ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ : ಅಂದಾನೆಪ್ಪ ವಿಭೂತಿ

Jan 6, 2025 - 08:36
 0
ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ : ಅಂದಾನೆಪ್ಪ ವಿಭೂತಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ಗದಗ : ವಿಶ್ವದೆಲ್ಲೆಡೆ ಕರ್ನಾಟಕ ಹೆಸರಾಗಿದೆ, ಜೊತೆಗೆ ಕನ್ನಡ ನುಡಿ ಪ್ರತಿಯೊಬ್ಬ ಕನ್ನಡಿಗನ ಉಸಿರಾಗಬೇಕು, ಕನ್ನಡವನ್ನು ಪ್ರೀತಿಸಬೇಕು. ಯಾಕೆಂದರೆ ಕನ್ನಡ ನಮ್ಮ ನಾಡಿ ಮಿಡಿತ, ಹೃದಯದ ಬಡಿತ, ಮಾತ್ರು ಪ್ರೇಮದ ತುಡಿತ, ಹಾಗೂ ಬದುಕಿನ ದುಡಿತ, ಕನ್ನಡ ಪ್ರೀತಿಯೇ ಕನ್ನಡಿಗರಿಗೆ ಶಾಶ್ವತ ಎಂದು ವಿಭೂತಿ ಪತ್ರಿಕೆಯ ಸಂಪಾದಕ ಹಿರಿಯ ಸಾಹಿತಿ ಅಂದಾನೆಪ್ಪ ವಿಭೂತಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

 ಅವರು ದಿನಾಂಕ ೦೪ ಜನೆವರಿ ೨೦೨೫ ರಂದು ಬೆಳಿಗ್ಗೆ ೧೦ ಗಂಟೆಗೆ ಚಿಕ್ಕಟ್ಟಿ ಶಾಲೆಯ ಸಭಾಭವನದಲ್ಲಿ, ಉತ್ತರ ಕರ್ನಾಟಕ ಕಲಾವಿದರ ಹಾಗೂ ಕಲಾ ಪೋಷಕರ ಸಂಘಟನೆಯಾದ ಕಲಾ ವಿಕಾಸ ಪರಿಷತ್ (ರಿ) ಗದಗ ಮತ್ತು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಮತ್ತು ಸಂಸ್ಕೃತಿ ಸಂಭ್ರಮ-೨೦೨೫ ಸಮಾರಂಭಲ್ಲಿ ಹೆಸರಾಯಿತು ಕರ್ನಾಟಕ ಎನ್ನುವ ವಿಷಯದ ಮೇಲೆ ಉಪನ್ಯಾಸ ನೀಡಿದರು. ಕರ್ನಾಟಕ ಏಕೀಕರಣ ಹೋರಾಟದ ಮಜಲುಗಳನ್ನು ಮೆಲುಕು ಹಾಕುತ್ತಾ ಹೋರಾಟಗಾರರ ತ್ಯಾಗದ ಬದುಕನ್ನು ಸ್ಮರಿಸಿದರು. 

 ಕಲಾ ವಿಕಾಸ ಪರಿಷತ್ ಪೋಷಕರಾದ ಡಾ. ಜಿ ಬಿ ಪಾಟೀಲರು ಮಾತನಾಡಿ ಕನ್ನಡ ದಿಗ್ಗಜ ಸಾಹಿತಿಗಳನ್ನು ಮತ್ತು ಅವರ ಸಾಂಸ್ಕೃತಿಕ ಪ್ರೀತಿಯನ್ನು ನೆನಪಿಸಿದರು ಕಲಾವಿಕಾಸ ಪರಿಷತ್ ನ ನಾಡ ನುಡಿಯ ಸೇವೆಯನ್ನು ಸ್ಮರಿಸಿಕೊಂಡರು. ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕಲಾ ವಿಕಾಸ ಪರಿಷತ್ ನ ಹಿತೈಸಿಗಳೂ ಆದ ಖ್ಯಾತ ವೈದ್ಯ ಡಾ. ಜಿ ಬಿ ಬೀಡಿನಹಾಳ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಕ್ಕೆ ಉತ್ತರಿಸಿದ ಡಾ. ಬೀಡಿನಹಾಳರು ತಮ್ಮ ಬಾಲ್ಯದ ಬಡತನವನ್ನು ಬಿಚ್ಚಿಟ್ಟು ಪಟ್ಟ ಪರಿಶ್ರಮ ಮತ್ತು ತಂದೆ ತಾಯಿಗಳ ದೂರದೃಷ್ಟಿಯನ್ನು ಸ್ಮರಿಸಿಕೊಂಡರು. ಕೃಷಿ ಮತ್ತು ಕ್ರೀಡೆಯ ಆಸಕ್ತಿ ಮತ್ತು ಪ್ರೀತಿಯನ್ನು ಹಂಚಿಕೊAಡರು ಮಾತ್ರವಲ್ಲದೇ ತಮ್ಮ ಸಾಧನೆಗೆ ತಮ್ಮ ತಂದೆ ತಾಯಿಗಳೆ ಕಾರಣ ಈ ಗೌರವವನ್ನು ನನ್ನ ತಂದೆ ತಾಯಿಗಳಿಗೆ ಅರ್ಪಿಸುತ್ತಿದ್ದೇನೆ ಎಂದು ಹೇಳಿದರು. 

