ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರ, ಜೀವನದ ಮೌಲ್ಯ ಭಿತ್ತಿ : ಸಂತೋಷ ಬಂಡೆ

ವಿಜಯಪುರ: ಮಕ್ಕಳಲ್ಲಿ ಬಾಲ್ಯದಿಂದಲೇ ಸಂಸ್ಕೃತಿ, ಸಂಸ್ಕಾರ, ಜೀವನದ ಮೌಲ್ಯಗಳನ್ನು ಭಿತ್ತಿ, ಅವರ ಜೀವನಕ್ಕೆ ಭದ್ರ ಬುನಾದಿ ಹಾಕುವ ಜತೆಗೆ ಕಲಿಕೆಯಲ್ಲಿ ಆಸಕ್ತಿಯನ್ನು ಮೂಡಿಸಬೇಕು ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ಮಂಗಳವಾರ ಸಂಜೆ ನಗರದ ಬಸವೇಶ್ವರ ವಿದ್ಯಾವರ್ಧಕ ಸಂಘದ ಲೀಟಲ್ ಪ್ಲಾವರ್ ಪ್ರಾಥಮಿಕ
ಶಾಲೆಯಲ್ಲಿ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು.
ಮನೆಯಲ್ಲಿ ಮಕ್ಕಳಿಗೆ ಉತ್ತಮ ವಾತಾವರಣವನ್ನು ನಿರ್ಮಿಸಿ ಕೊಡುವುದು ಯಶಸ್ಸಿನ ಬೀಜ ಬಿತ್ತಿದಂತೆ.
ಕುಟುಂಬವು ಮಕ್ಕಳಿಗೆ ಸಾಂಸ್ಕೃತಿಕ, ನೈತಿಕ, ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ ಮೌಲ್ಯಗಳನ್ನು ನೀಡುತ್ತದೆ.
ಮನೆಯ ವಾತಾವರಣವೇ ಮಗುವಿನ ವ್ಯಕ್ತಿತ್ವ ವಿಕಸನಕ್ಕೆ ಬುನಾದಿಯಾಗಿದೆ ಎಂದು ತಿಳಿಸಿದರು.
ಚಿನ್ಮಯ ಶಾಲೆಯ ಅಧ್ಯಕ್ಷೆ ಪ್ರತಿಭಾ ಪಾಟೀಲ ಮಾತನಾಡಿ, ಮನೆಯಲ್ಲಿ ಕಲಿಸುವ ಗುಣ,ನಡವಳಿಕೆ,
ಸ್ವಭಾವ, ಮಾತಿನ ಶೈಲಿ ಮಗುವಿನ ವ್ಯಕ್ತಿತ್ವವನ್ನು ರೂಪಿಸುತ್ತದೆ. ಉತ್ತಮ ಮೌಲ್ಯಗಳಿಂದ ಉತ್ತಮ ನಾಗರಿಕರಾಗುವಂತೆ ಪ್ರೇರಣೆ ನೀಡಬೇಕು ಎಂದು ಹೇಳಿದರು.
ಪ್ರೆಸಿಡೆನ್ಸಿ ಶಿಕ್ಷಣ ಕಾಲೇಜಿನ ಪ್ರಾಚಾರ್ಯೆ ಡಾ ಸುಮಾ ಬೋಳರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಿಗೆ ಆಟದೊಂದಿಗೆ ಪಾಠ ಕಲಿಸುವ ಪ್ರವೃತ್ತಿ ರೂಢಿಸಿಕೊಂಡು,
ಪಾಲಕರು ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮ ನಿತ್ಯ ಬದುಕಿನ ಕೆಲ ಸಮಯ ಮೀಸಲಿಡುವುದು ಅವಶ್ಯ ಎಂದರು.
ಸಂಸ್ಥೆಯ ಸಲಹೆಗಾರ ಶರತಚಂದ್ರ ಮಂಗಾನವರ ಜ್ಯೋತಿ ಬೆಳಗಿಸಿದರು. ಸಂಸ್ಥೆಯ ನಿರ್ದೇಶಕಿ ಗುಣಸಾಗರಿ ಮಂಗಾನವರ,ಪಿಯು ಕಾಲೇಜಿನ ಪ್ರಾಚಾರ್ಯ ಎಸ್ ಆರ್ ಕುಲಕರ್ಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಕೆ ಎಸ್ ಆಲಮೇಲ ವಾರ್ಷಿಕ ವರದಿ ವಾಚಿಸಿದರು.
ಮನೋಜ ದೇಸಾಯಿ ಮತ್ತು ನಿವೇದಿತಾ ಪಿ ನಿರೂಪಿಸಿದರು. ಲಕ್ಷ್ಮಿ ಜಂಗಮಶೆಟ್ಟಿ ಸ್ವಾಗತಿಸಿದರು. ಮಂಜುಳಾ ರಾಠೋಡ ವಂದಿಸಿದರು. ವಿವಿಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.