ಕನ್ನಡಿಗರ ವರ್ತಮಾನದ ಸಂಕಷ್ಟಕ್ಕೆ ಗಡಿ ರೇಖೆಗಳಿಲ್ಲ : ಡಾ.ಪುರುಷೋತ್ತಮ ಬಿಳಿಮಲೆ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ಹೈದರಾಬಾದ್ : ಸಂಘಟಿತ ಹೋರಾಟ ಇಂದಿನ ದಿನಮಾನದ ಜರೂರು ಹೊರನಾಡು ಗಡಿನಾಡಿನ ಕನ್ನಡಿಗರ ಹಿತಕಾಯಲು ಯಾರೂ ಇಲ್ಲವೆನ್ನುವ ಅನಾಥಪ್ರಜ್ಞೆ ಸರಿಯಲ್ಲ. ಭಾಷೆಯ ಕುರಿತಂತೆ ಹೆಮ್ಮೆಯನ್ನು ಹೊಂದಿರುವ ಕನ್ನಡಿಗರು ಒಳನಾಡಿನಲ್ಲಿಯೂ ಸಂಕಷ್ಟದಲ್ಲಿದ್ದು, ಕನ್ನಡದ ಸಮಸ್ಯೆಗಳನ್ನು ಎಲ್ಲ ಕನ್ನಡಿಗರು ಸಂಘಟಿತರಾಗಿ ಪರಿಹರಿಸಿಕೊಳ್ಳಬೇಕಾದ ಸಂದರ್ಭ ಇದಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯ ವ್ಯಕ್ತಪಡಿಸಿದರು. ಹೊರರಾಜ್ಯದಲ್ಲಿ ನಿಜವಾದ ಕನ್ನಡ ಉಳಿಯುತ್ತಿದೆ. ಹಾಗೂ ಕನ್ನಡ ಭಾಷೆಯನ್ನು ದೇವರಿಗೆ ಕಲಿಸಿದವರು ವಚನಕಾರರು ಎಂದು ಕನ್ನಡ ಭಾಷೆಯ ಬಗ್ಗೆ ಹೆಮ್ಮೆಯ ವಿಷಯ ಎಂದು ಡಾ ಪುರುಷೋತ್ತಮ ಬಿಳಿಮಲೆ ನುಡಿದರು. ನಾವು ವೇಗವಾಗಿ ಬೆಳೆಯುತ್ತಿರುವ ಸಂದರ್ಭಗಳಲ್ಲಿ ನಾವು ಹಿಂದಿನ ನೆನಪುಗಳ ಮಾಡಿಕೊಳ್ಳುವ ಇದು ಸಂದರ್ಭ ಹೀಗಾಗಿ ನಮ್ಮ ಕನ್ನಡ ಭಾಷೆಯ ಬೆಳವಣಿಗೆಯ ವೇಗವನ್ನು 3.7 ಪ್ರತಿಶತ ಇರುವುದು ಕಳವಳಕಾರಿ ವಿಷಯವಾಗಿದೆ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಶನಿವಾರ ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದ ಸಿಲ್ವರ್ ಜೂಬಿಲಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 2023-24ನೇ ಸಾಲಿನ ಕನ್ನಡ ಮಾಧ್ಯಮ ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ದೇಶದ ಯಾವುದೇ ಭಾಗದಲ್ಲಿ ವಾಸಿಸುತ್ತಿರುವ ಕನ್ನಡಿಗರ ಹಿತಕಾಯಲು ಸಿದ್ಧವಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ತನ್ನ ಸಂಪರ್ಕಕೊಂಡಿಯ ಕೆಲಸವನ್ನು ಮುಂದುವರೆಸಲಿದೆ ಎಂದರು.
