ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ವಿಜಯಪುರ : ರಾಜ್ಯದ ಗಡಿಭಾಗದಲ್ಲಿರುವ ೭೪೨ ಗ್ರಾಮಗಳಲ್ಲಿ ವಾಸಿಸುವ ಕನ್ನಡಿಗರ ಸಮಸ್ಯೆ ನಮ್ಮ ಸಮಸ್ಯೆ, ಗಡಿನಾಡ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸಿ, ಕನ್ನಡಿಗರು ವಾಸಿಸುವ ಗ್ರಾಮಗಳಲ್ಲಿ ಅಗತ್ಯವಿರುವ ರಸ್ತೆ, ನೀರು, ಬಸ್ ಸೌಕರ್ಯ, ಶಿಕ್ಷಣ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಭರವಸೆ ನೀಡಿದರು.
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ವಿಜಯಪುರ, ಗುಡ್ಡಾಪುರ ದಾನಮ್ಮ ದೇವಿ ದೇವಸ್ಥಾನ್ಟ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಕನ್ನಡ ಸಂಘಟನೆಗಳ ಸಹಯೋಗದಲ್ಲಿ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಗುಡ್ಡಾಪುರದಲ್ಲಿ ಸೋಮವಾರ ಹಮ್ಮಿಕೊಂಡ ಕರ್ನಾಟಕ ಸಂಭ್ರಮ-೫೦, ಗಡಿನಾಡ ಚೇತನ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ, ಕರ್ನಾಟಕ ಗಡಿ ಪ್ರಾಧಿಕಾರದ ಲಾಂಛನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವನಾದ ಮೇಲೆ ಗಡಿ ಭಾಗದ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಗುಡ್ಡಾಪುರದಲ್ಲಿ ಇಂತಹ ಅದ್ಭುತ ಸಾಮರಸ್ಯದ ಪ್ರತೀಕವಾದ ಕನ್ನಡ ಸಮಾವೇಶ ಹಮ್ಮಿಕೊಂಡಿರುವುದು ಅತೀವ ಸಂತಸ ತಂದಿದೆ. ಗುಡ್ಡಾಪುರ ದಾನಮ್ಮ ದೇವಸ್ಥಾನಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕರ್ನಾಟಕ ಜನರು ಬರುವುದರಿಂದ ಈ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಅಗತ್ಯ ಅನುದಾನವನ್ನು ನಮ್ಮ ಸರ್ಕಾರದಿಂದ ಒದಗಿಸಲಾಗುವುದು. ಈ ಹಿಂದೆ ಹಲವಾರು ಪ್ರಶಸ್ತಿಗಳನ್ನು ನೀಡಿದ್ದರೂ ಸಹ ಈ ಐತಿಹಾಸಿಕ ಸಮಾವೇಶದಲ್ಲಿ, ಕನ್ನಡ ನಾಡು-ನುಡಿ, ಸಂಸ್ಕೃತಿ, ಸಾಹಿತ್ಯ, ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ, ಕನ್ನಡ ಭಾಷೆ ಅಳಿವು-ಉಳಿವಿಗಾಗಿ ಶ್ರಮಿಸಿದ ಮಹಾನ್ ಗಡಿನಾಡ ಚೇತನರನ್ನು ಗುರುತಿಸಿ ಪ್ರಶಸ್ತಿ ನೀಡುವ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ ಎಂದು ಹೇಳಿದರು. ಕರ್ನಾಟಕ-೫೦ ವರ್ಷ ಹಿನ್ನೆಲೆಯಲ್ಲಿ ಬರುವ ನವೆಂಬರ್ ೧ ರಂದು ೬೯ ಜನರಿಗೆ ರಾಜ್ಯ ಪ್ರಶಸ್ತಿ ನೀಡಿ, ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಾಡಿನ ಸಾಂಸ್ಕೃತಿಕ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ಹೇಳಿದರು.
ಸಮಾವೇಶದಲ್ಲಿ ಸಾಂಗ್ಲಿ ಜಿಲ್ಲೆಯ ಜತ್ತ ಶಾಸಕ ವಿಕ್ರಮಸಿಂಹ ಬಾಳಾಸಾಹೇಬ ಸಾವಂತ ಮಾತನಾಡಿದರು.
