ಪ್ರತಿಭಾವಂತ ಬಡ ವಿದ್ಯಾರ್ಥಿನಿಗೆ ಸಚಿವ ಎಂ.ಬಿ.ಪಾಟೀಲ ನೆರವು

Feb 7, 2025 - 09:30
 0
ಪ್ರತಿಭಾವಂತ ಬಡ ವಿದ್ಯಾರ್ಥಿನಿಗೆ ಸಚಿವ ಎಂ.ಬಿ.ಪಾಟೀಲ ನೆರವು

ವಿಜಯಪುರ: ನೀಟ್ ಪಾಸಾಗಿ ಸರಕಾರಿ ಕೋಟಾದಡಿ ಎಂ.ಬಿ.ಬಿ.ಎಸ್. ಸೀಟು ಪಡೆದರೂ ಶುಲ್ಕ ಭರಿಸಲಾಗದೆ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ವಿದ್ಯಾರ್ಥಿನಿಗೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ ಅವರು ಸಹಾಯ ಹಸ್ತ ಚಾಚಿದ್ದಾರೆ.
ವಿದ್ಯಾರ್ಥಿನಿಯ ಸಮಸ್ಯೆ ಗಮನಕ್ಕೆ ಬಂದ ತಕ್ಷಣ ಸ್ಪಂದಿಸಿದ ಅವರು, ಕೋರ್ಸಿನ ಸಂಪೂರ್ಣ ವೆಚ್ಚವನ್ನು ಭರಿಸಲು ನಿರ್ಧರಿಸಿದ್ದಾರೆ. ಅದರಂತೆ ವಿಜಯಪುರ ನಗರದ ವಿದ್ಯಾರ್ಥಿನಿ ಅಫಿಪಾ ಎಂ. ಮೋಮಿನ್ ಅವರಿಗೆ ಎಂ.ಬಿ.ಬಿ.ಎಸ್. ಕೋರ್ಸಿನ ಮೊದಲ ಕಂತು ರೂ. ರೂ. 1,47,150 ಚೆಕ್ ನ್ನು ಸಂಸ್ಥೆಯ ನಿರ್ದೇಶಕ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಗುರುವಾರ ನಗರದಲ್ಲಿ ವಿದ್ಯಾರ್ಥಿನಿಗೆ ವಿತರಿಸಿದರು.


ಮೂಲತಃ ತಿಕೋಟಾ ಪಟ್ಟಣದವರಾದ ಮತ್ತು ಈಗ ವಿಜಯಪುರ ನಗರದ ಜಾಡರ ಗಲ್ಲಿಯಲ್ಲಿ ನೆಲೆಸಿರುವ ಫ್ರಿಜ್ ರಿಪೇರಿ ಕೆಲಸ ಮಾಡುವ ಮಹ್ಮದ ರಪೀಕ್ ಮೋಮಿನ್ ಮತ್ತು ಗೃಹಿಣಿ ನಾಹೆದಾ ಮೋಮಿನ್ ಅವರ ಇಬ್ಬರು ಮಕ್ಕಳಲ್ಲಿ ಹಿರಿಯಳಾದ ಅಫಿಫಾ ಎಂ. ಮೋಮಿನ್ ನೀಟ್ ಪರಿಕ್ಷೆಯಲ್ಲಿ 68970(Rank) ಸ್ಥಾನ ಗಳಿಸಿದ್ದಾಳೆ. ಈ ವಿದ್ಯಾರ್ಥಿನಿಗೆ ಹಾವೇರಿಯಲ್ಲಿರುವ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಸೀಟು ಸಿಕ್ಕಿದೆ. ಈ ಕೋರ್ಸು ಮುಗಿಸಲು ಕಾಲೇಜು ಮತ್ತು ಹಾಸ್ಟೇಲು ಶುಲ್ಕ ಹಾಗೂ ಊಟ ಸೇರಿದಂತೆ ಒಟ್ಟು ರೂ. 5,88,600 ತಗುಲಲಿದೆ. ಇದರ ಮೊಲದ ಕಂತಿನ ಚೆಕ್ ನ್ನು ಶಾಸಕರು ವಿತರಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಚಿವ ಎಂ. ಬಿ. ಪಾಟೀಲ ಮತ್ತು ಬಿ.ಎಲ್.ಡಿ.ಇ ಸಂಸ್ಥೆ ಸದಾ ಬೆನ್ನೆಲುಬಾಗಿ ನಿಲ್ಲುತ್ತಿದೆ. ಈ ಮೂಲಕ ಬಡವರ ಮಕ್ಕಳು ಉತ್ತಮ ಮತ್ತು ಗುಣಮಟ್ಟದ ವೃತ್ತಿಶಿಕ್ಷಣ ಪಡೆಯಲು ನೆರವಾಗುತ್ತಿದೆ. ಹೀಗಾಗಿ ನೀವೂ ಕೂಡ ಶ್ರದ್ಧೆಯಿಂದ ಎಂ.ಬಿ.ಬಿ.ಎಸ್ ಓದಿ ಬಸವನಾಡಿಗೆ ಕೀರ್ತಿ ತರುವ ಕೆಲಸ ಮಾಡಿ ಎಂದು ಶುಭ ಕೋರಿದರು.


