ನಾಳೆ ಗುಡ್ಡಾಪುರದಲ್ಲಿ ಕರ್ನಾಟಕ ಸಂಭ್ರಮ-೫೦ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ : ಸೋಮಣ್ಣ ಬೇವಿನಮರದ

Sep 30, 2024 - 06:48
Sep 30, 2024 - 07:51
 0
ನಾಳೆ ಗುಡ್ಡಾಪುರದಲ್ಲಿ ಕರ್ನಾಟಕ ಸಂಭ್ರಮ-೫೦ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ : ಸೋಮಣ್ಣ ಬೇವಿನಮರದ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ವಿಜಯಪುರ : ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ವಿಜಯಪುರ, ದಾನಮ್ಮ ದೇವಿ ಟ್ರಸ್ಟ್ ಹಾಗೂ ಕನ್ನಡಪರ ಸಂಘಟನೆಗಳು ಇವರ ಸಹಯೋಗದಲ್ಲಿ ಗುಡ್ಡಾಪುರದ ಶ್ರೀ ದಾನಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಸೆ.೩೦ರಂದು ನಡೆಯುವ ಕರ್ನಾಟಕ ಸಂಭ್ರಮ -೫೦ರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಸಾಂಸ್ಕೃತಿಕ ಕಾರ್ಯಕ್ರಮ, ಗಡಿನಾಡ ಕನ್ನಡಿಗರ ಸಮಾವೇಶ ಹಾಗೂ ಗಡಿನಾಡ ಚೇತನ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅತ್ಯಂತ ಯಶಸ್ವಿಯಾಗಿಸುವ ನಿಟ್ಟಿನಲ್ಲಿ ಎಲ್ಲಾ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಗಡಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಹೇಳಿದರು.

ಅವರು ಭಾನುವಾರ ಗುಡ್ಡಾಪುರದಲ್ಲಿ ಕಾರ್ಯಕ್ರಮದ ವೇದಿಕೆ ಸೇರಿದಂತೆ ವಿವಿಧ ಕಾರ್ಯಗಳ ಪೂರ್ವ ಸಿದ್ಧತಾ ಪರಿಶೀಲನೆ ನಡೆಸಿ ಮಾತನಾಡಿ, ಎಲ್ಲಾ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಜಿಲ್ಲಾಡಳಿತದ ಸಹಯೋಗದಲ್ಲಿ ನಿರ್ವಹಿಸಲಾಗಿದೆ. ಹದಿನಾಲ್ಕು ಸಮಿತಿಗಳನ್ನು ರಚಿಸಿ ಕೆಲಸ ಕಾರ್ಯಗಳನ್ನು ಆಯಾ ಸಮಿತಿಗೆ ವಹಿಸಿದ್ದು, ಎಲ್ಲ ಸಮಿತಿಯವರು ವಹಿಸಿದ ಜವಾಬ್ದಾರಿಗಳನ್ನು ಬಹಳಷ್ಟು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಸೆಪ್ಟೆಂಬರ್ ೩೦ ರಂದು ನಡೆಯುವ ಕಾರ್ಯಕ್ರಮಕ್ಕೆ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಆಗಮಿಸುತಿದ್ದು, ಗುಡ್ಡಾಪುರದಲ್ಲಿ ಈಗಾಗಲೇ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಅಂದು ಹಲವಾರು ಕಲಾ ಪ್ರಕಾರದ ಸಾಂಸ್ಕೃತಿಕ, ಜಾನಪದ ಕಲೆಗಳ ಅನಾವರಣಗೊಳ್ಳಲಿದೆ. ಸಂಪೂರ್ಣ ಕರ್ನಾಟಕದ ಕಲೆ, ಇತಿಹಾಸ, ಸಾಂಸ್ಕೃತಿಕ ಪರಿಚಯ ಮಾಡಿಸುವ ವೇದಿಕೆ ಇದಾಗಿದ್ದು, ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರೂ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ರಾಜ್ಯದ ವಿವಿಧ ಭಾಗಗಳಿಂದ ಕಲಾವಿದರು ಆಗಮಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಯಾವುದೇ ಸಮಸ್ಯೆಯಾಗದಂತೆ ಎಲ್ಲಾ ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದರು.