ಗುಡ್ಡಾಪುರದಲ್ಲಿ ಮೊಟ್ಟಮೊದಲ ಬಾರಿಗೆ ಇಂತಹ ವಿಶೇಷ ಕಾರ್ಯಕ್ರಮ : ರಾಜ್ಯದಲ್ಲಿಯೇ ಹಾಗೂ ಗುಡ್ಡಾಪುರದಲ್ಲಿ ಮೊಟ್ಟಮೊದಲ ಬಾರಿಗೆ ಇಂತಹ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇದಕ್ಕೂ ಮುನ್ನ ಸಾಹಿತಿಗಳು ತಮ್ಮ ವಿಚಾರಗಳನ್ನು ಅಭಿವ್ಯಕ್ತಪಡಿಸಲು ಮುಕ್ತ ಅವಕಾಶವನ್ನು ನೀಡಿ ಮೈಸೂರಿನಲ್ಲಿ ಸಾಹಿತಿಗಳ ಚಿಂತನಾ ಸಮಾವೇಶ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಭಾಗದಲ್ಲಿ ಪರಸ್ಪರ ಅನ್ಯೂನ್ಯ, ಪ್ರೀತಿ, ವಿಶ್ವಾಸ ಬೆಳೆಸಿ, ಉಭಯ ರಾಜ್ಯದ ಜನರು ಸಾಮರಸ್ಯದಿಂದ ಬದುಕಲು ಗಡಿಭಾಗದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಚಿವ ಶಿವರಾಜ ಎಸ್.ತಂಗಡಗಿ ಅವರು ಹೇಳಿದರು.
ರಾಜ್ಯದ ಗಡಿ ಭಾಗದಲ್ಲಿರುವ ಪ್ರತಿಯೊಬ್ಬ ಕನ್ನಡಿಗರ ಸಮಸ್ಯೆಗಳಿಗೆ ಸರ್ಕಾರ ನಿರಂತರವಾಗಿ ಸ್ಪಂದಿಸುತ್ತಲಿದ್ದು, ಗಡಿಭಾಗದ ಜನರ ಸಮಸ್ಯೆಗಳನ್ನು ಆಲಿಸಿ, ಸಮಸ್ಯೆಗಳನ್ನು ಬಗೆಹರಿಸಲು ನಮ್ಮ ಕರ್ನಾಟಕ ಸರ್ಕಾರ ಪ್ರಯತ್ನಿಸಿಲಿದೆ. ನಾನು ಸಹ ಗಡಿ ಭಾಗದ ಜನರ ಸಮಸ್ಯೆಗಳನ್ನು ಪರಿಶೀಲಿಸಿ, ಅವರಿಗೆ ದೊರಕಿ¸ Àಬಹುದಾದ ಮೂಲಭೂತ ಸೌಕರ್ಯಗಳಾದ ರಸ್ತೆ, ನೀರು, ಶಿಕ್ಷಣ ಸೇರಿದಂತೆ ಎಲ್ಲ ಅಗತ್ಯ ಸೌಲಭ್ಯ ದೊರಕಿಸಲು ಈ ಭಾಗದ ಜನರ ಸಮಸ್ಯೆಗಳ ವರದಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಅವರು ಹೇಳಿದರು.
