ನಾನು ಅನ್ನುವುದನ್ನು ಬಿಟ್ಟಾಗ, ವ್ಯಕ್ತಿ ಪರಿಪೂರ್ಣನಾಗುತ್ತಾನೆ...!

Oct 1, 2024 - 19:24
 0
ನಾನು ಅನ್ನುವುದನ್ನು ಬಿಟ್ಟಾಗ, ವ್ಯಕ್ತಿ ಪರಿಪೂರ್ಣನಾಗುತ್ತಾನೆ...!
ಲೇಖಕ - ವಿಶ್ವಾಸ ಡಿ ಗೌಡ (ಸಕಲೇಶಪುರ)
ನಾನು ಅನ್ನುವುದನ್ನು ಬಿಟ್ಟಾಗ, ವ್ಯಕ್ತಿ ಪರಿಪೂರ್ಣನಾಗುತ್ತಾನೆ...!

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ಲೇಖಕ - ವಿಶ್ವಾಸ ಡಿ ಗೌಡ (ಸಕಲೇಶಪುರ)

ಅಹಂಕಾರವನ್ನು ಗೆಲ್ಲದೇ ಹೋದರೆ, ಎಷ್ಟೇ ಸಾಧನೆ ಮಾಡಿದರೂ ಅದು ಕ್ಷುಲ್ಲಕವೇ ಆಗುತ್ತದೆ. ಯಾವುದೇ ಸಾಧಕನಿಗೆ ಅಹಂಕಾರ ಅತಿ ದೊಡ್ಡ ತೊಡಕು. ಈ ನಿಟ್ಟಿನಲ್ಲಿ ನಾರದರ ಅಹಂಕಾರ ಕರಗಿದ ಸ್ವಾರಸ್ಯಕರ ಕತೆಯೊಂದು ಇಲ್ಲಿದೆ. ಇದು ನಮಗೆಲ್ಲ ಪಾಠವಾಗಲಿ.

ಒಮ್ಮೆ ದೇವರ್ಷಿ ನಾರದರಿಗೆ ತಮ್ಮ ಸಾಧನೆಯ ಬಗ್ಗೆ ಅತೀವ ಅಭಿಮಾನ ಉಂಟಾಯಿತು. ತನ್ನಂಥ ಭಕ್ತರೂ ತಾಪಸಿಗರೂ ಯಾರಿಲ್ಲವೆಂಬ ಸ್ವಪ್ರಶಂಸೆ ಆರಂಭಿಸಿದರು. ಕಂಡವರೆಲ್ಲರ ಎದುರು ತಾವು ಸದಾ ಕಾಲ ಶ್ರೀ ಹರಿಯ ಧ್ಯಾನ ಮಾಡುವುದನ್ನೂ ಆ ಮೂಲಕ ಸಷ್ಟಿಯಲ್ಲೇ ಇನ್ನಾರೂ ಸಂಪಾದಿಸದಷ್ಟು ಪುಣ್ಯ ಸಂಪಾದನೆ ಮಾಡಿರುವುದನ್ನೂ ಹೇಳಿಕೊಳ್ಳುತ್ತಿದ್ದರು.

ಮೊದಮೊದಲು ನಾರದರ ಮಾತುಗಳನ್ನು ಕೇಳಿ ಸ್ಪಂದಿಸುತ್ತಿದ್ದವರಿಗೆ ಬರಬರುತ್ತ ಆ ಬಗ್ಗೆ ಜುಗುಪ್ಸೆ ಉಂಟಾಗತೊಡಗಿತು. ನಾರದರ ಈ ವರ್ತನೆಯ ಬಗ್ಗೆ ಶ್ರೀಮನ್ನಾರಾಯಣನವರೆಗೂ ದೂರು ಹೋಯಿತು. ಲೋಕ ಸಂಚಾರಿಯಾಗಿದ್ದ ನಾರದರು ಬಹಳ ದಿನಗಳ ನಂತರ ವೈಕುಂಠಕ್ಕೆ ಬಂದರು. ಕ್ಷೀರಸಾಗರದಲ್ಲಿ ಆದಿಶೇಷನ ಮೇಲೆ ಪವಡಿಸಿದ್ದ ಲಕ್ಷ್ಮೀ ನಾರಾಯಣರಿಗೆ ಕೈಮುಗಿದು ಯಥಾಪ್ರಕಾರ ತನ್ನದೇ ಗುಣಗಾನಕ್ಕೆ ಶುರುವಿಟ್ಟರು. ಆಗ ಲಕ್ಷ್ಮೀ ದೇವಿಯು, '' ನಾರದಾ, ನಿನ್ನನ್ನು ಮೀರಿಸಿದ ಭಕ್ತರಿಲ್ಲವೆಂದು ಅಷ್ಟು ದೃಢವಾಗಿ ಹೇಗೆ ಹೇಳುತ್ತೀ? '' ಎಂದು ಕೇಳಿದಳು. ಆಗ ನಾರದರು, '' ತಾಯಿ, ಬೇಕಿದ್ದರೆ ಪರೀಕ್ಷಿಸಿ ನೋಡಿ. ನನಗಿಂತ ದೊಡ್ಡ ಹರಿಭಕ್ತ ಸಿಕ್ಕರೆ ನೀವು ಹೇಳುವುದೆಲ್ಲ ಮಾಡಿಯೇನು, '' ಎಂದುಬಿಟ್ಟರು.