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ವಿವಿಧ ಅಕಾಡೆಮಿಗಳ ಸಹಯೋಗದಲ್ಲಿ ಹೊನ್ನ ಬಿತ್ತೆವು ನೃತ್ಯ ರೂಪಕ, ಕರ್ನಾಟಕ ಲಲಿತ ಕಲಾ ಅಕಾಡೆಮಿ ಹಾಗೂ ಕರ್ನಾಟಕ ಶಿಲ್ಪ ಕಲಾ ಅಕಾಡೆಮಿ ವತಿಯಿಂದ ದೃಶ್ಯಯಾನ ರೂಪಕ ಮತ್ತು ಶಿಲ್ಪಕಲಾ ಪ್ರಾತ್ಯಕ್ಷಿಕೆ ಹಾಗೂ ಪ್ರದರ್ಶನ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಕನ್ನಡ ನೃತ್ಯ ರೂಪಕ, ಕಾಸರಗೋಡಿನ ಕೆ.ವಿ. ರಮೇಶ ತಂಡದವರಿಂದ ಯಕ್ಷಗಾನ ಗೊಂಬೆಯಾಟ, ಜತ್ತ ಮತ್ತು ಅಕ್ಕಲಕೋಟೆಯ ವಿವಿಧ ಸ್ಥಳೀಯ ಕಲಾವಿದರಿಂದ ಕನ್ನಡ ಗೀತೆಗಳು ಹಾಗೂ ಭಾವಗೀತೆಗಳು, ವಿಜಯಪುರದ ರಂಗನಾಥ ಬತಾಸೆ ತಂಡದವರಿಂದ ನೃತ್ಯರೂಪಕ, ಶ್ರೀಮತಿ ಸಂಗೀತಾ ಕಟ್ಟಿ ಅವರಿಂದ ಕನ್ನಡ ಗೀತಗಾಯನ, ಪ್ರಕಾಶ ಮಲ್ಲಿಗವಾಡ ಮತ್ತು ಲಲಿತಾ ಚಾಕಲಬ್ಬಿ ತಂಡದವರಿಂದ ಜಾನಪದ ನೃತ್ಯಗಳು, ಶ್ರೀಮತಿ ಹೇಮಾ ಪಾಟೀಲ ಅವರಿಂದ ದಾರದಿಂದ ಬರೆಯುವ ಚಿತ್ರ ಪ್ರದರ್ಶನ, ಗಂಗಾವತಿ ಪ್ರಾಣೇಶ್ ಅವರ ತಂಡದಿಂದ ಕನ್ನಡ ನಗೆ ಹಬ್ಬ ಸೇರಿದಂತೆ ಅನೇಕ ಕನ್ನಡ ಕಲೆಯ ಅನಾವರಣಗೊಳ್ಳಲಿವೆ. ನಾಡಿನ ವಿವಿಧ ಮೂಲೆ ಮೂಲೆಗಳಿಂದ ಆಗಮಿಸಿದ ಕಲಾವಿದರು ತಮ್ಮ ಕಲೆಯ ಪ್ರದರ್ಶನ ನೀಡಲಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಗಡಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ, ಗಡಿ ಪ್ರಾಧಿಕಾರದ ಸದಸ್ಯ ಎಂ.ಎಸ್. ಮದಬಾವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಚೆನ್ನೂರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರುದ್ದಿನ ಸೌದಾಗರ್, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಸಿ.ಬಿ ಚಿಕ್ಕಲಕಿ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು, ಗುಡ್ಡಾಪುರ ದಾನಮ್ಮದೇವಿ ಟ್ರಸ್ಟ್ ಅಧಿಕಾರಿಗಳು ಉಪಸ್ಥಿತರಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.