ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಧಾರವಾಡ : ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಈ ನಾಡಿನ ಮಕ್ಕಳಿಗಾಗಿ ಹಾಗೂ ಅದರಲ್ಲೂ ವಿಶೇಷವಾಗಿ ರಾಜ್ಯಾದ್ಯಂತ ಇರುವ ಬಾಲಮಂದಿರದ ಮಕ್ಕಳಿಗಾಗಿ ಹಮ್ಮಿಕೊಂಡಿರುವ ವಿಶೇಷ ಹೃದಯಸ್ಪರ್ಸಿ ಕಾರ್ಯಕ್ರಮಗಳನ್ನು ಕಂಡಾಗ ಹೃದಯ ತುಂಬಿ ಬರುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಸ್ನೇಹಿತರಾದ ಸಚಿವ ಎಂ ಬಿ ಪಾಟೀಲರು ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ನಮ್ಮ ಕರ್ನಾಟಕ ಸರ್ಕಾರ ಸೂಕ್ತ ವ್ಯಕ್ತಿಯನ್ನು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಚೇರ್ಮನ್ ರನ್ನಾಗಿ ಮಾಡಿದೆ. ಸಂಗಮೇಶ ರಂತಹ ತಾಯಿ ಹೃದಯದ ಗೆಳೆಯ ನನ್ನ ಸ್ನೇಹಿತರಾಗಿರುವುದಕ್ಕೆ ನನಗೆ ಹೆಮ್ಮೆ ಇದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.
ಧಾರವಾಡದ ಹೊರವಲಯ ಹಳ್ಳಿಗೇರಿಯ ಸಮೀಪದಲ್ಲಿರುವ ನೇಚರ್ ಫಸ್ಟ್ ಇಕೋ ವಿಲೇಜ್ ನಲ್ಲಿ ರಾಜ್ಯದ ಬಾಲಮಂದಿರದ ಮಕ್ಕಳಿಗಾಗಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಆಯೋಜಿಸಿರುವ ರಾಜ್ಯ ಮಟ್ಟದ ಕಥಾ ಕಮ್ಮಟ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಹಾತ್ಮ ಗಾಂಧೀಜಿ ಹಾಗೂ ಶಾಸ್ತ್ರೀಜಿಯವರ ಜಯಂತೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ಎರಡು ಕೋಟಿಗೂ ಅಧಿಕ ಮಕ್ಕಳನ್ನ ಪ್ರತಿನಿಧಿಸುವ ಕರ್ನಾಟಕ ಬಾಲ ವಿಕಾಸ ಅಕಾಡೆಮಿಗೆ ಹೆಚ್ಚಿನ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದ ಸಚಿವರು, ದೇವರ ಸ್ವರೂಪರಾದ ನಾಡಿನ ಬಾಲ ಮಂದಿರದ ಮಕ್ಕಳನ್ನು ಪರಿಸರ ಸ್ನೇಹಿಯಾದ ಸಕಲ ಸೌಲಭ್ಯಗಳನ್ನು ಒಳಗೊಂಡಿರುವ ನಿಸರ್ಗದ ಮಡಿಲಿನಲ್ಲಿರುವ ರೆಸಾರ್ಟ್ ನಲ್ಲಿ ಮಕ್ಕಳನ್ನು ಕರೆತಂದು ಅವರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಅವರ ಕಾರ್ಯ ನಿಜಕ್ಕೂ ನನಗೆ ಅತ್ಯಂತ ಆತ್ಮತೃಪ್ತಿಯನ್ನು ತಂದಿದೆ ಎಂದ ಸಚಿವರು, ಆಕೆಡೆಮಿಯಿಂದ ರಾಜ್ಯಮಟ್ಟದಲ್ಲಿ ಸಂಗಮೇಶ್ ಅವರು ಬಾಲ ಮಂದಿರದ ಮಕ್ಕಳಿಗಾಗಿ ಕೈಗೊಳ್ಳುವ ಎಲ್ಲ ಕಾರ್ಯಕ್ರಮಗಳಿಗೆ ನಮ್ಮ ಫೌಂಡೇಶನ್ ವತಿಯಿಂದ ಎಲ್ಲ ಸಹಕಾರ ನೀಡುತ್ತೇನೆ ಎಂದು ಹೇಳಿದರು.