ರಾಜ್ಯದಲ್ಲಿ ಏಳು ಸಾವಿರ ಏಕೋಪಾಧ್ಯಾಯ ಶಾಲೆಗಳು, ಐವತ್ತೈದು ಸಾವಿರ ಶಿಕ್ಷಕರ ಖಾಲಿ ಹುದ್ದೆಗಳು, ಆಂಗ್ಲ ಮಾಧ್ಯಮ ಶಾಲೆಗಳಾಗಿ ಪರಿವರ್ತಿತವಾಗುತ್ತಿರುವ ಸರ್ಕಾರಿ ಕನ್ನಡ ಶಾಲೆಗಳನ್ನು ಗಮನಿಸಿದಲ್ಲಿ ಕನ್ನಡದ ಮುಂದಿನ ದಿನಗಳ ಸ್ಥಿತಿ ಕಳವಳಕಾರಿ ಎಂದು ಆತಂಕ ವ್ಯಕ್ತಪಡಿಸಿದ ಡಾ.ಬಿಳಿಮಲೆ, ಇದು ಪ್ರವಾಹದ ವಿರುದ್ಧ ಈಜುವ ಕೆಲಸವಾಗಿದ್ದು, ಸಂಘಟಿತ ಹೋರಾಟವೇ ಪರಿಣಾಮಕಾರಿಯಾದ ಫಲಿತಾಂಶವನ್ನು ಒದಗಿಸಲು ಸಾಧ್ಯವೆಂದರು.
ದೇಶದ ಯಾವುದೇ ಮೂಲೆಯಲ್ಲಿ ವಾಸಿಸುತ್ತಿರುವ ಕನ್ನಡಿಗ ವಿದ್ಯಾರ್ಥಿಗಳಿಗೆ ಹಿಂದುಳಿದ ವರ್ಗಗಳ ವಸತಿನಿಲಯಗಳಲ್ಲಿ ಉಚಿತ ಪ್ರವೇಶ ಕರ್ನಾಟಕದಲ್ಲಿ ತಮ್ಮ ವ್ಯಾಸಂಗವನ್ನು ಮುಂದುವರೆಸ ಬಯಸುವ ಗಡಿನಾಡು, ಹೊರನಾಡು ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ಹಿಂದುಳಿದ ವರ್ಗಗಳ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಯಾವುದೇ ನಿರ್ಬಂಧಗಳನ್ನು ಹೇರದೆ ಅವಕಾಶ ಕಲ್ಪಿಸಿಕೊಡಲು ಈಗಾಗಲೇ ರಾಜ್ಯ ಸರ್ಕಾರವು ತೀರ್ಮಾನಿಸಿದೆ ಎಂಬ ಮಾಹಿತಿಯನ್ನು ಹಂಚಿಕೊಂಡ ಡಾ.ಬಿಳಿಮಲೆ, ಈ ಕುರಿತಂತೆ ಸಮಾಜ ಕಲ್ಯಾಣ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪನವರು ತಮಗೆ ಸ್ಪಷ್ಟ ಭರವಸೆಯನ್ನು ನೀಡಿದ್ದು, ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ಇದು ಅನುಷ್ಠಾನಗೊಳ್ಳಲಿದೆ ಎಂದರು
ಆಂಗ್ಲ ಭಾಷೆಯ ವ್ಯಾಮೋಹ ಬೇಡ- ಡಾ. ಬೈರಮಂಗಲ ರಾಮೇಗೌಡ
ಕನ್ನಡದ ಪ್ರಾಚೀನತೆಗೆ ಮತ್ತು ಅದರ ಶ್ರೀಮಂತಿಕೆಗೆ ಯಾವುದೇ ಸಾಟಿಯಲ್ಲದ ಇಂಗ್ಲಿಷ್ ಭಾಷೆಯನ್ನು ಓಲೈಸುವ ವಾತಾವರಣ ಎಲ್ಲ ಕಡೆ ಸೃಷ್ಟಿಯಾಗಿರುವುದು ದುರದೃಷ್ಟಕರವೆಂದ ಸಾಹಿತಿ ಡಾ.ಬೈರಮಂಗಲ ರಾಮೇಗೌಡ, ಎಲ್ಲ ಭಾಷೆಗಳಿಗೆ ಕಂಟಕಪ್ರಾಯವಾಗಿರುವ ಇಂಗ್ಲಿಷ್ ಅನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ವಿಶೇಷ ಮಹತ್ವ ಹೊಂದಿದೆ. ಕನ್ನಡ ಭಾಷೆಯ ಜೀವಂತಿಕೆಯನ್ನು ಉಳಿಸುವ ಮೂಲಕ ಮುಂದಿನ ಪೀಳಿಗೆಗೆ ಅದನ್ನು ದಾಟಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತದೆ ಎಂದರು.
