ಅನಾವರಣವಾಯಿತು "ಬೇಗೂರು ಕಾಲೋನಿ" ಚಿತ್ರದ "ಜೈ ಭೀಮ್" ಗೀತೆ

Jan 27, 2025 - 13:24
 0
ಅನಾವರಣವಾಯಿತು "ಬೇಗೂರು ಕಾಲೋನಿ" ಚಿತ್ರದ "ಜೈ ಭೀಮ್" ಗೀತೆ

 "ಬಿಗ್ ಬಾಸ್" ಖ್ಯಾತಿಯ ರಾಜೀವ ಹನು ಅಭಿನಯದ ಈ  ಚಿತ್ರ ಜನವರಿ 31 ರಂದು ತೆರೆಗೆ

ಶ್ರೀಮಾ ಸಿನಿಮಾಸ್ ಲಾಂಛನದಲ್ಲಿ ಎಂ ಶ್ರೀನಿವಾಸ್ ಬಾಬು ಅವರು ನಿರ್ಮಿಸಿರುವ, ಫ್ಲೈಯಿಂಗ್ ಕಿಂಗ್ ಮಂಜು ನಿರ್ದೇಶನದ ಹಾಗೂ "ಬಿಗ್ ಬಾಸ್" ಖ್ಯಾತಿಯ ರಾಜೀವ್ ಹನು ನಾಯಕರಾಗಿ ನಟಿಸಿರುವ "ಬೇಗೂರು ಕಾಲೋನಿ" ಚಿತ್ರಕ್ಕಾಗಿ ಡಾ||ವಿ.ನಾಗೇಂದ್ರಪ್ರಸಾದ್ ಬರೆದಿರುವ "ಜೈ ಭೀಮ್" ಹಾಡು ಗಣರಾಜ್ಯೋತ್ಸವದ ಸಂದರ್ಭದಲ್ಲಿ‌ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಅಭಿನಂದನ್ ಕಶ್ಯಪ್ ಸಂಗೀತ ನೀಡಿರುವ ಈ ಹಾಡನ್ನು ಹೆಸರಾಂತ ಗಾಯಕ ಶಂಕರ್ ಮಹಾದೇವನ್ ಹಾಡಿದ್ದಾರೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. 

"ಬೇಗೂರ್ ಕಾಲೋನಿ" ಒಂದು ಹೋರಾಟದ ಕಥೆ. ಕಾಲೋನಿಲ್ಲಿರುವ ಮಧ್ಯಮವರ್ಗದ ಜನರ ಕಥೆಯೂ ಹೌದು. ಇಲ್ಲಿ ಹೋರಾಟ ನಡೆಯುವುದು ಆಟದ ಮೈದಾನಕ್ಕಾಗಿ. ಮೈದಾನಗಳೆಲ್ಲಾ ಮನೆಗಳಾಗುತ್ತಿದೆ. ಮಕ್ಕಳಿಗೆ ಆಡಲು ಜಾಗವಿಲ್ಲದ ಹಾಗೆ ಆಗಿದೆ.‌ ಈ ಅಂಶವನ್ನು ಪ್ರಮುಖವಾಗಿಟ್ಟುಕೊಂಡು ಕಥೆ ಹೆಣೆಯಲಾಗಿದೆ. ಈ ಕಾಲೋನಿಯಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತ ಹೀಗೆ ಎಲ್ಲಾ ಜನಾಂಗದವರು ವಾಸಿಸುತ್ತಿರುತ್ತಾರೆ. ಈ ಕಾಲೋನಿ ಸಾಮರಸ್ಯದ ಸಂಕೇತ ಎಂದರೆ ತಪ್ಪಾಗಲಾರದು. ಇಂತಹ‌ ವಿಭಿನ್ನ ಕಥೆಯುಳ್ಳ ಸಿನಿಮಾದಿಂದ ಸಾಮರಸ್ಯ ಸಾರುವ ಹಾಡೊಂದನ್ನು ಗಣರಾಜ್ಯೋತ್ಸವದ ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದ್ದೇವೆ. ವಿ.ನಾಗೇಂದ್ರ ಪ್ರಸಾದ್ ಅವರು ಅದ್ಭುತ ಸಾಹಿತ್ಯ, ಅಭಿನಂದನ್ ಕಶ್ಯಪ್ ಸಂಗೀತ ನಿರ್ದೇಶನ ಹಾಗೂ ಶಂಕರ್ ಮಹಾದೇವನ್ ಅವರ ಅಮೋಘ ಗಾಯನದಲ್ಲಿ ಈ ಹಾಡು ಮೂಡಿಬಂದಿದೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಹಾಗೂ ಟ್ರೇಲರ್ ಜನರ ಮನಸ್ಸಿಗೆ ಹತ್ತಿರವಾಗಿದೆ. ನಮ್ಮ ಚಿತ್ರ ಇದೇ‌ ಜನವರಿ 31 ರಂದು ಬಿಡುಗಡೆಯಾಗಲಿದೆ.‌ ನೋಡಿ. ಪ್ರೋತ್ಸಾಹ ನೀಡಿ ಎಂದರು ನಿರ್ದೇಶಕ ಫ್ಲೈಯಿಂಗ್ ಕಿಂಗ್ ಮಂಜು.