 ಅಧ್ಯಕ್ಷೀಯ ಭಾಷಣ ಮಾಡಿದ ಭಾರತೀಯ ಶಿಕ್ಷಣ ಸಂಸ್ಥೆಯ ಪ್ರೊ. ಡಾ. ಎಸ್. ವಾಯ್ ಚಿಕ್ಕಟ್ಟಿ ಅವರು ಕಲಾವಿಕಾಸ ಪರಿಷತ್ತಿನೊಂದಿಗಿನ ಬಹುವರ್ಷಗಳ ಸಾಂಸ್ಕೃತಿಕ ನಂಟನ್ನು ನೆನಪು ಮಾಡಿಕೊಂಡರು. ಪ್ರಾಸ್ತಾವಿಕವಾಗಿ ಮಾತನಾಡಿದ ಕಲಾವಿಕಾಸ ಪರಿಷತ್ ಸಂಸ್ಥಾಪಕ ಕರ‍್ಯಾಧ್ಯಕ್ಷ ಸಿ. ಕೆ. ಎಚ್. ಕಡಣಿ ಶಾಸ್ತ್ರಿಗಳು ಕಲಾ ವಿಕಾಸ ಪರಿಷತ್ತು ನಡೆದು ಬಂದ ದಾರಿ ಮತ್ತು ೨೦೨೫ ನೆಯ ಸಾಲಿನಲ್ಲಿ ಹಮ್ಮಿಕೊಳ್ಳಲಿರುವ ಕಾರ್ಯಕ್ರಮಗಳ ಮಾಹಿತಿ ನೀಡಿದರು. ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಅಧ್ಯಕ್ಷ ಪಂ. ಫಕೀರೇಶ್ವರ ಶಾಸ್ತ್ರಿಗಳು ಹಿರೇಮಠ (ಬೆಳ್ಳಟ್ಟಿ) ವೇದಿಕೆಯಲ್ಲಿ ಇದ್ದರು. ಕನ್ನಡ ಉಪನ್ಯಾಸಕ ಸಾಹಿತಿ ಶ್ರೀಶೈಲ ಬಡಿಗೇರ ಅವರು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಹೇಮಾ ವೆಂಕಟೇಶ ಆಲ್ಕೋಡ ಇವರಿಂದ ಸುಗಮ ಸಂಗೀತ, ಗವಿಸಿದ್ಧಯ್ಯ ಹಳ್ಳಿಕೇರಿಮಠ ಇವರಿಂದ ಜಾನಪದ ಹಾಡುಗಾರಿಕೆ, ಪಾಪನಾಸಿಯ ಸುಧಾ ಪಾಟೀಲ್ ತಂಡದವರಿAದ ಯೋಗ ಪ್ರದರ್ಶನ ಹಾಗೂ ಚಿಕ್ಕಟಿ ಸಮೂಹ ಶಾಲೆಯ ಮಕ್ಕಳಿಂದ ಭರತ ನಾಟ್ಯ ಜಾನಪದ ನೃತ್ಯ ಪ್ರದರ್ಶನಗಳು ನಡೆದವು

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ ವಿಜಯಪುರದ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.