ಪೊಲೀಸರಿಂದ ಶ್ರಮದಾನ: ಲಾಠಿ, ಗನ್ ಹಿಡಿಯೋ ಕೈಯ್ಯಲ್ಲಿ ಗುದ್ದಲಿ,ಸಲಿಕೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ಮುದ್ದೇಬಿಹಾಳ : ಲಾಠಿ, ಗನ್ ಹಿಡಿದು ಜನರನ್ನು ನಿಯಂತ್ರಿಸುವ,ರಕ್ಷಿಸುವ,ಅಪರಾಧಿಗಳಿಗೆ ಬುದ್ದಿ ಕಲಿಸುವ ಕೈಗಳಲ್ಲಿ ಕೆಲವು ಗಂಟೆಗಳವರೆಗೆ ಗುದ್ದಲಿ, ಸಲಿಕೆ ಬಂದಿದ್ದವು.ಗಾ0ಧೀಜಿ ಜಯಂತಿ ಪ್ರಯುಕ್ತ ಪಟ್ಟಣದ ಅಂಬೇಡ್ಕರ್ ವೃತ್ತದ ಫುಟ್‌ಪಾತ್ ಪಕ್ಕದಲ್ಲಿ ಎರಡ್ಮೂರು ತಾಸುಗಳ ಕಾಲ ಮುದ್ದೇಬಿಹಾಳ ಪೊಲೀಸ್ ವೃತ್ತದ ಅಧಿಕಾರಿಗಳು, ಸಿಬ್ಬಂದಿ, ಪೇದೆಗಳು ಗುದ್ದಲಿ,ಸಲಿಕೆ ಹಿಡಿದು ಶ್ರಮದಾನ ಮಾಡಿದರು.
ಈಚೇಗೆ ಪುರಸಭೆಯಿಂದ ಫುಟಪಾತ್ ಅತಿಕ್ರಮಣ ತೆರವುಗೊಳಿಸಿದ್ದ ಹಿನ್ನೆಲೆಯಲ್ಲಿ ಅಲ್ಲಿ ಸಾರ್ವಜನಿಕರಿಗೆ, ಪ್ರಯಾಣಿಕರಿಗೆ ಕೂಡಲು ಸಿಮೆಂಟ್‌ನ ಮೂರು ಆಸನಗಳನ್ನು ಹಾಕಿ ಅದರ ಮೇಲೆ ಸಹಾಯಕ್ಕಾಗಿ ೧೧೨ ಸಂಪರ್ಕಿಸಿ ಎಂದು ಪೊಲೀಸ್ ಇಲಾಖೆಯ ಸಹಾಯವಾಣಿ ಸಂಖ್ಯೆಯನ್ನು ಬರೆದು ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
ಈ ಕಾರ್ಯದಲ್ಲಿ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜಯ ತಿಪರೆಡ್ಡಿ, ಕ್ರೈಂ ಪಿಎಸ್‌ಐ ಆರ್.ಎಲ್.ಮನ್ನಾಭಾಯಿ, ಎಎಸ್‌ಐ ಸಿ.ಜಿ.ಕುಲಕರ್ಣಿ, ಕೆ.ಎಸ್.ಅಸ್ಕಿ, ಎ.ಆಯ್.ಸಾಲಿ ಮೊದಲಾದವರು ಭಾಗಿಯಾಗಿದ್ದರು. ಸಿಪಿಐ ತುಳಸಿಗೇರಿ ಮಾತನಾಡಿ, ಪೊಲೀಸರಿಗೂ ಸಾಮಾಜಿಕ ಹೊಣೆಗಾರಿಕೆ ಇರುತ್ತದೆ ಎಂಬುದಕ್ಕೆ ನಾವು ಗಾಂಧೀಜಿ ಜಯಂತಿಯ ದಿನದಂದು ಶ್ರಮದಾನ ಮಾಡುವ ನಿರ್ಧಾರ ಕೈಗೊಂಡು ಅನುಷ್ಠಾನಗೊಳಿಸಿದ್ದೇವೆ. ಪುರಸಭೆಯಿಂದ ಇಲ್ಲೊಂದು ಬಸ್ ಶೆಲ್ಟರ್ ಆದರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದರು.
ಇದೇ ವೇಳೆ ಮುಖ್ಯಾಧಿಕಾರಿ ಮಲ್ಲಿಕಾರ್ಜುನ ಬಿರಾದಾರ, ಮುಖಂಡರಾದ ಸುರೇಶಗೌಡ ಪಾಟೀಲ್ ಇಂಗಳಗೇರಿ, ಸಂಗನಗೌಡ ಬಿರಾದಾರ, ಪುರಸಭೆ ಸದಸ್ಯರು ಪಾಲ್ಗೊಂಡಿದ್ದರು.