ಆಗ ನಾರಾಯಣನು '' ನಡೆ ಹಾಗಾದರೆ, ದೇವತೆಗಳನ್ನು ಒರೆಗೆ ಹಚ್ಚುವ.. ಭೂಲೋಕದಲ್ಲಿ ಒಂದು ಸುತ್ತು ಹೊಡೆದುಬರೋಣ, '' ಎನ್ನುತ್ತ ನಾರದರೊಟ್ಟಿಗೆ ಹೊರಟನು.

ಅವರಿಬ್ಬರೂ ವೇಷ ಮರೆಸಿಕೊಂಡು ಒಬ್ಬ ರೈತನ ಮನೆಗೆ ಹೋದರು. ಅವನೊಬ್ಬ ಭಕ್ತರೈತ. ಇವರನ್ನು ಪ್ರೀತಿಯಿಂದ ಉಪಚರಿಸಿ ಆಶ್ರಯ ಕೊಟ್ಟನು. ಅವನು ಸದಾ '' ನಾರಾಯಣ ನಾರಾಯಣ '' ಎನ್ನುತ್ತ ನಾಮಸ್ಮರಣೆ ಮಾಡುತ್ತಿ ದ್ದನು. ಅದನ್ನು ತೋರಿಸುತ್ತಾ ಶ್ರೀಹರಿಯು '' ನೋಡಿದೆಯಾ ನಾರದಾ, ನೀನೊಬ್ಬನೇ ಅಲ್ಲ ! " ಎಂದನು.

ಆಗ ನಾರದ ತಾನು ನಿದ್ದೆಯನ್ನೂ ಮಾಡದೆ ನಾಮಸ್ಮರಣೆ ಮಾಡುವ ಹೆಚ್ಚುಗಾರಿಕೆ ತೋಡಿಕೊಂಡನು.

ರೈತನು ಹೊಲ ಉಳುವಾಗ, ನೀರು ಸೇದುವಾಗ ಹೀಗೆ ಪ್ರತಿಯೊಂದು ಕೆಲಸದ ನಡುವೆಯೂ ನಾಮಸ್ಮರಣೆ ಮಾಡುತ್ತಿದ್ದನು. ಇವನ್ನೆಲ್ಲ ನೋಡಿದ ನಾರದ, '' ಇದೇನು ಮಹಾ ? '' ಎನ್ನುತ್ತ ಶ್ರೀಹರಿ ತೋರಿದ ನಿದರ್ಶನವನ್ನು ಅವಗಣಿಸಿದನು.

ಆಗ ನಾರಾಯಣನು ಒಂದು ನೀರು ತುಂಬಿದ ಗಡಿಗೆಯನ್ನು ನಾರದನ ತಲೆಮೇಲಿಟ್ಟು - '' ಒಂದು ಹನಿಯೂ ಚೆಲ್ಲದಂತೆ ಈ ಬೆಟ್ಟಕ್ಕೆ ಸುತ್ತು ಹೊಡೆದು ಬಾ, '' ಎಂದನು. 

ನಾರದರು ಅದರಂತೆ ಗಡಿಗೆಯನ್ನು ಹೊತ್ತು ಜಾಗರೂಕತೆಯಿಂದ, ಸ್ವಲ್ಪವೂ ನೀರು ತುಳುಕದ ಹಾಗೆ ಸವಾಲು ಪೂರೈಸಿ ಹೆಮ್ಮೆಯಿಂದ ಬೀಗಿದರು. ಆಗ ಶ್ರೀ ಹರಿಯು,'' ನಾರದಾ, ಈ ನಡುವೆ ನನ್ನನ್ನು ಎಷ್ಟು ಬಾರಿ ನೆನೆಸಿಕೊಂಡೆ ? '' ಎಂದು ಕೇಳಿದನು. '' ಒಮ್ಮೆಯೂ ಇಲ್ಲ. ಅದು ಹೇಗೆ ನೆನೆಯಲಿ ? ಗಮನವೆಲ್ಲ ಗಡಿಗೆ ಮೇಲೆಯೇ ಇತ್ತು ! '' ಎಂದನು. 

ಆಗ ಶ್ರಿಹರಿಯು ರೈತನು ಎಂತಹ ಕಠಿಣ ಕೆಲಸದಲ್ಲಿ ತೊಡಗಿದ್ದಾಗಲೂ ನಾಮಸ್ಮರಣೆ ಮಾಡುವುದನ್ನು ನೆನಪಿಸಿಕೊಟ್ಟನು.

ನಾರದರ ಅಹಂಕಾರ ಕರಗಿತು. ಅಂದಿನಿಂದ ಅವರು ತಮ್ಮನ್ನು ತಿದ್ದಿಕೊಂಡು ಪರಿಪೂರ್ಣ ಸಾಧಕರಾದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.