ನಕಲಿ ದೇವಯ್ಯನ ಮೋಸದ ಮುಖ…

Jan 7, 2025 - 08:37
Jan 7, 2025 - 08:38
 0
ನಕಲಿ ದೇವಯ್ಯನ ಮೋಸದ ಮುಖ…

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ಸಂಗ್ರಹ - ಡಾ.ಈಶ್ವರಾನಂದ ಸ್ವಾಮೀಜಿ.

ತಗೊಳಮ್ಮ ಈ ಆ್ಯಪಲ್, ಗಟ್ಟಿ ಹಾಲು ಹಾಕಿ ಜ್ಯೂಸ್ ಮಾಡ್ಕೊಂಡು ಬಾ. ಮರ್ತಿದ್ದೆ  ಈ ಬಾಳೆಹಣ್ಣಿಗೆ ಗೊಡಂಬಿ, ಪಿಸ್ತಾ, ಬಾದಾಮಿ ಎರಡು ಸ್ಪೂನ್ ಜೇನುತುಪ್ಪ ಹಾಕಿ ಮಾಲ್ಟ್ ಮಾಡ್ಕೊಂಡು ತಗೊಂಡು ಬಾ, ಎಂದು ದೇವಯ್ಯನವರು ಹೇಳುವುದೇ ತಡ ಜಾನಕಮ್ಮನವರು ಗುರ್ರ್ ಎಂದು ಮಿಕ್ಸಿ ತಿರುಗಿಸಿ ತಂದುಕೊಟ್ಟರು.

ಪೂಜೆಯ ಮಧ್ಯೆ ಮಧ್ಯೆ ದೇವಯ್ಯನವರು ಜ್ಯೂಸನ್ನೊಮ್ಮೆ ಮಾಲ್ಟ್'ನ್ನೊಮ್ಮೆ ಸವಿದು ತೇಗಿದರು. ಈ ಪೂಜೆಗೋಸ್ಕರ ನಿನ್ನೆ ಸಂಜೆಯಿಂದ ಉಪವಾಸವಿದ್ದ ಜಾನಕಮ್ಮನವರಿಗೆ, ಪೂಜಾರಿ ದೇವಯ್ಯನವರು ಜ್ಯೂಸ್, ಮಾಲ್ಟ್ ಸವಿಯುವದ ಕಂಡು ಬಾಯಲ್ಲಿ ನೀರೂರಿತಾದರೂ ಪೂಜೆ ವ್ರತ ಹಾಳಗುವುದೆಂದು ಅಂಗೈಯಿಂದ ತನ್ನ ಎರಡು ಕಪಾಳವನ್ನು ಮುಟ್ಟಿ ತಪ್ಪಾಯಿತೆಂದರು.

ಒಂದು ಗಂಟೆ ಪೂಜೆ ಎಂದು ಹೇಳಿದ್ದ ದೇವಯ್ಯನವರು ಎರಡು ತಾಸು ತೆಗೆದುಕೊಂಡರು ಪೂಜೆ ಮುಗಿಸಲು. ಪೂಜೆಯ ನಂತರ ನಾನು ಊಟ ಮಾಡುವುದಿಲ್ಲ ಬರೀ ನೈವೇದ್ಯ ಮಾತ್ರ ತೆಗೆದುಕೊಳ್ಳುತ್ತೇನೆ ಎಂದೇಳಿ, ಪೂಜೆಗೆ ಇಟ್ಟಿದ್ದ ನಾಲ್ಕು ಹೋಳಿಗೆ, ತುಪ್ಪ, ಪಾಯಸ ಮಾತ್ರ ಸವಿದರು. "ಈ ಪೂಜೆ ನೀವು ಬೇಗ ಮಾಡಿಸಿದ್ದು ಒಳ್ಳೆಯದಾಯಿತು ಜಾನಕಮ್ಮನವರೆ. ಕೆಲವರಿಗೆ ಎಷ್ಟು ಹೇಳಿದರೂ ಕೇಳುವುದಿಲ್ಲ. ಕೈ ಸುಟ್ಟ ಮೇಲೆ ನಮ್ಮ ನೆನಪಾಗುವುದು" ಎಂದ ದೇವಯ್ಯನವರ ಮಾತಿಗೆ ಸಂತೋಷಭರಿತರಾಗಿ ಜಾನಕಮ್ಮ ತನ್ನ ಯಜಮಾನರೊಂದಿಗೆ ದೇವಯ್ಯನವರ ಕಾಲಿಗೆರಗಿ ಆರ್ಶೀವಾದ ಪಡೆದರು.

