾರೂಢಾಶ್ರಮದ ಶಂಕರಾನಂದ ಸ್ವಾಮೀಜಿ, ವನಶ್ರೀ‌ ಸಂಸ್ಥಾನಮಠದ ಅಧ್ಯಕ್ಷ ಸಿದ್ದಮುತ್ಯಾ, ಹಿರೇರೂಗಿ ಮುಕ್ತಿಮಂದಿರದ ಸುಗಲಾತಾಯಿ ಮಾತೋಶ್ರೀ ಸಾನಿಧ್ಯ ನುಡಿಗಳಾಡಿದರು. ಸಮಾಜದ ಸಂಘದ ಜಿಲ್ಲಾಧ್ಯಕ್ಷ ಬಿ.ಬಿ.ಪಾಸೋಡಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ‌ ಶಾಸಕರುಗಳಾದ ಜಿ.ಎಸ್.ನ್ಯಾಮಗೌಡ, ಬಿ.ಜಿ.ಪಾಟೀಲ ಹಲಸಂಗಿ, ರಮೇಶ ಭೂಸನೂರ ಸೇರಿದಂತೆ ಜಿಲ್ಲಾ ಗಾಣಿಗ ಸಮಾಜ ಸಂಘ ಹಾಗೂ ಶ್ರೀ ಜಗದ್ಗುರು ಜಯದೇವ ಶಿವಯೋಗೇಶ್ವರ ಟ್ರಸ್ಟ್ ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.