ಇಂದು ಬಿಡುಗಡೆಯಾಗಿರುವ "ಜೈ ಭೀಮ್" ಹಾಡು ಬಹಳ ಚೆನ್ನಾಗಿದೆ ಎಂದು ಮಾತನಾಡಿದ ನಾಯಕ ರಾಜೀವ್  ಹನು, ನಿರ್ದೇಶಕರು ಹೇಳಿದ ಹಾಗೆ ಇದು ಹೋರಾಟದ ಕಥೆ. ಈ ಹೋರಾಟ ಬೇರೆ ಯಾವುದಕ್ಕೂ ಅಲ್ಲ. ಆಟದ ಮೈದಾನಕ್ಕಾಗಿ. ಮಕ್ಕಳಿಗೆ ಪಾಠದಷ್ಟೇ ಆಟ ಕೂಡ ಮುಖ್ಯ. ಆದರೆ ಮಕ್ಕಳು ಆಟವಾಡಲು ಈಗ ಮೈದಾನಗಳು ಹೆಚ್ಚು ಇಲ್ಲ. ಇರುವ ಮೈದಾನಗಳನ್ನಾದರೂ ಉಳಸಿಕೊಳ್ಳುವ ಪ್ರಯತ್ನ ಆಗಬೇಕು. ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ರಾಘವ. ನಿರ್ದೇಶಕರು ಸಹ ಶಿವ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ನಿರ್ಮಾಪಕ ಶ್ರೀನಿವಾಸ ಬಾಬು ಅವರು ಯಾವುದೇ ಕೊರತೆ ಬಾರದ ಹಾಗೆ ಚಿತ್ರ ನಿರ್ಮಾಣ ಮಾಡಿದ್ದಾರೆ . ಚಿತ್ರತಂಡದ ಸಹಕಾರದಿಂದ ನಮ್ಮ ಚಿತ್ರ ಉತ್ತಮವಾಗಿ ಮೂಡಿಬಂದಿದೆ ಎಂದರು.

ಹಾಡಿನ ಬಗ್ಗೆ ಅಭಿನಂದನ್ ಕಶ್ಯಪ್ ಮಾಹಿತಿ ನೀಡಿದರು. ಸಂಕಲಕಾರ ಪ್ರಮೋದ್ ತಲ್ವಾರ್, ಛಾಯಾಗ್ರಾಹಕ ಕಾರ್ತಿಕ್ ಎಸ್ ಹಾಗೂನಟಿಯರಾದ ಪಲ್ಲವಿ ಪರ್ವ, ಕೀರ್ತಿ ಭಂಡಾರಿ,  ಪೋಸಾನಿ ಕೃಷ್ಣ ಮುಂತಾದವರು "ಬೇಗೂರ್ ಕಾಲೋನಿ" ಬಗ್ಗೆ ಮಾತನಾಡಿದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.