ವೇದಿಕೆ ಮೇಲಿದ್ದ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ ಸಚಿವರು ಧಾರವಾಡ ಜಿಲ್ಲೆಗೆ ಬರುವ ಸಿ ಎಸ್ ಆರ್ ಫಂಡನ್ನು ಕೂಡ ಅಕಾಡೆಮಿ ಕಾರ್ಯ ಚಟುವಟಿಕೆಗಳಿಗೆ ಒದಗಿಸಿ ಕೊಡುವಂತೆ ಸೂಚಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ " ಬಾಲ ಮಂದಿರದ ಮಕ್ಕಳಿಗಾಗಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ರೂಪಿಸಿರುವ ಈ ಕಾರ್ಯಕ್ರಮದ ಉದ್ದೇಶವನ್ನು ಸಂಗಮೇಶ ಅವರಿಂದ ತಿಳಿದುಕೊಂಡಾಗ ನನಗೆ ತುಂಬಾ ಸಂತೋಷವಾಯಿತು. ನನಗೆ ಗೊತ್ತಿರುವಂತೆ ದೇಶದಲ್ಲಿ ಮಕ್ಕಳಿಗಾಗಿ ಕೆಲಸ ಮಾಡಲು ಅಸ್ತಿತ್ವದಲ್ಲಿರುವ ಏಕೈಕ ಅಕಾಡೆಮಿ ನಮ್ಮೆಲ್ಲರ ಹೆಮ್ಮೆಯ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯಾಗಿದೆ, ಸಚಿವರು ಹೇಳಿದಂತೆ ಸೂಕ್ತ ವ್ಯಕ್ತಿಯನ್ನು ಸರಕಾರ ಅಧ್ಯಕ್ಷರನ್ನಾಗಿ ಮಾಡಿದೆ. ಸಂಗಮೇಶ ಅವರ ಮಕ್ಕಳ ಬಗೆಗಿನ ಕಾಳಜಿಯನ್ನು ನಾನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಶಶಿಕುಮಾರ್ ಮಾತನಾಡಿ ಮಕ್ಕಳಿಗಾಗಿ ಇಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮ ಗಳನ್ನು ನೋಡಿದಾಗ ನನಗೆ ತುಂಬಾ ಸಂತೋಷವಾಗುತ್ತದೆ, ಮಕ್ಕಳು ಇದರ ಪ್ರಯೋಜನ ಪಡೆದು ಎತ್ತರಕ್ಕೆ ಬೆಳೆಯಬೇಕು ಎಂದು ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ ಮಕ್ಕಳ ಸೇವೆ ಮಾಡಲು ನನಗೆ ಅವಕಾಶ ಕಲ್ಪಿಸಿಕೊಟ್ಟ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರಿಗೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಚಿವರಾದ ಎಂ ಬಿ ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸಂತೋಷ್ ಲಾಡ್ ಅವರಿಗೆ ಹಾಗೂ ತಮ್ಮೆಲ್ಲರಿಗೆ ನಾನು ಸದಾ ಋಣಿಯಾಗಿರುತ್ತೇನೆ, ಮಕ್ಕಳೆಂದರೆ ದೇವರ ಸಮಾನ ಅಂತ ಎರಡು ಕೋಟಿ ದೇವರುಗಳ ಸೇವೆ ಮಾಡುವ ಅವಕಾಶ ನನಗೆ ದೊರೆತದ್ದು ನನ್ನ ಸೌಭಾಗ್ಯ, ಸಚಿವರ ಹಾಗೂ ತಮ್ಮೆಲ್ಲರ ಸಹಕಾರ ಮಾರ್ಗದರ್ಶನದಲ್ಲಿ ಈ ನಾಡಿನ ಮುದ್ದು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ದುಡಿದು, ನಿಮ್ಮೆಲ್ಲರ ಪ್ರೀತಿಯ ಋಣವನ್ನ ತೀರಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಮುಖಂಡರಾದ ಎಸ ಆರ್ ಪಾಟೀಲ, ಮಲ್ಲನಗೌಡ ಪಾಟೀಲ, ಬಸವರಾಜ್ ಮರಿತಮ್ಮನವರ, ಯೋಜನಾಧಿಕಾರಿ ಭಾರತಿ ಶೆಟ್ಟರ, ಉಪನಿರ್ದೇಶಕ ರತ್ನಾಕರ, ದೀಪಾ ಜಾವೂರ, ಹಳ್ಳಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸರ್ವ ಸದಸ್ಯರು ಎರಡನೇ ಹಂತದಲ್ಲಿ ವಿವಿಧ ೯ ಜಿಲ್ಲೆಗಳಿಂದ ಆಗಮಿಸಿದ ಮುದ್ದು ಮಕ್ಕಳು ಸುತ್ತಲಿನ ಗ್ರಾಮಗಳ ಹಿರಿಯರು ಉಪಸ್ಥಿತರಿದ್ದರು.