ಮರೆತಿದ್ದೆ, ಈ ಪೂಜೆಗೆ ಇಟ್ಟ ನೈವೇದ್ಯದಲ್ಲಿ ಒಂದನ್ನು ನೀವು ಸ್ವೀಕರಿಸುವಂತಿಲ್ಲ. ನೀವು ಇಬ್ಬರು ಬಿಸಿ ಉಪಹಾರ ಮಾತ್ರ ತಿನ್ನಿ. ನೈವೇದ್ಯಕ್ಕೆ ಇಟ್ಟ ಎಲ್ಲಾವನ್ನು ಇದರಲ್ಲಿ ಹಾಕಿ ಎಂದು ತಾವೇ ತಂದಿದ್ದ ಎರಡು ದೊಡ್ಡ ಚೀಲಗಳನ್ನು ಕೊಟ್ಟರು ದೇವಯ್ಯನವರು. ಜಾನಕಮ್ಮ ಪತಿಯೊಂದಿಗೆ ಸೇರಿ ಎಲ್ಲ ಐದು ನಮೂನೆ ಡ್ರೈ ಪ್ರೂಟ್ಸಗಳನ್ನು, ಹನ್ನೊಂದು ನಮೂನೆ‌ ಹಣ್ಣುಗಳನ್ನು, ಒಣ ಕೊಬ್ಬರಿ ಬಟ್ಟಲುಗಳನ್ನು, ಎಲೆ ಅಡಕೆಯನ್ನು ದೇವಯ್ಯನವರು ಕೊಟ್ಟ ಚೀಲಕ್ಕೆ ಹಾಕಿ ನಮಸ್ಕರಿಸಿದರು. 

ಜಾನಕಮ್ಮನ ಮಗನು ದೇವಯ್ಯನವರ ಕಾರಿಗೆ ಅಕ್ಕಿ ಬೆಲ್ಲ ಬೇಳೆ ಎಣ್ಣೆಗಳನ್ನು ಇಟ್ಟು ಬಂದು ನಮಸ್ಕರಿಸಿದ. "ಒಳ್ಳೆಯದಾಗಲಿ ನಾನಿನ್ನು ಬರುವೆ ಎಂದು ಹೊರಟು ನಿಂತ ದೇವಯ್ಯನವರು, ಏನೋ ನೆನಪಾದವರಂತೆ ಜಾನಕಮ್ಮನ ಮಗನ ಕಡೆ ತಿರುಗಿ, ಇಲ್ಲಿ ಪೆಟ್ರೋಲ್ ಬಂಕ್ ಎಲ್ಲಿದೆ" ಎಂದರು. "ನಿಮ್ಮ ಕಾರಿನ ಟ್ಯಾಂಕ್ ಫುಲ್ ಮಾಡಿಸಿದ್ದೇನೆ ಸ್ಬಾಮಿಗಳೇ" ಎಂಬ ಮಾತು ಕಿವಿ ತಾಕಿದೊಡನೇ ಹರ್ಷಗೊಂಡ ದೇವಯ್ಯನವರು" ನಾಳೆ ಏಕನಾಥರ ಮನೆಪೂಜೆ, ನಾಡಿದ್ದು ದೇವಪ್ಪನವರ ಮನೆ, ನಾಡಿದ್ದು ಶಾಂತಮ್ಮರ ಮನೆ ಪೂಜೆ ಹೀಗೆ ಆದರೆ....." ಎಂದು ನಸುನಗುತ್ತಾ ಹೊರ ನಡೆದರು.

ಅಂದು ಸಂಜೆ "ನಕಲಿ ದೇವಯ್ಯನ ವಂಚನೆಗೆ ಮುಗ್ಧ ಜನರ ಬಲಿಯ ಕತೆ‌ ವ್ಯಥೆ" ಶೀರ್ಷಿಕೆಯಡಿ ಮೂಡಿಬಂದ ಟಿ.ವಿ ಪ್ರೋಗ್ರಾಮ್ನಲ್ಲಿ ದೇವಯ್ಯ ಎಂಬುವವನು ಪೂಜಾರಿ ವೇಷದಲ್ಲಿ ಮನೆ ಮನೆಗೆ ಬಂದು ತನ್ನ ಮಾತಿನ ಮರ್ಮದಿಂದ ಜನರಿಗೆ ಮಾಡುತ್ತಿದ್ದ ಮೋಸದ ಮುಖ ಕಂಡು ಜಾನಕಮ್ಮ ಕಣ್ಣಿರ ಹರಿಸುತ್ತಾ...... ಮೌನಕ್ಕೆ ಶರಣಾದಳು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ ವಿಜಯಪುರದ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.