ಈ ವೇಳೆ ಮಾತನಾಡಿದ ವಿದ್ಯಾರ್ಥಿನಿ ಅಫಿಪಾ ಎಂ. ಮೋಮಿನ, ನಾನು 1 ರಿಂದ 10ನೇ ತರಗತಿಯವರೆಗೆ ವಿಜಯಪುರದ ಸೇವಾ ಸ್ಕೂಲ್ ನಲ್ಲಿ ಓದಿದ್ದೇನೆ. ನಂತರ ಬೀದರಿನ ಶೈನ್ ಕಾಲೇಜಿನಲ್ಲಿ ಪಿಯು ವರೆಗೆ ಕಷ್ಟಪಟ್ಟು ಓದಿದ್ದೇನೆ. ನೀಟ್ ನಲ್ಲಿ ಉತ್ತಮ ಅಂಕಗಳು ಬಂದಿದ್ದರೂ ಪ್ರವೇಶಕ್ಕೆ ಹಣದ ಸಮಸ್ಯೆ ಎದುರಾಗಿತ್ತು. ಆರ್ಥಿಕ ನೆರವು ಸಿಕ್ಕಿದೆ. ನಾನು ವೈದ್ಯಳಾಗಬೇಕೆಂಬ ಕನಸನ್ನು ನನಸಾಗುತ್ತಿದೆ. ಮುಂದೆ ನ್ಯೂರಾಲಾಜಿಸ್ಟ್ ಆಗಬೇಕೆಂಬ ಗುರಿ ಇದೆ. ಸಚಿವ ಎಂ. ಬಿ. ಪಾಟೀಲ, ಶಾಸಕ ಸುನೀಲಗೌಡ ಪಾಟೀಲ ಹಾಗೂ ಬಿ.ಎಲ್.ಡಿ.ಇ ಸಂಸ್ಥೆಗೆ ಚಿರಋಣಿಯಾಗಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.


ವಿದ್ಯಾರ್ಥಿನಿಯ ತಂದೆ ಮಹ್ಮದ ರಪೀಕ್ ಮೋಮಿನ್ ಮತ್ತು ತಾಯಿ ನಾಹೆದಾ ಮೋಮಿನ್ ಮಾತನಾಡಿ, ನಮಗೆ ಇಬ್ಬರು ಮಕ್ಕಳಿದ್ದಾರೆ. ಮಗಳಿಗೆ ಈಗ ಎಂ.ಬಿ.ಬಿ.ಎಸ್ ಸೀಟು ಸಿಕ್ಕಿದೆ. ಮಗ ರಿಜ್ವಾನ್ ಡಿಪ್ಲೊಮಾ ಓದುತ್ತಿದ್ದಾನೆ. ಮಕ್ಕಳನ್ನು ಚೆನ್ನಾಗಿ ಓದಿಸಬೇಕು ಎಂಬ ಕನಸು ಇದೆ. ಆದರೆ, ನಮ್ಮ ಬಡತನ ಮಗಳಿಗೆ ಡಾಕ್ಟರ್ ಮಾಡಿಸಲು ಕಷ್ಟಕರ ಎನಿಸಿತ್ತು. ಆದರೆ, ಎಂ. ಬಿ. ಪಾಟೀಲ ಅವರು ನಮಗೆ ಆಪದ್ಬಾಂಧವರಾಗಿ ಬಂದು ಆರ್ಥಿಕ ನೆರವು ನೀಡುವ ಮೂಲಕ ಎಂದೂ ಮರೆಯದ ಸಹಾಯ ಮಾಡಿದ್ದಾರೆ. ಅವರಿಗೆ ಸದಾ ಅಭಾರಿಯಾಗಿದ್ದೇವೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಅಕೌಂಟ್ ಸುಪರಿಂಟೆಂಡೆಂಟ್ ಎಸ್. ಎಸ್. ಪಾಟೀಲ, ವಿದ್ಯಾರ್ಥಿನಿಯ ಅಜ್ಜಿ ನಹೆದಾ, ಚಾಂದಬಿ, ದೊಡ್ಡಪ್ಪ ಅಲ್ಲಾಬಕ್ಷ ಮಕಾದಮ, ಕಾಕಾ ಹಾಜಿಲಾಲ ಕೊಟ್ಟಲಗಿ ಮುಂತಾದವರು ಉಪಸ್ಥಿತರಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.