ಪ್ರಯಾಗ್ರಾಜ್ ಕುಂಭಮೇಳ ದುರಂತದ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಅವರ ಹೇಳಿಕೆ

Jan 30, 2025 - 00:59
 0
ಪ್ರಯಾಗ್ರಾಜ್ ಕುಂಭಮೇಳ ದುರಂತದ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಅವರ ಹೇಳಿಕೆ

ಬೆಂಗಳೂರು : ಪ್ರಯಾಗ್ರಾಜ್ ಕುಂಭಮೇಳ ಕಾಲ್ತುಳಿತ ದುರಂತದಲ್ಲಿ ರಾಜ್ಯದ ನಾಲ್ಕು ಜನ ಮೃತಪಟ್ಟಿರುವ ಬಗ್ಗೆ ಶಂಕೆ ಇದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದರು. 

ವಿಕಾಸಸೌಧದ ಕಚೇರಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, “ಬೆಳಗಾವಿ ತಾಲೂಕು ಯಲ್ಲೂರು ರಸ್ತೆ ವಡಗಾಂವ್ ಭಾಗದ ಮೇಘಾ ದೀಪಕ್ ಹತ್ತರವರ್ (24), ಜ್ಯೋತಿ ದೀಪಕ್ ಹತ್ತರವರ್ (44) ಹಾಗೂ ಬೆಳಗಾವಿ ತಾಲೂಕಿನ ಶೆಟ್ಟಿಗಲ್ಲಿ ಭಾಗದ ಅರುಣಾ ಖೋರ್ಪಡೆ (61), ಮಹಾದೇವಿ ಹಣಮಂತ ಬಾವಣೂರ (48) ಮೃತಪಟ್ಟಿರುವ ಸಾಧ್ಯತೆ ಇದೆ ಎಂದರು.

ರಾಜ್ಯದ ವಿಪತ್ತು ನಿರ್ವಹಣಾ ತಂಡ ಉತ್ತರಪ್ರದೇಶ ಸರ್ಕಾರದ ಜೊತೆ ನಿರಂತರ ಸಂಪರ್ಕದಲ್ಲಿದೆ. ಆದರೆ, ಉತ್ತರಪ್ರದೇಶ ಸರ್ಕಾರ ಪ್ರಯಾಗ್ರಾಜ್ ಕುಂಭಮೇಳ ದುರುಂತದಲ್ಲಿ ರಾಜ್ಯದ ಎಷ್ಟು ಜನ ಮೃತಪಟ್ಟಿದ್ದಾರೆ, ಎಷ್ಟು ಜನ ಗಾಯಾಳುಗಳಾಗಿದ್ದಾರೆ ಎಂಬ ಕುರಿತು ಯಾವುದೇ ಮಾಹಿತಿ ನೀಡುತ್ತಿಲ್ಲ. ಬೆಳಗಾವಿ ಜಿಲ್ಲಾಧಿಕಾರಿ ಸ್ವತಃ ಕುಂಭಮೇಳಕ್ಕೆ ತೆರಳಿದವರ ಕುಟುಂಬದವರನ್ನು ಸಂಪರ್ಕಿಸಿ ನಾಲ್ಕು ಜನ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದರು.

ಬಿಜೆಪಿ ನಾಯಕರ ಸಹಾಯದಿಂದ ಬೆಳಗಾವಿ ಜಿಲ್ಲೆಯ 300 ಕ್ಕಿಂತ ಹೆಚ್ಚು ಜನ ಕುಂಭಮೇಳಕ್ಕೆ ಪ್ರಯಾಣ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಈ ನಡುವೆ ಉತ್ತರ ಪ್ರದೇಶ ಸರ್ಕಾರ ಯಾವುದೇ ಮಾಹಿತಿ ನೀಡದ ಹಿನ್ನೆಲೆ ಕನ್ನಡಿಗರ ಹಿತರಕ್ಷಣೆಗಾಗಿ ಓರ್ವ ಐಎಎಸ್ ಅಧಿಕಾರಿ, ಬೆಳಗಾವಿ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಸಿ) ಹಾಗೂ  ಪೊಲೀಸ್ ಅಧಿಕಾರಿಯೊಬ್ಬರನ್ನೊಳಗೊಂಡ ಮೂರು ಜನರ ತಂಡವನ್ನು ಈಗಾಗಲೇ ಪ್ರಯಾಗ್ರಾಜ್ಗೆ ಕಳುಹಿಸಲಾಗಿದೆ ಎಂದರು.

ಈ ಸಂಬಂಧ ಸಹಾಯವಾಣಿಯನ್ನೂ ತೆರೆದಿದ್ದು, ಕುಂಭಮೇಳಕ್ಕೆ ಹೊರಟು ಕುಟುಂಬಸ್ಥರ ಸಂಪರ್ಕಕ್ಕೆ ಸಿಗದವರ ಬಗ್ಗೆ ಮಾಹಿತಿ ನೀಡಲು ಕೋರಿದೆ. ಸಹಾಯವಾಣಿ:- 80-22340676

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.