ಸಮಾವೇಶದಲ್ಲಿ ವಿವಿಧ ಬೇಡಿಕೆ ಈಡೇರಿಸಲು ಸಚಿವರಿಗೆ ಮನವಿ : ಸಮಾವೇಶದಲ್ಲಿ ಮಹಾರಾಷ್ಟ್ರ ಕನ್ನಡಿಗರಿಂದ ಬೇಡಿಕೆಗಳನ್ನು ಸಲ್ಲಿಸಿ, ಉದ್ಯೋಗದಲ್ಲಿ ಭದ್ರತೆ, ಅಂಗನವಾಡಿಗಳಲ್ಲಿ ಕನ್ನಡ ಆದ್ಯತೆ, ಸರ್ಕಾರಿ ಪ್ರೌಢಶಾಲೆ ಆರಂಭ, ಗಡಿ ಭಾಗದ-ಮಹಾರಾಷ್ಟ್ರದ ಕನ್ನಡ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ನೇಮಕ, ಕನ್ನಡದಲ್ಲಿ ಟಿಇಟಿ ಪರೀಕ್ಷೆ ಬರೆಯಲು ಅವಕಾಶ ನೀಡಲು ಮಹಾರಾಷ್ಟ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು, ಕನ್ನಡ ಶಾಲೆಗಳಿಗೆ ಕನ್ನಡ ಸಾಹಿತ್ಯಿಕ ಪುಸ್ತಕಗಳು, ಪರಿಕರಗಳನ್ನು ಒದಗಿಸುವುದು, ಮಹಾರಾಷ್ಟ್ರ ರಾಜ್ಯದ ವಿವಿಧ ನಗರಗಳಲ್ಲಿ ಕನ್ನಡ ಭವನ ನಿರ್ಮಾಣ, ನವೋದಯ, ಮೊರಾರ್ಜಿ ಶಾಲೆಗಳಲ್ಲಿ ಗಡಿ ಕನ್ನಡಿಗರ ಪ್ರವೇಶಕ್ಕೆ ಆದ್ಯತೆ, ಉಚಿತ ಸಾರಿಗೆ ಸೌಕರ್ಯ ಸೇರಿದಂತೆ ಗಡಿನಾಡಿನಲ್ಲಿ ಕನ್ನಡ, ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಪ್ರೋತ್ಸಾಹಿಸಲು ಸಚಿವರಿಗೆ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಈ ಎಲ್ಲ ಬೇಡಿಕೆಗಳನ್ನು ಹಂತ-ಹಂತವಾಗಿ ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.
ಗಡಿನಾಡ ಚೇತನ ಪ್ರಶಸ್ತಿ ಪ್ರದಾನ : ಸಮಾವೇಶದಲ್ಲಿ ಕನ್ನಡ ಶಾಲೆ ವಿದ್ಯಾರ್ಥಿಗಳಿಗೆ ನಲಿ-ಕಲಿ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದಿಂದ ಹೊರ ತಂದಿರುವ ಗಡಿಯಲ್ಲಿ ಭಾಷಾ ಸಾಮರಸ್ಯ ಪುಸ್ತಕ ಬಿಡುಗಡೆ ಮಾಡಲಾಯಿತು. ೨೦೨೩-೨೪ನೇ ಸಾಲಿನ ಹಾಗೂ ೨೦೨೪-೨೫ನೇ ಸಾಲಿನ ಗಡಿ ಪ್ರಾಧಿಕಾರದಿಂದ ನೀಡುವ ಗಡಿನಾಡ ಚೇತನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜವಳಿ, ಕಬ್ಬು ಮತ್ತು ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ ಅವರು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸಾಕ್ಷ್ಯಚಿತ್ರಕ್ಕೆ ಚಾಲನೆ ನೀಡಿ ಮಾತನಾಡಿದರು. ಕೌಶಲ್ಯಾಭಿವೃದ್ದಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಗೀತಾಂಜಲಿ ಪಾಟೀಲ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಜಿಲ್ಲಾಧಿಕಾರಿ ಟಿ. ಭೂಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಕರ್ನಾಟಕ ಗಡಿ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ, ದಾನಮ್ಮದೇವಿ ಟ್ರಸ್ಟ್ನ ಅಧ್ಯಕ್ಷ ವಿಜುಗೌಡ ಪಾಟೀಲ, ಎಂ.ಎಸ್. ಮದಭಾವಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಎಮ್ ಆರ್ ಪಾಟೀಲ, ರಾಜುಗೌಡ ಪೊಲೀಸ್‌ಪಾಟೀಲ ಸೇರಿದಂತೆ ವಿವಿಧ ಅಕಾಡೆಮಿಗಳ ಅಧ್ಯಕ್ಷರು, ಸದಸ್ಯರು, ಇತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣಿದೇವಿ ಮಾಲಗತ್ತಿ ಸ್ವಾಗತಿಸಿದರು.