ವಿಜಯಪುರ ಗೃಹ ಮಂಡಳಿ ಎಫ್‌ಡಿಎ ಶಿವಾನಂದ ಎಸ್.ಕೆಂಬಾವಿ ಮನೆ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ

ವಿಜಯಪುರ: ಕರ್ನಾಟಕ ಗೃಹ ಮಂಡಳಿ ವಿಜಯಪುರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಶಿವಾನಂದ ಎಸ್.ಕೆಂಬಾವಿ ಮನೆ, ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ಗುರುವಾರ ದಾಳಿ ನಡೆಸಿದ್ದು, ₹2.34 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ.
ವಿಜಯಪುರ ನಗರದ ಸುಕೂನ್ ಲೇಔಟ್, ಪಾರೇಖ್ ಲೇಔಟ್‌ನಲ್ಲಿರುವ ಮನೆ ಹಾಗೂ ವಿಜಯಪುರ ನಗರದಲ್ಲಿರುವ ಗೃಹ ಮಂಡಳಿ ಕಚೇರಿ ಹಾಗೂ ತಿಡಗುಂದಿ ಸಮೀಪ ಇರುವ ಫಾರ್ಮ್ ಹೌಸ್ ಮೇಲೆ ಏಕ ಕಾಲಕ್ಕೆ ದಾಳಿ ನಡೆಸಿ, ಪರಿಶೀಲಿಸಿದಾಗ ₹15 ಲಕ್ಷ ನಗದು, ಬೆಳ್ಳಿ-ಬಂಗಾರದ ಆಭರಣ, ವಾಹನಗಳು ಹಾಗೂ ಆಸ್ತಿಗೆ ಸಂಬಂಧಿಸಿದ ದಾಖಲೆಗಳು, ಪಿಸ್ತೂಲ್ ಪತ್ತೆಯಾಗಿವೆ ಎಂದು ಲೋಕಾಯುಕ್ತ ಎಸ್‌ಪಿ ಟಿ.ಮಲ್ಲೇಶ್ ತಿಳಿಸಿದ್ದಾರೆ.
ಲೋಕಾಯುಕ್ತ ಡಿಎಸ್‌ಪಿ ಸುರೇಶ ರೆಡ್ಡಿ, ಪೊಲೀಸ್ ಇನ್‌ಸ್ಪೆಕ್ಟರ್ ಆನಂದ ಟಕ್ಕನ್ನವರ, ಆನಂದ ಡೋಣಿ ಸೇರಿದಂತೆ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.