ಮತದಾನ ನಮ್ಮೆಲ್ಲರ ಪವಿತ್ರ ಹಕ್ಕು: ಸಂತೋಷ ಬಂಡೆ

ಇಂಡಿ: ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಮತದಾನ ನಮ್ಮೆಲ್ಲರ ಜನ್ಮಸಿದ್ಧ ಹಕ್ಕಾಗಿದೆ. ಭಾರತದಲ್ಲಿ18 ವರ್ಷ ತುಂಬಿದ ಎಲ್ಲರಿಗೂ ಮತದಾನ ಮಾಡುವ ಹಕ್ಕನ್ನು ನೀಡಲಾಗಿದೆ. ಮತದಾನ ಮಾಡುವ ಮೂಲಕ ನಮ್ಮ ಸಂವಿಧಾನದ ಮಹತ್ವ ಉಳಿಸಿಕೊಳ್ಳಬೇಕೆಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಶುಕ್ರವಾರದಂದು ರಾಷ್ಟ್ರೀಯ ಮತದಾರರ ದಿನವನ್ನು ಉದ್ಘಾಟಿಸಿ ಮಾತನಾಡಿದರು.
ಮತದಾನ ಪವಿತ್ರವಾದ ಪ್ರಕ್ರಿಯೆ. ಇದು ನಮ್ಮ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಬೆಳವಣಿಗೆಗೆ ಎಲ್ಲರೂ ಒಟ್ಟಾಗಿ ಶ್ರಮಿಸಿ ದೇಶದ ಹಿತವನ್ನು ಕಾಯುವ ನಮ್ಮ ಸರಕಾರವನ್ನು ಆಯ್ಕೆ ಮಾಡುವ ಪವಿತ್ರ ಕಾರ್ಯ. ಎಲ್ಲರೂ ಮತದಾನದ ಮಹತ್ವ ಅರಿಯಬೇಕು ಎಂದು ಹೇಳಿದರು.
ಶಿಕ್ಷಕಿ ಎನ್ ಬಿ ಚೌಧರಿ ಮಾತನಾಡಿ, ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆ ಭಾರತಕ್ಕಿದೆ. ಪ್ರಜಾಪ್ರಭುತ್ವದ ಘನತೆ ಎತ್ತಿ ಹಿಡಿಯುವ ಸಲುವಾಗಿ ಮತದಾನದ ಹಕ್ಕನ್ನು ಎಲ್ಲರೂ ಚಲಾಯಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಎಸ್ ಎಸ್ ಅರಬ ಮಾತನಾಡಿ, ಭಾರತವು ಜಗತ್ತಿನಲ್ಲೇ ಬೃಹತ್ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದ ರಾಷ್ಟ್ರ. ವಿವಿಧತೆಯಲ್ಲಿ ಏಕತೆ, ಹಲವಾರು ಭಾಷೆ, ಜನಾಂಗ, ಸಂಸ್ಕೃತಿ, ಧರ್ಮವನ್ನು ಒಳಗೊಂಡಿದೆ. ದೇಶಕ್ಕೆ ಸುಭದ್ರ ಸರಕಾರ ಆಯ್ಕೆ ಮಾಡಲು ಮತದಾನ ಬಹುಮುಖ್ಯ ಎಂದು ಹೇಳಿದರು.
ಹಿರಿಯ ಶಿಕ್ಷಕಿ ಎಸ್ ಪಿ ಪೂಜಾರಿ, ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ ಸೇರಿದಂತೆ ಮಕ್ಕಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.