ಕನ್ನಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಕಬ್ಬಿಣದ ಕಡಲೆಯಲ್ಲ -ಶ್ರೀ ರಾಜಶೇಖರ .ಎನ್
ಮುಖ್ಯ ಅತಿಥಿಯಾಗಿ ಮಕ್ಕಳಿಗೆ ಉದ್ದೇಶಿಸಿ ಮಾತನಾಡಿದ
ಹೈದರಾಬಾದ್ ನ ಕೇಂದ್ರೀಯ ಪತ್ತೇದಾರಿ ತರಬೇತಿ ಸಂಸ್ಥೆಯ ನಿರ್ದೇಶಕ ಶ್ರೀ ರಾಜಶೇಖರ .ಎನ್ (ಭಾ.ಪೋ.ಸೇ.) ರವರು, ಕನ್ನಡ ಮಾಧ್ಯಮದಲ್ಲಿ ಓದಿದರೆ ಉನ್ನತ ವ್ಯಾಸಂಗವಾಗಲಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣವಾಗಲಿ ಸಾಧ್ಯವಿಲ್ಲವೆನ್ನುವ ನಂಬಿಕೆಯನ್ನು ಮಕ್ಕಳು ಮತ್ತು ಪೋಷಕರು ಬಿಡಬೇಕು. ಕನ್ನಡದ ಮೂಲಕವೂ ಯಶಸ್ಸು ಸಾಧ್ಯವೆನ್ನುವುದಕ್ಕೆ ಮಾದರಿಯಾಗಿ ತಾನೇ ಇದ್ದೇನೆಂದರು.
ಇಂದು ಸಾಕ್ಷಿಯಾಗಿದ್ದೇನೆ. ಮಕ್ಕಳು ಕನ್ನಡ ಮಾಧ್ಯಮ ಎಂಬ ಕಿಳರಿಮೆಯನ್ನು ಮನಸ್ಸಿನಿಂದ ಕಿತೊಗೆಯಬೇಕು. ಕನ್ನಡ ಭಾಷೆಯಲ್ಲಿ ನೀವು ಓದಿದರೆ ಏನೆಲ್ಲವೂ ಸಾಧಿಸಲು ಸಾಧ್ಯವಾಗುತ್ತದೆ. ವಚನ ಕಾರರು ಕನ್ನಡ ಭಾಷೆಯನ್ನು ಜನಸಾಮಾನ್ಯರ ಭಾಷೆಯಾಗಿ ಮಾಡಿದರು. ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ ಎಂಬ ಬಸವೇಶ್ವರ ವಚನವನ್ನು ಉಲ್ಲೇಖಿಸಿದರು. ಕನ್ನಡ ಭಾಷೆಯು ಸರಳ ಸುಲಭವಾದ ಭಾಷೆಯಾಗಿದೆ ಕವಿಯು ಹೇಳುವಂತೆ ಸುಲಿದ ಬಾಳೆಯ ಹಣ್ಣಿನಂತೆ ಕನ್ನಡ ಭಾಷೆ ಎಂದು ರಾಜಶೇಖರ ನುಡಿದರು.
