ಗುಣಮಟ್ಟದ ಕೆಲಸಕ್ಕೆ ಹೆಚ್ಚು ಒತ್ತು : ವಿಪ ಸದಸ್ಯ ಸುನೀಲಗೌಡ ಪಾಟೀಲ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ವಿಜಯಪುರ : ಗ್ರಾಮೀಣ ಭಾಗದಲ್ಲಿ ರಸ್ತೆ ಸುಧಾರಣೆಗೆ ಆದ್ಯತೆ ನೀಡಲಾಗಿದ್ದು, ಗುಣಮಟ್ಟದ ಕೆಲಸಕ್ಕೆ ಹೆಚ್ಚು ಒತ್ತು ಕೊಡಲಾಗಿದೆ ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.
ಮಂಗಳವಾರ ಬಬಲೇಶ್ವರ ತಾಲೂಕಿನ ಸಾರವಾಡ ಮತ್ತು ವಿಜಯಪುರ ತಾಲೂಕಿನ ಹೊನಗನಹಳ್ಳಿ ಗ್ರಾಮಗಳಲ್ಲಿ ತಲಾ ರೂ. 100 ಲಕ್ಷ ವೆಚ್ಚದಲ್ಲಿ ಪಿ.ಆರ್.ಇ.ಡಿ ಇಲಾಖೆಯ ವತಿಯಿಂದ ನಿರ್ಮಿಸಲಾಗುತ್ತಿರುವ ಸಾರವಾಡ- ದದಾಮಟ್ಟಿವರೆಗಿನ 6 ಕಿ. ಮೀ. ಮತ್ತು ಹೊನಗನಗಳ್ಳಿ- ದದಾಮಟ್ಟಿ ವರೆಗೆ 4 ಕಿ. ಮೀ. ವರೆಗಿನ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ದಿ. ಬಿ. ಎಂ. ಪಾಟೀಲ ಅವರ ಕಾಲದಿಂದಲೂ ನಾವು ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದೇವೆ. ಶಾಲೆಗಳಲ್ಲಿ ಡಿಜಿಟಲ್ ಬೋರ್ಡ್, ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೆ ಒತ್ತು ನೀಡುತ್ತಿದ್ದೇವೆ. ಇದರ ಮುಂದುವರೆದ ಭಾಗವಾಗಿ ಸಚಿವ ಎಂ. ಬಿ. ಪಾಟೀಲ ಅವರು ಈ ಬಾರಿ ಶಿಕ್ಷಣ ಕ್ರಾಂತಿಯ ಕನಸು ಹೊಂದಿದ್ದಾರೆ. ಹೀಗಾಗಿ ಮತಕ್ಷೇತ್ರದಲ್ಲಿನ ಎಲ್ಲ ಸರಕಾರಿ ಶಾಲೆಗಳಲ್ಲಿ ಕೈಗೊಳ್ಳಬೇಕಿರುವ ಮೂಲಭೂತ ಸೌಕರ್ಯಗಳ ಕುರಿತು ಈಗಾಗಲೇ ಸಮೀಕ್ಷೆ ನಡೆಸಲಾಗುತ್ತಿದ್ದು, ರೂ. 100 ಕೋ. ವೆಚ್ಚದಲ್ಲಿ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. ಗ್ರಾಮಸ್ಥರೂ ಕೂಡ ದೇವಸ್ಥಾನಗಳ ಜೊತೆಗೆ ಜೀವಂತ ದೇವರಾದ ಮಕ್ಕಳು ಭವಿಷ್ಯಕ್ಕೆ ಅಗತ್ಯವಾಗಿರುವ ಉತ್ತಮ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು. ಮತಕ್ಷೇತ್ರದಲ್ಲಿ ಶಿಕ್ಷಣ, ನೀರಾವರಿ, ದೇವಸ್ಥಾನ, ಸಮುದಾಯ ಭವನಗಳು, ರಸ್ತೆ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಶಿವಲಿಂಗಯ್ಯ ಹಿರೇಮಠ, ರೇಣುಕಸ್ವಾಮಿ ಹಿರೇಮಠ, ಮುಖಂಡರಾದ ಸದಾಶಿವ ಚಿಕರೆಡ್ಡಿ, ಜಯಗೌಡ ಪಾಟೀಲ, ಶಿವನಿಂಗಯ್ಯ ಹಿರೇಮಠ, ಮಲಕನಗೌಡ ಪಾಟೀಲ, ರುದ್ರಗೌಡ ಬಿರಾದಾರ, ನಚಿಕೇತ ಬಿದರಿ, ರಮೇಶ ಕಾಂಬಳೆ, ಹಣಮಂತ ಹಚಡದ, ಪಿ.ಆರ್.ಇ.ಡಿ ಎಇಇ ರವಿ ಪವಾರ, ಪಿಡಿಓ ಗೀತಾ ಕಲ್ಲವ್ವಗೋಳ ಮುಂತಾದವರು ಉಪಸ್ಥಿತರಿದ್ದರು.