ಮಾಜಿ ಪ್ರಧಾನಿ ಶ್ರೀಹೆಚ್ ಡಿ ದೇವೇಗೌಡರಿಂದ ಲತಾಶ್ರೀ ಡಿ.ಸಿ ಸಾರಥ್ಯದ ಹರ್ಷಿಣಿ ಸಿನಿಮಾಸ್ ಸಂಸ್ಥೆಗೆ ಚಾಲನೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ಸಂಸ್ಥೆಯ ಚೊಚ್ಚಲ ಕಾಣಿಕೆಯಾಗಿ "ಕಿರುನಗೆ" ಚಿತ್ರ ನಿರ್ಮಾಣ
ವಿಜಯಪುರ ಜಿಲ್ಲೆಯ ಮಾಜಿ ಶಾಸಕ ಡಾ|ದೇವಾನಂದ್ ಪೂ ಚವ್ಹಾಣ ಹಾಗೂ ಶ್ರೀಮತಿ ಸುನೀತಾ ದೇವಾನಂದ ಚವ್ಹಾಣ ಪುತ್ರಿ ಲತಾಶ್ರೀ ಡಿ.ಸಿ ಅವರು ಹರ್ಷಿಣಿ ಸಿನಿಮಾಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಇತ್ತೀಚೆಗೆ ಈ ನೂತನ ನಿರ್ಮಾಣ ಸಂಸ್ಥೆಯನ್ನು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಉದ್ಘಾಟಿಸಿ, ಲತಾಶ್ರೀ.ಡಿ.ಸಿ ಅವರ ಹೊಸ ಪ್ರಯತ್ನಕ್ಕೆ ಮನತುಂಬಿ ಆಶೀರ್ವದಿಸಿದರು.
ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಚಿತ್ರಗಳನ್ನು ನಿರ್ಮಾಣ ಮಾಡುವ ಆಶಯ ಹೊಂದಿರುವ ಹರ್ಷಿಣಿ ಸಿನಿಮಾಸ್ ಸಂಸ್ಥೆಯು ಮೊದಲ ಚಿತ್ರವಾಗಿ "ಕಿರುನಗೆ" ಚಿತ್ರವನ್ನು ನಿರ್ಮಿಸುತ್ತಿದೆ. "ಸತ್ಯಂ" ಸೇರಿದಂತೆ ಈಗಾಗಲೇ ನಾಲ್ಕು ಚಿತ್ರಗಳನ್ನು ನಿರ್ದೇಶಿಸಿರುವ ಅಶೋಕ್ ಕಡಬ "ಕಿರುನಗೆ" ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಮಹಿಳಾ ಪ್ರಧಾನ ಈ ಚಿತ್ರಕ್ಕೆ ಲತಾಶ್ರೀ ಡಿ.ಸಿ ಅವರೆ ಕಥೆ ಬರೆದಿದ್ದಾರೆ. ಚಿತ್ರಕಥೆ ಅಶೋಕ್ ಕಡಬ ಅವರದು. ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಅವರ ತಂಡದ ಸುಕೃತ್ "ಕಿರುನಗೆ" ಗೆ ಸಂಗೀತ ನೀಡಲಿದ್ದಾರೆ. ಮಹಿಳಾ ಪ್ರಧಾನ ಚಿತ್ರವಾಗಿರುವುದರಿಂದ ಕನ್ನಡ ಖ್ಯಾತ ನಟಿಯೊಬ್ಬರು ಈ ಚಿತ್ರದಲ್ಲಿ ನಟಿಸಲಿದ್ದಾರೆ. ನಾಯಕಿ ಸೇರಿದಂತೆ ಉಳಿದ ತಾರಾಬಳಗದ ಬಗ್ಗೆ ಸದ್ಯದಲ್ಲೇ ಮಾಹಿತಿ ನೀಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.
ಒಂದು ಹೆಣ್ಣು ತನ್ನ ಪ್ರೀತಿ, ಇಷ್ಟ, ಸಂತೋಷವೆಲ್ಲವನ್ನು ತ್ಯಜಿಸಿ ಹೆತ್ತವರ ಸಂತೋಷಕ್ಕಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟು, ತಾನು ಎಲ್ಲರಂತೆ ನಗುನಗುತ್ತಾ ಇರುತ್ತಿರುವ, ಆ ಹೆಣ್ಣಿನ ನಗುವಿನ ಹಿಂದೆ ಬಚ್ಚಿಟ್ಟ ಹಲವು ನಿಗೂಢ ವಿಷಯಗಳನ್ನು ಬೆನ್ನಟ್ಟಿ ಹೊರಟ ಒಂದು ಗರ್ಭಿಣಿ ಹೆಣ್ಣು ಮಗಳಿಬ್ಬಳ ಸುತ್ತ ತೆರೆದು ಕೊಳ್ಳುವ ಒಂದು ಭಾವನಾತ್ಮಕ ಕಥೆಯೇ ಈ ಕಿರುನಗೆ.