ಹಾಗೆ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಧೈರ್ಯ ಸಾಹಸ ಒಳಗೊಂಡಿರುತ್ತದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸುವ ಎದೆಗಾರಿಕೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮಾತ್ರ ಇರುವುದು.. ಹೀಗಾಗಿ ವಿದ್ಯಾರ್ಥಿಗಳು ದಿನನಿತ್ಯದಲ್ಲಿ ಒಂದು ಶಿಕ್ಷಣ ಮಾಡುವುದು. ಪ್ರತಿನಿತ್ಯ ದಿನಪತ್ರಿಕೆ ಓದುವುದು. ಟಿವಿಯಲ್ಲಿ ಪ್ರಸಾರವಾಗುವ ವರದಿಯನ್ನು ನೋಡುವುದರಿಂದ ನೀವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಉದ್ಯೋಗ ಪಡೆದುಕೊಳ್ಳಬಹುದು ಹೀಗಾಗಿ ಕಿಳರಿಮೆಯನ್ನು ಮನಸ್ಸಿನಿಂದ ತೆಗೆದು ಹಾಕಿ ನಿರಂತರವಾಗಿ ಅಧ್ಯಯನ ಮಾಡಿ ಎಂದು ಕಿವಿ ಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಸಿ ಹಾಗೂ ಎಚ್.ಎಸ್.ಸಿ ತರಗತಿಗಳನ್ನು ಕನ್ನಡ ಮಾಧ್ಯಮದಲ್ಲಿ ಅಭ್ಯಸಿಸಿ ಅತಿಹೆಚ್ಚು ಅಂಕಗಳಿಸಿದ ಆಂಧ್ರ ಪ್ರದೇಶ ರಾಜ್ಯದ 52 ಹಾಗೂ ತೆಲಂಗಾಣ ರಾಜ್ಯದ 17 ವಿದ್ಯಾರ್ಥಿಗಳು ಸೇರಿ 69 ವಿದ್ಯಾರ್ಥಿಗಳಿಗೆ ನಗದು ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಯಿತು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯ ಶ್ರೀ ಟಿ. ತಿಮ್ಮೇಶ್, ಡಾ.ರವಿಕುಮಾರ್ ನೀಹ, ಹೈದರಾಬಾದ್ ಉಸ್ಮಾನಿಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಂ.ಲಿಂಗಪ್ಪ ಗೋನಾಳ್, ತೆಲಂಗಾಣ ಘಟಕದ ಕಸಾಪ ಅಧ್ಯಕ್ಷ ಡಾ. ವಿಠ್ಠಲ ಜೋಶಿ, ಗಡಿನಾಡು ಕನ್ನಡ ಸಂಘ (ಕೃಷ್ಣಾ) ಗೌರವಾಧ್ಯಕ್ಷ ಶ್ರೀ ಎಸ್.ರಾಮಲಿಂಗಪ್ಪ, ಅನಂತಪುರ ಜಿಲ್ಲೆಯ ಜಿಲ್ಲಾ ಪರಿಷತ್ ಪ್ರೌಢಶಾಲೆ ಶಿಕ್ಷಕ ಶ್ರೀ ಗಿರಿಜಾಪತಿ ಮಠ್ ಮಾತನಾಡಿದರು, ಉಪನ್ಯಾಸಕ ಶ್ರೀ ಎಲ್. ಅಕ್ಷಯ್ ಕುಮಾರ್, ಕರ್ನಾಟಕ ಸಾಹಿತ್ಯ ಮಂದಿರದ ಕಾರ್ಯದರ್ಶಿ ನರಸಿಂಹ ಮೂರ್ತಿ ಜೋಯಿಸ. ಹಾಜರಿದ್ದರು. ಹೈದರಾಬಾದ್ ಕನ್ನಡಿಗರ ಕಲ್ಯಾಣ ಅಭಿವೃದ್ಧಿ ಸಂಘದ ಅಧ್ಯಕ್ಷ ಶ್ರೀ ಧರ್ಮೇಂದ್ರ ಪೂಜಾರಿ ಬಗ್ದೂರಿ ವಂದಿಸಿದರು. ಪರಿಮಳ ದೇಶಪಾಂಡೆ ನಿರೂಪಿಸಿದರು. ಸಮಾರಂಭದಲ್ಲಿ ಡಾ. ವಿನಯ ನಾಯರ ಅವರಿಂದ ಸುಗಮ ಸಂಗೀತ ನಡೆಯಿತು. ಕನ್ನಡ ಗೀತೆಗೆ ಚನ್ನರಾಯಪಟ್ಟಣದ ಬಿ.ವಿ. ಶೈಲಜಾ ಮತ್ತು ತಂಡದಿಂದ ಅದ್ಭುತ ನೃತ್ಯ ಪ್ರದರ್ಶನ ನೀಡಿದರು.